
ಹುಬ್ಬಳ್ಳಿ,ಏ18: ಕೆಲವೇ ಕೆಲ ವ್ಯಕ್ತಿಗಳು ಬಿಜೆಪಿಯನ್ನು ತಮ್ಮ ಕಪಿಮುಷ್ಠಿಯಲ್ಲಿರಿಸಿಕೊಂಡಿದ್ದು ಇದರ ಒಳಸುಳಿಯ ಬೆಂಕಿ ಬರೀ ಹುಬ್ಬಳ್ಳಿಯಲ್ಲಷ್ಟೇ ಅಲ್ಲ ಪಕ್ಕದ ಬೆಳಗಾವಿ, ಹಾವೇರಿ, ಅಲ್ಲದೇ ಇಡೀ ರಾಜ್ಯಕ್ಕೇ ಹಬ್ಬಲಿದೆ. ಇದನ್ನು ಹಾಗೇ ಬಿಟ್ಟರೆ ಬಿಜೆಪಿ ಇನ್ನೂ ಹೆಚ್ಚಿನ ಹಾನಿ ಅನುಭವಿಸಲಿದೆ ಎಂದು ಕಮಲ ತೊರೆದು ಕೈ ಹಿಡಿದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಮ್ಮ ಬಿಜೆಪಿ ತೊರೆಯುವುದರ ಹಿಂದಿನ ಕಾರಣವನ್ನು ಕೊನೆಗೂ ಸ್ಪೋಟಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮಗಳೆದುರು ತಾವು ಇಷ್ಟುದಿನ ಆಂತರ್ಯದಲ್ಲಿ ಅದುಮಿರಿಸಿಕೊಂಡಿದ್ದ ವೇದನೆಯನ್ನು ಎಳೆ ಎಳೆಯಾಗಿ ಅವರು ಬಿಡಿಸಿಟ್ಟರು.
ಇಷ್ಟು ವರ್ಷಗಳ ಕಾಲ ಪಕ್ಷದಲ್ಲಿ ಸೇವೆ ಸಲ್ಲಿಸಿದ ತಮಗೆ ಟಿಕೆಟ್ ನಿರಾಕರಿಸುವುದರ ಹಿಂದಿರುವುದು ಒಬ್ಬರೇ ವ್ಯಕ್ತಿ, ಅದುವೇ ಬಿ.ಎಲ್ ಸಂತೋಷ ಎಂದವರು ಗಂಭೀರವಾಗಿ ಆರೋಪಿಸಿದರು.
ತಮ್ಮ ಮಾನಸಪುತ್ರ ಮಹೇಶ ಟಿಂಗಿನಕಾಯಿಗೆ ಟಿಕೆಟ್ ದೊರಕಿಸಲು ಬಿ.ಎಲ್. ಸಂತೋಷ ನನ್ನನ್ನು ವ್ಯವಸ್ಥಿತವಾಗಿ ಹೊರಕಳಿಸುವ ಸಂಚು ಮಾಡಿದರು ಎಂದು ಶೆಟ್ಟರ್ ನೋವಿನಿಂದ ಹೇಳಿದರು.
ಬಿಜೆಪಿ-ಜನಸಂಘದ ಸಂಬಂಧ ನಮ್ಮ ಕುಟುಂಬಕ್ಕೆ ಹೇಗಿತ್ತು ಎಂಬುದನ್ನು ಪದೇ ಪದೇ ಹೇಳುವ ಅಗತ್ಯವಿಲ್ಲ, ಒಂದು ಕಪ್ಪು ಚಿಕ್ಕೆಯೂ ಇರದ, ಯಾವುದೇ ಆರೋಪಗಳಿರದ, ರೈತರ ಸಾಲ ಮನ್ನಾ, ದಿನಗೂಲಿ ನೌಕರರ ಖಾಯಮಾತಿ ಇತ್ಯಾದಿ ಉತ್ತಮ ಕಾರ್ಯಗೈದ ತಮ್ಮನ್ನು ಅವಕಾಶವಾದಿ',
ಅಧಿಕಾರ ಲಾಲಸೆಗೆ ಪಕ್ಷ ಬಿಟ್ಟರು’ ಎಂದು ಟೀಕಿಸುವುದು ಸರಿಯೇ? ಎಂದವರು ಕೇಳಿದರು.
ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾದ ನಂತರ ಎರಡು ವರ್ಷಗಳ ಕಾಲ ಯಾವುದೇ ಅಧಿಕಾರವಿಲ್ಲದೇ ಶಾಸಕನಾಗಿ ಕೆಲಸ ಮಾಡಿದೆ, ಹಿಂದೆ ನಾಲ್ಕೈದು ಜನ ಕಾರ್ಯಕರ್ತರಿರದಿದ್ದರೂ ಹಳ್ಳಿ ಹಳ್ಳಿಗೆ ತಿರುಗಿ ಗ್ರಾಮಮಟ್ಟದಲ್ಲಿ ಪಕ್ಷ ಸಂಘಟಿಸಿದೆ. ಈ ಎಲ್ಲ ಸೇವೆಯನ್ನು ನಿರ್ಲಕ್ಷಿಸಿದ್ದು ಯಾವ ನ್ಯಾಯ? ಎಂದವರು ಪ್ರಶ್ನಿಸಿದರು.
ಕ್ಷೇತ್ರದ ಟಿಕೆಟ್ ಪಡೆಯುವುದು ಮಾತ್ರ ಒಂದು ವಿಷಯವಲ್ಲ, ಆದರೆ ಅದು ಮರ್ಯಾದೆಯ ಪ್ರಶ್ನೆ ಎಂದ ಅವರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾದಾಗಲೂ ಕೇಳಿದ್ದು ತಮ್ಮನ್ನು ಗೌರವಯುತವಾಗಿ ಹೊರಗೆ ಕಳಿಸಿ ಎಂದು, ನಾಲ್ಕೈದು ದಿನ ಮೊದಲು ವಸ್ತುಸ್ಥಿತಿ ಹೇಳಿದ್ದರೆ ಹೃದಯಪೂರ್ವಕವಾಗಿ ಅವರು ಹೇಳಿದಂತೆ ಒಪ್ಪಿಕೊಳ್ಳುತ್ತಿದ್ದೆ ಇಷ್ಟೊಂದು ತಂತ್ರಗಳನ್ನು ಮಾಡಬೇಕಿರಲಿಲ್ಲ ಎಂದು ಶೆಟ್ಟರ್ ಗುಡುಗಿದರು.
ತಮಗೆ ಬೇಕಾಗ ಒಬ್ಬ ವ್ಯಕ್ತಿಗೆ ಟಿಕೆಟ್ ಕೊಡಿಸುವ ಸಲುವಾಗಿ ಈ ರೀತಿ ಅವಮಾನ ಮಾಡಬೇಕಿತ್ತೇ? ಬಿಜೆಪಿಯನ್ನು ಕಪಿಮುಷ್ಠಿಯಲ್ಲಿರಿಸಿಕೊಂಡಿರುವ ಬಿ.ಎಲ್. ಸಂತೋಷ ಈ ಎಲ್ಲ ವಿದ್ಯಮಾನಗಳ ಹಿಂದಿನ ಸೂತ್ರಧಾರ ಎಂದು ಅವರು ಹೇಳಿದರು.