ನದಿ ಹಾಡುತ್ತಾ…

ಹಳ್ಳಿಯ ಸುಂದರ ವಾತಾವರಣಕ್ಕೆ ಹೊಂದಿಕೊಂಡಂತೆ ಸಣ್ಣ ಸಣ್ಣ ಮನೆಗಳು. ಊರಿನ ಒಂದು ದೊಡ್ಡ ಮನೆ ನೋಡಿದರೆ ಅರ್ಥವಾಗುತ್ತಿತ್ತು ಅವರೇ ಗೌಡರೆಂದು ದೊಡ್ಡ ತಲೆಬಾಗಿಲ ಮನೆ ಜೋಣಿ ಕಂಬದ ಮನೆ ಆಳು ಕಾಳು ದನ ಪಿಳ್ಳೆ ಪಿಸರು ಹೋ ಹೋ ಸದಾ ಗಿಜಿ ಬಿಜಿ ಎಲ್ಲ ನ್ಯಾಯ ಪಂಚಾಯ್ತಿ ಇವರೇ ಮಾಡುತ್ತಿದ್ದರು.


ಹಬ್ಬ ಹರಿದಿನ ಜಾತ್ರೆಗೆ ಇವರೇ ಉಸ್ತುವಾರಿ ರಂಜಾನ್, ಮೊಹರಂ ಹಬ್ಬಕ್ಕೆ ರಾತ್ರಿಯಿಡೀ ಇವರ ಜಾಗರಣೆ, ಹಿಂದು ಮುಸ್ಲಿಂ ಭಾವೈಕ್ಯತೆಯ ಸಂಕೇತವೆಂದು ಹೇಳಬಹುದಿತ್ತು. ಅಲ್ಲಿ ಹಿಂದು ಮನೆಗಳಿಗಿಂತ ಮುಸ್ಲಿಂ ಬಾಂಧವರ ಮನೆಗಳೇ ಹೆಚ್ಚಾಗಿದ್ದವು.
ಅಲ್ಲಿನ “ದೌಲುನ್” ಹೋಟೆಲ್ ಹಿಂದು ಮುಸ್ಲಿಂ ಎನ್ನದೇ ಎಲ್ಲರಿಗೂ ಚಹಾ ಕೊಡುತ್ತಿತ್ತು. ಅಲ್ಲಿ ನೆರೆದವರೆಲ್ಲ ಚಹಾ ಕುಡಿದು ಹೋಗುತ್ತಾ ಅಲ್ಲೇ ಕುಳಿತು ಮಾತಾಡುತ್ತಾ ಹರಟುತ್ತಿದ್ರೂ.
ಮೊಹರಂ ಹಬ್ಬ ಸಮೀಪ ಬಂದಿತ್ತು. ಊರೆಲ್ಲ ಚುನಾವಣೆಯ ಬಿಸಿಯಿಂದ ಬೂದಿ ಮುಚ್ಚಿದ ಕೆಂಡವಾಗಿತ್ತು, ಈ ಚುನಾವಣೆಗಳು ಬಂದ ಮೇಲೆ ಊರು ಊರಾಗಿರಲಿಲ್ಲ. ಆದರೂ ಮೇಲ್ನೋಟಕ್ಕೆ ಮಾತ್ರ ತುಂಬಾ ಖುಷಿಯಾಗಿರುವ ಹಾಗೆ ತೋರುತ್ತಿದ್ದವು. ದಲಿತರ ಕೇರಿಯು ಪುಟ್ಟದಾಗಿತ್ತು.
ಗೌಡರ ಮನೆಯಲ್ಲಿ ಕರಿಯ ನಸುಕಿಗೆ ಎದ್ದು ಹೆಂಡಿ ಬಳಿದು ಬುಟ್ಟಿ ತಲೆ ಮ್ಯಾಲೆ ಇಟಕೊಂಡು ರೋಡಿನ ಗುಂಟ ಇದ್ದ ತಿಪ್ಯಾಗ ಬುಟ್ಟಿ ಹಾಕ್ತಿದ್ದ. ಸಂಗನ ಗೌಡರ ಮನೆತನ ಅಂದ್ರ ಹಿಂದಿನಿಂದ್ಲು ಬಾಳಿ ಬದುಕಿದ್ದು ಆದರೆ ಈಗ ಎಲ್ಲಾ ಅಣ್ಣ ತಮ್ಮಂದಿರು ಬ್ಯಾರೆ ಆಗಿದ್ದರು.
