ನನಗೂ ಬೆಂಗಳೂರಿಗೂ ಇರುವ ಸಂಬಂಧ ಅಶ್ವತ್ಥ್‌ಗೆ ಗೊತ್ತಿಲ್ಲ:ಡಿಕೆಶಿ ತಿರುಗೇಟು

ಬೆಂಗಳೂರು,ಜೂ.೨೭:ತಮಗೂ ಬೆಂಗಳೂರಿಗೆ ಇರುವ ಸಂಬಂಧದ ಇತಿಹಾಸದ ಬಗ್ಗೆ ಗೊತ್ತಿಲ್ಲ. ಅದಕ್ಕಾಗಿಯೇ ಅವರು ನನ್ನ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಶಾಸಕ ಅಶ್ವತ್ಥ ನಾರಾಯಣ ಅವರಿಗೆ ಬಹಿರಂಗವಾಗಿಯೇ ತಿರುಗೇಟು ನೀಡಿದ್ದಾರೆ.ನನಗೂ ಬೆಂಗಳೂರಿಗೂ ಇರುವ ಸಂಬಂಧದ ಬಗ್ಗೆ ಅವರು ತಿಳಿದುಕೊಳ್ಳಲಿ ಎಂದು ಕೆಂಪೇಗೌಡ ಉತ್ಸವ ಕಾರ್ಯಕ್ರಮದಲ್ಲೇ ಹೇಳಿದ್ದಾರೆ. ನಾನು ೬ನೇ ವಯಸ್ಸಿಗೆ ಶಿಕ್ಷಣಕ್ಕಾಗಿ ನಮ್ಮೂರಿನಿಂದ ಬೆಂಗಳೂರಿಗೆ ಬಂದೆ. ರಾಜಾಜಿನಗರದ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ನನ್ನ ವಿದ್ಯಾಭ್ಯಾಸ ಆರಂಭಿಸಿದ್ದನ್ನು ಮೆಲುಕು ಹಾಕಿದರು.ತಮಿಳುನಾಡಿನ ಗಡಿಭಾಗ ಸಂಗಮದ ಬಳಿ ಕೆಂಪೇಗೌಡರ ಕೋಟೆ ಇದೆ. ಈ ಕೋಟೆಯ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಇದರ ಬಳಿಯೇ ದಿವಂಗತ ಮುಖ್ಯಮಂತ್ರಿ ನಿಜಲಿಂಗಪ್ಪರವರ ಮನೆ ಪಕ್ಕದಲ್ಲೇ ದಿವಂಗತ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ನಿವಾಸವಿದ್ದು, ಅದರ ಪಕ್ಕದಲ್ಲೇ ತಮ್ಮ ತಂದೆ ದೊಡ್ಡ ಆಲಹಳ್ಳಿ ಕೆಂಪೇಗೌಡರ ಮನೆಯಿತ್ತು. ಈಗ ಅದನ್ನು ಮಾರಾಟ ಮಾಡಿದ್ದೇನೆ. ಇದು ತಮಗೂ ಕೆಂಪೇಗೌಡ ಕಟ್ಟಿದ ಬೆಂಗಳೂರಿಗೆ ಇರುವ ಸಂಬಂಧವನ್ನು ಮನವರಿಕೆ ಮಾಡಿಕೊಟ್ಟರು.ರಾಜ್ಯಾದ್ಯಂತ ಇಂದು ಕೆಂಪೇಗೌಡರ ಜಯಂತಿಯನ್ನು ಆಚರಿಸುತ್ತಿದ್ದೇವೆ. ಮಾಜಿ ಸಚಿವ ಅಶೋಕ್ ಅವರ ಮುಂದಾಳತ್ವದಲ್ಲಿ ಬೆಂಗಳೂರಿನ ಎಲ್ಲ ವಾರ್ಡ್‌ಗಳಲ್ಲಿ ಕೆಂಪೇಗೌಡರ ಜಯಂತಿ ಆಚರಿಸಲಾಗಿತ್ತು. ಈಗ ತಾವು ಜಯಂತಿಯನ್ನು ರಾಜ್ಯಾಧ್ಯಂತ ವಿಸ್ತರಿಸಿದ್ದೇವೆ ಎಂದರು.

