ನನಗೆ ಕನ್ನಡ ಅನ್ನ ಕೊಟ್ಟಿದೆ: ವೆಂಕಟಗಿರಿ ದಳವಾಯಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:, ಮಾ.02: ನನ್ನದು ಮಾತೃಭಾಷೆ ತೆಲುಗು, ಆದರೆ ಪಿತೃ ಭಾಷೆ ಕನ್ನಡ ನನಗೆ ಅನ್ನ ನೀಡಿದೆ ಎಂದು ಹಂಪಿ ಕನ್ನಡ ವಿವಿಯ ಪ್ರಾಧ್ಯಾಪಕರ ಡಾ.ವೆಂಕಟಗಿರಿ ದಳವಾಯಿ ಹೇಳಿದರು.
ಅವರು ನಗರದ ರಾಘವ ಕಲಾ ಮಂದಿರದಲ್ಲಿ ನಡೆದ 22 ನೇ ಅಖಂಡ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಬಳ್ಳಾರಿ ಜಿಲ್ಲೆಯ ಸಾಹಿತ್ಯ, ಸಾಂಸ್ಕೃತಿಕ ವೈಶಿಷ್ಟ್ಯಗಳ 5 ನೇ ಗೋಷ್ಟಿಯ ಅಧ್ಯಕ್ಷತೆವಹಿಸಿ‌  ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಕನ್ನಡ ಮತ್ತು ತೆಲುಗು ಭಾಷೆಯ ನಡುವೆ ಅನೇಕ ಸಂದರ್ಭದಲ್ಲಿ ಸಂಘರ್ಷಗಳು ನಡೆದಿವೆ, ಭಾಷೆಯ ಹೆಸರಲ್ಲಿಯೇ 1956 ರಲ್ಲಿ ಚುನಾವಣೆ ನಡೆಯಿತು. ಆಗ ಕನ್ನಡದ ಪರವಾಗಿ ಸ್ಪರ್ಧೆ ಮಾಡಿದ್ದ ಸಣ್ಣ ಬಸವನಗೌಡ ಅವರಿಗೆ ಜಯವಾಗುತ್ತದೆ. ತೆಲುಗಿನ ಪರ ನಿಂತಿದ್ದ ಮುಂಡ್ಲೂರು ಗಂಗಪ್ಪ ಸೋಲುತ್ತಾರೆ. ಹೀಗಾಗಿ ನಂತರ ಕನ್ನಡಕ್ಕೆ ತನ್ನದೇ ಆದ್ಯತೆ ದೊರೆಯುತ್ತದೆ. ಹಾಗಾಗಿ ನಮ್ಮ ತಂದೆ ಮೊದಲ ಇಬ್ಬರು ಮಕ್ಕಳಿಗೆ ತೆಲುಗು ಶಾಲೆಗೆ ಹಾಕಿದವರು ನಂತರದ ಐದುಜನ ಮಕ್ಕಳಿಗೆ ಕನ್ನಡ ಶಾಲೆಗೆ ಕಳಿಸಿದರು. ಕನ್ನಡ ಶಾಲೆಯ ಶಿಕ್ಷಣವೇ ನಮಗೆ ಅನ್ನ ನೀಡಿದೆ ಎಂದರು.
ಬಳ್ಳಾರಿಯಲ್ಲಿ ನಡೆದ ಭಾಷೆಯ ಚುನಾವಣೆಯಂತಹ  ಸಂಘರ್ಷಗಳ ಬಗ್ಗೆ ನಮಗೆ ಅರಿವು ಇರಬೇಕು.
ವಚನಕಾರರ ಅನೇಕ ವಚನಗಳು ಲಭ್ಯ ಇವೆ. ಅಲ್ಲಿಯೂ ವೈರುದ್ಯಗಳು ಇದ್ದವು ಇದರಿಂದಾಗಿ ಕೆಳವರ್ಗದ ವಚನಕಾರರ ಲಭ್ಯ ಇಲ್ಲದಂತಾಗಿದೆ. ಇಂತಹ ಕಾರಣದಿಂದಲೇ ಬಂಡಾಯದ ಸಾಹಿತ್ಯ ಮುನ್ನೆಲೆಗೆ ಬಂತು ಎಂದರು.
ಬಳ್ಳಾರಿಯಲ್ಲಿ ಜಾನ್ ಹ್ಯಾಂಡ್ ಮಾಡಿದ ಕೆಲಸ ಅದ್ವಿತೀಯವಾದುದು. ಅವರು ಮೊದಲ‌ ಕನ್ನಡ ಶಾಲೆ ಆರಂಭಿಸಿದರು. ಹೆಣ್ಣು ಮಕ್ಕಳಿಗಾಗಿ ಶಾಲೆ ಅರಂಭಿಸಿದರು ಇವರು ನಮಗೆ ಪ್ರಾತಃಸ್ಮರಣೀಯರಾಗಿದ್ದಾರೆ‌ ಎಂದರು.