ಸಂಗಣ್ಣ ಗೌಡರು ತಮ್ಮ ಹೆಂಡ್ತಿ ಕಾಶಿಬಾಯಿ ಮತ್ತು ವರ್ಷಕ್ಕೆ ಒಂದೋ ಎರಡೋ ಸರ್ತಿ ಬರುವ ಮಕ್ಕಳು ತನ್ನ ಪಾಲಿಗೆ ಬಂದ ೧೦೦ ಎಕರೆ ಜಮೀನು ಊರೆಲ್ಲ ತನ್ನ ಬಳಗ ಅಂದುಕೊಂಡ ಒಬ್ಬ ಶರಣ ಅಂತಾನೆ ಹೇಳಬಹುದೂ ಆದರೆ ಈ ಚುನಾವಣೆಗಳು ಬಂದ ಮೇಲೆ ಮನೆ ಮನೆಗೂ ಬೆಂಕಿ ಹತ್ತಿ ಉರಿತಿದ್ದವು.
ಅಣ್ಣ ತಮ್ಮಂದಿರು ಭಾಗಾದಿಯಾಗಿದ್ರೂ ಮೊದಲಿನಂತಿರಲಿಲ್ಲ. ಆ ಹಳ್ಳಿ ಬರಬರುತ್ತಾ ಹಬ್ಬದ ಮ್ಯಾಲಿನ ಪ್ರೀತಿ ಕಮ್ಮಿಯಾಗಿತ್ತು. ಪ್ರತಿ ವರ್ಷ ಬರ್ತಿದ್ದ ಮಕ್ಕಳು ಈ ಮೊಹರಂ ಹಬ್ಬಕ್ಕೆ ಬಂದಿರಲಿಲ್ಲ. ಮೈಬು ಸುಬಾನಿ ದೇವರಿಗೆ ಫಾತ್ತೆ ಕೊಟ್ಟು ಬಂದ ಸಂಗಣ್ಣ ಗೌಡರ ಮುಂಜಾನೆ ಸಂಭ್ರಮವಿರಲಿಲ್ಲ ಹಳ್ಳಿಗಳಲ್ಲಿ ಮೆಲ್ಲಗೆ ಬೆಂಕಿ ಹೊತ್ತಿ ಉರಿಯುತಿದ್ರಿಂದ ಹೊಟ್ಟೆ ಪಾಡಿಗೆ ಮಾಡಿ ಉಣ್ಣಲಿಕ್ಕೆ ಹೋದ ಬಡವರ ಮನೆಯ ಮಕ್ಕಳು ಬಂದಿರಲಿಲ್ಲ.


ಕರಿಯನ ತಮ್ಮ ತಮ್ಮನ ಹೆಂಡತಿ ಬೆಂಗಳೂರಿಗೆ ಹೋಗಿದ್ರೂ ಮಾಡಿ ಉಣ್ಣಲೂ ಕರಿಯನ ತಾಯಿ ಗೌಡರ ಹೊಲದಲ್ಲಿಯೆ ಕೂಲಿ ಮಾಡ್ತಿದ್ದಳು. ಕರಿಯನಿಗೆ ಮದುವೆಯಾಗಿರಲಿಲ್ಲ. ಅವನ ತಮ್ಮ ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದರು.
ಮುಸ್ಲಿಂ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿ, ಬೆಂಗಳೂರು ಸೇರಿದ್ದ ಎಷ್ಟೋ ವರ್ಷಗಳ ನಂತರ ಮೊದಲ ಬಾರಿಗೆ ಊರಿಗೆ ಹೊಂಟಿದ್ದ. ಕರಿಯ ಮುಂಜ್ ಮುಂಜಾನೆ ಎದ್ದನೋ ಬಿದ್ದನೊ ಅಂತ ಸಂಗಣ್ಣ ಗೌಡರ ಮನಿಗೆ ಓಡಿಹೋಗಿದ್ದ. ಕಾಶಿಬಾಯಿ ಅಡಿಗೆ ಮನೆಯಲ್ಲಿ ರೊಟ್ಟಿ ಬಡಿಯುತ್ತ ಕುಂತಿದ್ರೂ ಗೌಡರು ಇಲ್ಲ ಅವ್ವಾ ಎಂದ ಕರಿಯ.
ಇದ್ದಾರೆ ಪೂಜೆ ಮಾಡ್ಕೊತ್ತಿದ್ದಾರೆ ಅದೇನೋ ತೊಗರಿ ಹೊಲಕ್ಕೆ ಹುಳಾಂತೆ ಎಣ್ಣೆ ಪೌಡರ್ ತರೋಕೆ ಕಲಬುರಗಿಗೆ ಹೊಂಟಿದ್ದಾರೆ ಇರು ಸ್ವಲ್ಪ ಬರ್ತಾರೆ ಅಲ್ಲಿ ತನಕ ಬಿಸಿರೊಟ್ಟಿ ಎಣ್ಣೆ ಅಡಿಗೆ ಆಗಿದೆ ಎಂದಳು ಬೇಡ ಅವ್ವ ನಾನು ಗೌಡ್ರ ಹತ್ರ ಮಾತಾಡಬೇಕು ಊಟ ಮಾಡಕ್ಕೆ ಟೈಮಿಲ್ಲ ಮಧ್ಯಾಹ್ನ ಬರ್ತಿನಲ್ಲ ಅವಾಗ ರೊಟ್ಟಿ ಕೊಡುವಿರಂತೆ ಎಂದನು.