ಬೆಂಗಳೂರಿನ ಸದಾಶಿವನಗರದ ರಮಣ ಮಹರ್ಷಿ ಪಾರ್ಕ್‌ನಲ್ಲಿ ಮಂಗಳವಾರ ಏರ್ಪಡಿಸಿದ್ದ ಕೆಂಪೇಗೌಡ ಉತ್ಸವದಲ್ಲಿ ಶ್ರೀ ಆದಿ ಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ, ಡಿಸಿಎಂ ಡಿ ಕೆ ಶಿವಕುಮಾರ್, ಶಾಸಕರಾದ ಅಶ್ವಥ್ ನಾರಾಯಣ್, ಮುನಿರಾಜು, ಶ್ರೀ ಆದಿ ಚುಂಚನಗಿರಿ ಶಾಖಾಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ, ವಿಜಯ ಕರ್ನಾಟಕ ಸಂಪಾದಕ ಸುದರ್ಶನ್ ಚನ್ನಂಗಿಹಳ್ಳಿ, ರಾಜ್ಯ ಒಕ್ಕಲಿಗರ ಮಹಾಸಭಾ ಅಧ್ಯಕ್ಷ ಎ.ಎಚ್ ಅನಂದ್ ಮತ್ತಿತರರು ಭಾಗವಹಿಸಿದ್ದರು.

ಕೆಂಪೇಗೌಡ ಪ್ರಾಧಿಕಾರ ಸಭೆಯಲ್ಲಿ ಶೇ. ೭೫ಕ್ಕಿಂತ ಹೆಚ್ಚು ಒಕ್ಕಲಿಗರಿದ್ದಾರೆ. ಇದನ್ನು ನೋಡಿ ತಮಗೆ ನಾಚಿಕೆಯಾಯಿತು. ಕೆಂಪೇಗೌಡರು ಒಂದು ಸಮುದಾಯ, ಜಾತಿ, ಧರ್ಮಕ್ಕೆ ಸೇರಿದವರಲ್ಲ, ಎಲ್ಲ ಜಾತಿ ಹಾಗೂ ಧರ್ಮಕ್ಕೆ ಸೇರಿದವರಾಗಿದ್ದಾರೆ.ಕೆಂಪೇಗೌಡರು ನಿರ್ಮಿಸಿರುವ ಬೆಂಗಳೂರನ್ನು ಉಳಿಸಿ-ಬೆಳೆಸಿಕೊಂಡು ಹೋಗಬೇಕು, ಕೆಂಪೇಗೌಡರ ಸ್ತಂಭ ಹೇಗೆ ಸ್ಮಾರಕಆಗಿದೆಯೋ ಅದೇ ರೀತಿ ನಾವು ನಮ್ಮ ಕೆಲಸಗಳ ಮೂಲಕ ಸಾಕ್ಷಿಗುಡ್ಡೆ ನಿರ್ಮಿಸಬೇಕು ಎಂದು ಹೇಳಿದರು.ಬೆಂಗಳೂರಿನಲ್ಲಿ ಕೆಂಪೇಗೌಡ, ಕೆಂಗಲ್‌ಹನುಮಂತಯ್ಯ, ಬಾಲಗಂಗಾಧರನಾಥ ಸ್ವಾಮೀಜಿ, ಶಿವಕುಮಾರಸ್ವಾಮಿ ಜನಿಸಿದ್ದಾರೆ. ಇದು ಈ ನೆಲದ ವೈಶಿಷ್ಟ್ಯತೆ ಎಂದ ಅವರು ತಾವು ಬಹಳ ಅತ್ಯಂತ ಆಸಕ್ತಿಯಿಂದ ಬೆಂಗಳೂರು ನಗರದ ಜವಾಬ್ದಾರಿ ಹೊತ್ತುಕೊಂಡಿದ್ದೇನೆ. ಬೆಂಗಳೂರಿನ ಅಭಿವೃದ್ಧಿಗಾಗಿ ಸಲಹೆ, ಅಭಿಪ್ರಾಯ ನೀಡುವಂತೆ ನಾಗರಿಕರಿಗೆ ಮನವಿ ಮಾಡಿದ್ದೇನೆ ಎಂದು ಹೇಳಿದರು.