ಬಳ್ಳಾರಿ ಚರಿತ್ರೆಯಲ್ಲಿ   ವೈ.ನಾಗೇಶ್ ಶಾಸ್ತ್ರಿಗಳು ಸಹ ನಮಗೆ ಮುಖ್ಯವಾಗುತ್ತಾರೆಂದರು. ರಾಘವರ ನಟನೆ, ದೊಡ್ಡನಗೌಡರ ಗಮಕ ಮರೆಯಲಾರದಂತುಹುದು ಎಂದರು. 
ಆಶಯ ನುಡಿಗಳನ್ನಾಡಿದ ಡಾ.ಸುಧಾ ಚಿದಾನಂದಗೌಡ ಅವರು. ಬಂಡಾಯ ಸಾಹಿತ್ಯದ ಮೊದಲ ಸಮ್ಮೇಳನ ಬಳ್ಳಾರಿಯಲ್ಲಿ ನಡೆಯಿತು. ಜಿಲ್ಲೆಯ ಸಾಂಸ್ಕೃತಿಕ ಲೋಕವನ್ನು ಸ್ಮರಿಸುವಾಗ ಇಲ್ಲಿನ ಜನಪದ ಕಲೆ, ತಳವರ್ಗದ ಜನತೆಯ ಬೇಸರವನ್ನು ಕಳೆಯಲು ಜನ್ಮ ತಳೆದವು, ಅಧುನಿಕವಾದ ಮಾಧ್ಯಮಗಳಿಂದ ಜನಪದ ಕಲೆಗಳಿಗೆ ಕುತ್ತು ಬರತೊಡಗಿದೆ. ಅವುಗಳ  ಸಂರಕ್ಷಣೆ ಆಗಬೇಕಿದೆ ಎಂದರು.
ಅಖಂಡ ಬಳ್ಳಾರಿ ಜಿಲ್ಲೆಯ ಲೇಖಕರು, ಸಾಹಿತಿಗಳು, ರಂಗಭೂಮಿ ಕಲಾವಿದರು, ಸಿನಿಮಾ ನಟರು, ಜನಪ್ರತಿನಿಧಿಗಳಾದ ಎಂಪಿ.ಪ್ರಕಾಶ್, ಆರ್, ನಾಗನಗೌಡ,  ಬೀಚಿ, ರೆವರೆಂಡ್ ಉತ್ತಂಗಿ ಚೆನ್ನಪ್ಪ, ವ್ಯಾಕರಣ ಚಂದ್ರಶೇಖರ ಶಾಸ್ತ್ರಿಗಳು, ಬಳ್ಳಾರಿ ರಾಘವ, ಡಾ.ಜೋಳದರಾಶಿ ದೊಡ್ಡನಗೌಡ, ಕುಂವಿ, ಕೋ.ಚೆನ್ನಬಸಪ್ಪ, ದರೋಜಿ ಈರಮ್ಮ, ಪತ್ರಕರ್ತ ರವಿ ಬೆಳಗೆರೆ,  ಸುಭದ್ರಮ್ಮ‌ಮನ್ಸೂರು, ಬೆಳಗಲ್ಲು ವೀರಣ್ಣ,  ನಟಿ ಜಯಂತಿ, ಹೊರದೇಶಗಳ ಬ್ರೂಸ್ ಪ್ರೂಟ್, ಮೊದಲಾದವರ ಸಾಧನೆಗಳ ಬಗ್ಗೆ ಸಂಕ್ಷಿಪ್ತ  ಮಾಹಿತಿ ನೀಡಿ ಸ್ಮರಿಸಿದರು.
ಕನ್ನಡ ಚಲನ ಚಿತ್ರರಂಗದಲ್ಲಿ ಬಳ್ಳಾರಿ ಸೀಮೆ ಕುರಿತು ನಿಮಗಾಗಿ‌ನಾವು ಸಂಸ್ಥೆಯ ಪ್ರವೀಣ್ ಕುಮಾರ್ ಜಿ ಮಾತನಾಡಿ, ಜಿಲ್ಲೆಯಲ್ಲಿ ಚಿತ್ರೀಕರಣಗೊಂಡ, ಜಿಲ್ಲೆಯವರೇ ನಿರ್ಮಿಸಿದ ಸಿನಿಮಾಗಳು, ನಿರ್ಮಾಕರು, ನಿರ್ದೇಶಕರು ಬಗ್ಗೆ ವಿವರಿಸಿದರು.
ಗೋಷ್ಟಿಯಲ್ಲಿ ಸಮ್ಮೇಳನದ ಅಧ್ಯಕ್ಷ ಡಾ.ಅರವಿಂದ ಪಾಟೀಲ್, ಸೊಂತಾಗಿರಿಧರ್, ಈಶ್ವರಗೌಡ, ಬಿ.ಪಂಪನಗೌಡ, ಟಿ.ಮಲ್ಲಿಕಾರ್ಜುನ, ಲಕ್ಷ್ಮೀ ಪವನ್ ಕುಮಾರ್ ಮೊದಲಾದವರು ಇದ್ದರು.