ಗೌಡರು ಸಣ್ಣ ಬಸವಣ್ಣನ ಭಕ್ತರು, ಮುಂಜಾನಿ ಬೇಗ ಎದ್ದು ಹೊಲದ ಕಡೆ ಒಂದು ರೌಂಡ್ ಹೊಡೆದು ಬಂದವರೇ ಚಳಕ ಮಾಡಿ ಲಿಂಗ ಪೂಜೆ ಮಾಡಿದ ಮೇಲೆ ಚಹಾ ಕುಡಿಯೋರು, ಕಾಶಿಬಾಯಿ ಲಿಂಗಪೂಜೆ ಮಾಡಿಕೊಂಡು ಬರುವುದರೊಳಗೆ ಒಲಿ ಮ್ಯಾಲಿನ ರೊಟ್ಟಿ ಹೆಂಚು ತೆಗೆದು ಬೊಗಣಿಯಿಟ್ಟು ಹಾಲಾಕಿ ಚಹಾ ಮಾಡಿದಳು.
ಇಲ್ಲಿ ಒಲಿಮ್ಯಾಲ ಚಹಾ ಕುದಿತಿದ್ರೆ ಈ ಕಡಿ ಕರಿಯನ ಮನಸ್ಸು ಹಂಗೆ ಚಡಪಡಿಸುತ್ತಿತ್ತು. ಗೌಡರು ದೇವರ ಮನ್ಯಾಗಿಂದ ಹಣಿಮ್ಯಾಲ ವಿಭೂತಿ ಹಚ್ಚಿಕೊಂಡು ಮದ್ಯಕ್ಕ ಕುಂಕುಮದ ಬೊಟ್ಟು ಇಟ್ಟುಕೊಂಡು ಬಿಳಿಧೋತಿ ಮತ್ತು ಬಿಳಿ ಅಂಗಿ ಉಟಕೊಂಡು ಬಂದರು. ಅಷ್ಟರಲ್ಲಿ ಕಾಶಿಬಾಯಿ ಚಹಾ ಸೋಸಿ ಕರಿಯನಿಗೂ ಮತ್ತು ಗೌಡರಿಗೂ ಕೊಟ್ಟಳು. ಏನೋ ಕರಿಯ ಈಗ ತಾನೇ ಮನಿಗಿ ಹೋಗಿ ಹಂಗೆ ವಾಪಾಸ್ ಬಂದಿ ಏನ್ ಸುದ್ದಿ, ಎಂದು ಚಹಾ ಕುಡಿಯುತ್ತ ಕೇಳಿದರು.
ಗೌಡ್ರೆ ನಮಗ ನೀವಾ ಕಾಪಾಡಬೇಕು ಎಂದು ಕಾಲು ಬೀಳಲು ಹೋದನು. ಗೌಡ್ರು ಸಮಾಧಾನ ಮಾಡಿ ಏನಾಯ್ತು ಹೇಳು ಹಿಂಗೆಲ್ಲಾ ಮಾಡಬಾರ್ದೂ… ಏನಾಯ್ತೂ ಹೇಳಪ್ಪ ಅವ್ವಾಗ ಅರಾಮಿಲ್ಲ ರೊಕ್ಕ ಬೇಕಾ ? ಹೆಂಗಾಂಳ ಶ್ಯಾಣವ್ವ ಮೊನ್ನೆರ ಹೊಲಕ್ಕ ಬಂದಾಳ ಆಕಿದ್ರ ನನಗ ಯಾವ ಚಿಂತಿಯಿಲ್ಲ, ನೋಡು ಜ್ವರ ಬಂದಿದ್ಯ ಹೇಳು ನಿಮ್ಮ ಗೌಡ್ರಿ ಹತ್ರ ಕಣಕ್ಕ ಇಸಕೋ ನಾ ಕಲಬುರ್ಗಿ ಕಡಿಗಿ ಹೋಗಿ ಬರ್ತಿನಿ ಎಂದರು.
ರೊಕ್ಕ ಅದು ಎನೂ ಬ್ಯಾಡ್ರಿ ಗೌಡ್ರ ನನ್ನ ತಮ್ಮ ಸಾಬ್ಯಾ ಬೆಂಗಳೂರಿನಿಂದ ನಾಳಿಗ ಬರಕತ್ತಾನ. ನಾಡಿದ್ದು ಮೊಹರಂ ಅಲ್ಲ ಅದಕ್ಕ ಅವನ ಮದುವಿ ಅವಾಂತರ ಎಲ್ಲಾ ನಿಮಗ ಗೊತ್ತಿರುವ ಸುದ್ದಿ ಐತಿ. ಆ ಮುಸ್ಲಿಂರ ಖಾಜಾ ಕಾಯಕೊಂಡ ಕುಂತಾನ. ಸಾಬ್ಯಾನ ತಲಿ ಕಡಿಬೇಕಂತ. ನೀವಾ ನಮಗ ಕಾಪಾಡಬೇಕು ಎಂದನು.
ನಾ ಈಗ ಅರಜೆಂಟನಾಗಿದ್ದೀನಿ ಸಂಜಿಗಿ ಸಿಗ್ತೀನಿ ಸಮಾಧಾನದಿಂದಿರು ಏನೂ ಆಗಲ್ಲ ನಾ ಇರುವ ತನಕ ಯಾವ ಸಾವ ಕೊಲೆ ಜಗಳ ಆಗದಂಗ ನೋಡ್ಕೊತೀನಿ ಹೋಗಿ ನೀ ಶ್ಯಾಣ್ಣವ್ವಗ ಧೈರ್ಯ ಹೇಳು ಎಂದು ಹೇಳಿ ಕಲಬುರ್ಗಿ ಕಡೆ ಹೊರಟರು. ಕರಿಯನು ಆ ನಂತರ ಗೌಡ್ರ ಮನೆಗೆ ಬಂದು ದನಗಳ ಮೇಯಿಸಲು ಹೊಡೆದುಕೊಂಡು ಹೋದನು. ದನಗಳನ್ನು ಮೇಯಿಸಲು ಬಿಟ್ಟು ಗಿಡದ ಕೆಳಗೆ ಟವೆಲ್ ಹಾಸಿ ಮಲಗಿದನು.
ನಿದ್ದೆ ಬರಲಿಲ್ಲ. ಊಟ ಸೇರಲಿಲ್ಲ. ದನಗಳು ಹೊಲಕ್ಕೆ ನುಗ್ಗಿ ಬೆಳೆ ತಿನ್ನುತ್ತಿರಲು ಪಕ್ಕದ ಹೊಲದ ಮಾದೇವ ಬಂದು ಕರಿಯನನ್ನು ಎಬ್ಬಿಸಿ ದನಗಳ ಹೊಡೆದನು. ಯಾಕೋ ಕರಿಯ ಒಂಥರಾ ಇದ್ದೀಯಾ ಏನಾಗಿದೆ ? ಯಾವತ್ತೂ ಹಿಂಗಿರಲಿಲ್ಲ. ಮೈಯಾಗ ಹುಷಾರಿಲ್ಲ ಅಂದ್ರೆ ನಾ ದನ ಮೇಯಿಸಿಕೊಂಡು ಸಂಜಿಗಿ ಗೌಡ್ರ ದೌಣಿಗೆ ಕಟ್ತಿನಿ ನೀ ಹೋಗು ಅಂತಾ ಬಲವಂತ ಮಾಡಿ ಕಳಿಸಿದನು, ಕರಿಯ ಮನೆ ಕಡೆ ಹೆಜ್ಜೆ ಹಾಕುತ್ತ ಸಾಗಿದ. ಅವನಿಗೆ ಮನೆಗೆ ಹೋಗಲು ಇಷ್ಟವಾಗಲಿಲ್ಲ.
ಅಗಸಿಯ ಹತ್ತಿರ ಇರುವ ಹಣಮಂತ ದೇವ್ರು ಕಟ್ಟೆಯ ಮೇಲೆ ಮಲಗಿದ. ಗೌಡ್ರು ಬಂದ್ರೂ ಈ ಅಗಸಿಯಿಂದಾನೇ ಹೋಗಬೇಕು ಬಂದಿದ್ದೂ ಗೊತ್ತಾಗುತ್ತೇ ಅಂತ ಕಾಯ್ತಿದ್ದೆ ಶ್ಯಾಣವ್ವ ಮಗ ಮಧ್ಯಾಹ್ನ ಊಟಕ್ಕೆ ಬರಲಿಲ್ಲ ಅಂತ ರೊಟ್ಟಿ ಕಟಕೊಂಡು ಗೌಡ್ರ ಹೊಲದ ಹತ್ರ ಬಂದಳು. ಮಾದೇವ ಗೌಡ್ರ ಹಸುಗಳನ್ನು ಮೇಯಿಸ್ತಿದ್ದ. ಶ್ಯಾಣವ್ವನಿಗೂ ವಯಸ್ಸಾಗಿತ್ತು. ನಡಕೊಂಡು ಬಂದವಳಿಗೆ ಆಯಾಸಾಗಿತ್ತು. ಪಾಪ ಶ್ಯಾಣವ್ವನ ಮನಸಿನ ವೇದನೆ ಅವಳಿಗೆ ಗೊತ್ತಿತ್ತು.
ಶ್ಯಾಣವ್ವನಿಗೆ ಆಕಾಶವೆ ತಲಿ ಮ್ಯಾಲೆ ಬಿದ್ದಂಗಿತ್ತು. ಯಾರಿಗೂ ಹೇಳದ ಸ್ಥಿತಿಯಾಗಿತ್ತು. ಸಾಬ್ಯಾ ಆ ಮುಸಲ್ಮಾನರ ಹುಡುಗಿಯನ್ನು ಪ್ರೇಮಿಸಿ ದೂರದ ಬೆಂಗಳೂರಿಗೆ ಓಡಿ ಹೋಗಿದಾಗ ಆಕೆಯ ಅಪ್ಪ ಅಣ್ಣಂದಿರು ಇವರ ಮ್ಯಾಲ ಕೇಸ್ ಮಾಡಿದ್ರೂ ಪೋಲೀಸಿನವರು ಕರಿಯನ ಶ್ಯಾಣವ್ವ ತಂದು ಕೂರಿಸಿದ್ರೂ ಗೌಡ್ರು ಬಂದ ಮೇಲೆ ಬಿಟ್ಟಿದ್ದು ಆಮೇಲೆ ಅವ್ವ ಊಟ ನಿದ್ದಿ ಬಿಟ್ಟು ದಿನಾ ದಿನಾ ಕೊರಗ್ತಿದ್ದಳು. ಆಕಿನ ನೋಡೋಕೆ ಆಗದೆ ಕರಿಯ ಗೌಡ್ರು ಮುಂದು ಕುಂತು ಗೋಳೊ ಅಂತ ಅಳಾಕ ಶುರು ಮಾಡಿದ್ದ.
ಸಂಗಣ್ಣ ಗೌಡ್ರು ಹತ್ತು ದಿನಗಳಲ್ಲಿ ಸಾಬ್ಯಾನ ಕರೆಯಿಸುವ ಜವಾಬ್ದಾರಿ ಹೊತ್ತು ಕೊಂಡಿದ್ರು. ಕರಿಯನನ್ನು ಸಮಾಧಾನ ಮಾಡಿದ್ದ ಸಂಗಣ್ಣಗೌಡ್ರು ಇವತ್ತು ನಿಮ್ಮ ಮನಿ ಕಡೆಗೆ ಬರ್ತಿನಿ ನಿಮ್ಮವ್ವನ ಸಂಗಡ ಮಾತಾಡಬೇಕು ಕರಿಯ ನೀನು ಜೊತೆಗಿರು ಬೇಗ ಮನೆಗೆ ಹೋಗಿರು ಎಂದರು.
ಕರಿಯ ಬೇಗ ಬಂದಿದ್ದ ದನಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಮನೆ ಕಡೆ ಹೆಜ್ಜೆ ಹಾಕಿದ್ದ. ಶ್ಯಾಣಮ್ಮ ಆ ದಿನ ಕೂಲಿಗೆ ಹೋಗದೇ ಮನೆಯಲ್ಲಿ ಉಳಿದಿದ್ಲೂ. ಗೌಡ್ರೂ ಇನ್ನೂ ಬಂದಿರಲಿಲ್ಲ. ಶ್ಯಾಣಮ್ಮ ಮಗ ಬಂದ ತಕ್ಷಣ ಚಹಾ ಮಾಡಿಕೊಟ್ಳು. ಗೌಡ್ರು ಸಿದಾ ಹೊಲದಿಂದ ಅವರ ಮನೆ ಕಡೆಗೆ ಹೆಜ್ಜೆ ಹಾಕಿದರು. ಶ್ಯಾಣಮ್ಮ ಮನೆ ಮುಂದಿನ ಕಟ್ಟೆಯ ಮೇಲೆ ಕೌದಿ ಹಾಸಿ ಕೂಡಿಸಿದ್ದಳು ಗೌಡ್ರು ಜಾತಿ ಬೇಧ ಮಾಡ್ತಿರಲಿಲ್ಲ.
ಶ್ಯಾಣವ್ವನ ಕೈಲಿಂದ ಚಹಾ ಕುಡಿದು ಸಾಬ್ಯಾ ಸುಲ್ತಾನಪೂರದ ಶ್ಯಾಣವ್ವನ ತಂಗಿ ಮನ್ಯಾಗಿದ್ದ ಅವನನ್ನು ಕರೆಸು ನಾ ಮಾತಾಡತಿನಿ ಇಬ್ರೂ ಮೆಚ್ಚಿದ್ರ ವಯಸ್ಸಾಗಿವೆ ಮದುವೆ ಮಾಡಬಹುದು ಕಾನೂನು ಏನೂ ಮಾಡಲ್ಲ ನಮಗ ರಕ್ಷಾ ಕೊಡುತ್ತೆ ಹೆದರಬೇಡ ಶ್ಯಾಣವ್ವ ನಾ ಇದಿನಿ ಬೇ ಹೆದರಬೇಡ ಯಾವ ಜಾತಿ ಗಂಡು ಹೆಣ್ಣು ಅನ್ನೋ ಭೇದ ಇಲ್ಲದ ಕಾಲದಾಗ ಈ ಜಾತಿ ಪಾತಿ ಎಲ್ಲೈತಿ ಅವರ ಚೊಂಗ್ಯಾ ಸುರಕುಂಬಾ ನಾವು. ನಮ್ಮ ಹೋಳಿಗಿ ಸಜ್ಜಕ ಖೀರು ಅವರು ತಿನ್ತವಿ ಒಟ್ಟಿಗಿ ಕುಂತು. ಎಲ್ಲರೂ ಮನುಷ್ಯರೇ ಎಲ್ಲರ ಮೈಯಾಗ ನೆತ್ತರು ಹರಿತೈತಿ ಹೆದರಬ್ಯಾಡ ನಾ ಇದಿನಿ ಕಾನೂನು ಸಾತ್ ಐತಿ ಎಲ್ಲಕ್ಕಿಂತ ಹೆಚ್ಚಾಗಿ ಆ ನಮ್ಮಪ್ಪ ತಂದಿ ಬಸವಣ್ಣ ನಮ್ಮ ಕೂಡ ಅದಾನ ಕರೆಸು ಅವರನ್ನು ನಾ ಮಾತಾಡತಿನಿ ಯಾವಾಗ ಕರೆಸ್ತಿ ಮನೆಗೆ ಕರಕೊಂಡು ಬಾ ನಾ ಈಗ ಹೋಗ್ತಿನಿ,
ಹೊಲದ ಕಡೆ ಜರಾ ಕೆಲಸ ಅದಾ ಅಂದು ಎದ್ದು ಹೋದ್ರೂ ಶ್ಯಾಣಮ್ಮ ಜೀವಕ್ಕಂಜಿ ಖಾಜಾನಾ ಸಿಟ್ಟಿಗಂಜಿ ಸುಲ್ತಾನಪೂರದ ಸಂಗವ್ವನ ಮನ್ಯಾಗ ಸಾಬ್ಯಾ ಮತ್ತು ಸಲ್ಮಾಳಿಗಿ ಕದ್ದು ಇಟ್ಟಿದ್ಲೂ ಗೌಡ್ರೂ ಮನಿಗಿ ಬಂದು ಹೋದ ಮ್ಯಾಲ ಹೊರಗ ಬಂದು ನೋಡಿದ್ಲೂ ಇನ್ನೂ ಟೈಂ ಇತ್ತು. ಕರಿಯ ಬರೋದು ಸರಿ ರಾತ್ರಿಗಿ ಊಟ ಎಲ್ಲಾ ಗೌಡ್ರ ಮನ್ಯಾಗೆ ಮುಗಿಸಿ ಬರ್ತಾನ ಅಲ್ಲಿತನಕ ಹೋಗಿ ಕಕೊಂಡು ಬಂದ್ರಾಯ್ತು ಅಂತ ಸೀದಾ ಕೈ ಚೀಲ ಹಿಡಕೊಂಡು ಕಲಬುರಗಿ ಹೋಗಂಗ ಕಾಣಬೇಕು ನೋಡೋರಿಗಿ ಅಂತ ಅನ್ಕೊಂಡು ಹೊರಟಳು. ಸೂರ್ಯ ಮುಳಗದ್ರೊಳಗೆ ಸುಲ್ತಾನಪೂರ ಹೋಗಿ ಸಂಗವ್ವನ ಮನೆ ಸೇರಿದ್ದಳು.
ಸಂಗವ್ವನ ಗಂಡ ತೀರಿಕೊಂಡಿದ್ದ ಮಗ ದ್ಯಾವಣ್ಣ ಆಟೋ ನಡಸಕೊಂಡು ಮನಿ ಅವ್ವನ ನೋಡಿಕೊಂಡಿದ್ದ. ಹೋದವಳೇ ಕಣ್ಣೀರು ಹಾಕ್ಕೊಂಡು ಕೊಳ್ಳಿಗಿ ಕೊಳ್ಳಿಗಿ ಬಿದ್ದು ಅಳಾಕ ಹತ್ತಿದ್ರು. ಸಾಬ್ಯಾ ಬೆದರಿಸಿ ನಾವ್ಯಾರ ಮನಿ ಲೂಟಿ ಮಾಡಿಲ್ಲ ನನಗೇನು ಫಾಸಿ ಹಾಕೊಲ್ಲ ನೀ ಅಳಬ್ಯಾಡ ನನಗೇನು ಆಗಲ್ಲ ಸಲ್ಮಾ ನಾ ಮೆಚ್ಚಿವಿ ಮದುವಿ ಆಗ್ತವಿ. ಅಷ್ಟೇ ಅಲ್ಲದೇ ತಾಯಿ ನಡುವಿ ಬಾಯಿ ಹಾಕಿ ಗೌಡ್ರು ಹಿಂಗ ಅಂದಾರ ಅಂತ ಹೇಳಿದ್ದೂ ಆಗ ಸಾಬ್ಯಾಗೆ ಆನಿಬಲ ಬಂದಂಗ ಆಯ್ತು.
ಗೌಡ್ರು ಜೊತೆಗಿದ್ದಾರ ಯಾಕ ಹೆದರ್ತಿ ಅಂತ ಅವ್ವಗ ಸಮಾಧಾನ ಮಾಡಿದ. ಬಸ್ಸಿಗೆ ಹೋದ್ರ ನಮಗ ಊರಾಗಿನ ಮಂದಿ ನೋಡ್ತಾರ. ದ್ಯಾಮ್ಯಾ ಬರ್ಲಿ ಅವನ ಆಟೋ ತಗೊಂಡು ಸೀದಾ ಗೌಡರ ಮನಿಗಿ ಹೋಗೋಣ ಅಂತ. ಸಂಗವ್ವ ಅಕ್ಕ ಬಂದಿದ್ದಕ್ಕ ಅಡಿಗಿ ಮಾಡಿ ಊಟಕ್ಕ ಎಬ್ಬಿಸಿದ್ಲೂ ಆದರೆ ಶ್ಯಾಣವ್ವನ ಜೀವದಾಗ ಜೀವ ಇರಲಿಲ್ಲ. ಹೊಟ್ಟೆಗೆ ಹಸಿವು ಇಲ್ಲದಿದ್ರೂ ಸಂಗವ್ವನ ಮ್ಯಾಲಿನ ಪ್ರೀತಿಗಾಗಿ ನಾಕು ತುತ್ತು ಉಂಡು ಎಲ್ಲಾ ದ್ಯಾಮ್ಯಾ ರಾತ್ರಿ ಬಂದ ಅಷ್ಟೊತ್ತಿಗೆ ವಿಷಯ ತಿಳಿಸಿ ಊರಿಗಿ ಹೋಗಲಾಕ ನಿಂತ್ರು ಸಲ್ಮಾ ಸಾಬ್ಯಾ, ಶ್ಯಾಣವ್ವ ಎಲ್ಲರೂ ಸೇರಿ ಸೀದಾ ಸಂಗಣಗೌಡ್ರರ ಮನಿಗಿ ಹೋದ್ರು.
ಗೌಡರು ರಾತ್ರಿ ಆದ್ದರಿಂದ ಮಲಗಿಬಿಟ್ಟಿದ್ರೂ. ತಲಬಾಗಿಲು ಚೋರಿಸಲೇ ಬಡಿದು ಒದರಿದ ಸಾಬಾ,?? ಎದ್ದು ಬಂದು ಗೌಡ್ರು ಬಾಗಿಲು ತೆರೆದು ಒಳಗ ಕರಕೊಂಡು ಬಾಗಿಲು ಹಾಕಿದ್ರೂ, ಸಂಗಣ್ಣ ಗೌಡ್ರು ನ್ಯಾಯ ಅಂದ್ರ ಸುತ್ತ ಹತ್ತು ಊರಿಗೆ ಹೆಸರಾದವ್ರೂ ಯಾರಿಗೂ ಅನ್ಯಾಯ ಮಾಡಿದವರಲ್ಲ. ಆದರೆ ಈ ನ್ಯಾಯ ಮಾತ್ರ ಅವರ ತಲಿ ತಿನ್ಲತಿತ್ತು. ಈ ಬಾರಿ ಚುನಾವಣೆಗೆ ಬೇರೆ ನಿಂತಿದ್ದೂ ಯಾರ ಪರ ನ್ಯಾಯ ಮಾಡಿದ್ರೂ ಹಾನಿಯಾಗೋದು ಅವರಿಗೆ ಆಗಿತ್ತು. ಅರಿವಿನಿ ಮಿತಿಯಾಗಿತ್ತು. ಜಾತಿ ಪಾತಿ ಮಾಡದ ಗೌಡರ ಮುಂದೆ ಈ ಬಾರಿ ಇದು ಪರೀಕ್ಷೆಯಾಗಿತ್ತು. ಆದಿದ್ದ ಆಗಲಿ ಇದ್ದಂಗ ನ್ಯಾಯ ಮಾಡೋದಂತ ನಿರ್ಧಾರ ಮಾಡಿ ಆಗಿತ್ತು. ಶ್ಯಾಣವ್ವ ಬಂದವಳೇ ಗೌಡರ ಕಾಲು ಹಿಡಕೊಂಡು ಗೊಳೋ ಅಂತ ಅಳಲು ಪ್ರಾರಂಭಿಸಿದಳು. ಗೌಡ್ರೂ ಸಿಟ್ಟಿಗಿ ಬಂದ್ರು. ಹೀಂಗ ರಂಪಾ ಮಾಡಬ್ಯಾಡ ಆಜು ಬಾಜು ಮಂದಿ ಏಳ್ತಾರ ಕೆಲಸ ಕೆಡ್ತದ ಕಾಶಿಬಾಯಿಗೆ ಕರೆದು ಶ್ಯಾಣವವ್ವಗ ಬಯ್ಯಲು ಹೇಳಿದ್ರೂ.
ಸಾಬ್ಯಾ ಮತ್ತು ಸಲ್ಮಾರನ್ನು ಒಂದು ರೂಮಿಗೆ ಕರಕೊಂಡು ಒಯ್ದು ಬಾಗಿಲು ಮುಚ್ಚಿದರು. ಬಾಳ ಹೊತ್ತ ಆದ ಮ್ಯಾಲ ತೆಗೆದ್ರೂ ಕಾಶಿಬಾಯಿಗೆ ಕರೆದು ಈಗ ಇವರು ಇಲ್ಲೆ ಮಲಗಲಿ. ಮುಂಜಾನಿನೇ ಜಲ್ದಿ ಎದ್ದು ಸಿಟಿಗೆ ಹೋಗಿ ಠಾಣೆಯಲ್ಲಿರುವ ಪಿ.ಎಸ್.ಐ. ಸಾಹೇಬರಿಗೆ ಭೇಟಿ ಆಗಿ ಬರ್ತೀನಿ. ಇವರು ಇಲ್ಲೇ ಇರ್ಲಿ ಜಾಗ ಸೇಫ್ ಆದ ಖಾಜಾ ಬ್ಯಾರೆ ಇವರ ಮ್ಯಾಲ ಹಲ್ಲ ಮಸಿಲಿತಾನ ಹೊರಗ ಹೋದ್ರೂ ಕಷ್ಟ ಅಂದ್ರು.
ಸರಿ ಅಂದು ಕಾಶಿಬಾಯಿ ಸಾಬ್ಯಾ ಸಲ್ಮ ಅವರಿಗೆ ಕರಕೊಂಡು ಹೋಗಿ ಒಂದು ರೂಂ ತೋರಿಸಿದ್ರೂ. ನಿದ್ದಿ ಬರಲಿಲ್ಲ ಆ ಕಡಿ ಈ ಕಡಿ ಹೊಳ್ಳಿದ್ರೂ ಸಾಬ್ಯಾ ಖಾಜಾನ ಬಗ್ಗೆ ವಿಚಾರ ಮಾಡ್ತಿದ್ದ. ಅಕಿ ತಂಗಿ ಬೇರೆ ಈಕೆ. ಬೇರೆಯವರ ವಿಷಯದಾಗ ಜಗಳ ಮಾಡವ ಇವರ ಮನಿ ತಂಟ್ಯಾಕ ಹೋದ್ರೂ ಬಿಡ್ತಾನ ಅಂದು ಯೋಚನಿ ಮಾಡಕೋತ ಮಲಗಿದ ಗೌಡ್ರೂ ಬೇಗ ಮುಂಜಾನಿಗಿ ಎದ್ದು ಸಿಟಿಗೆ ಹೋದ್ರೂ ಇವರು ಹೋದ ಮ್ಯಾಗೆ ಸಿಟಿಯಿಂದ ಅಷ್ಟೊತ್ತಿಗೆ ಒಂದು ಜೀಪ್ ಗೌಡರ ಮನಿಮುಂದ ಬಂತು. ಊರ ತುಂಬಾ ಗುಲ್ಲೋ ಗುಲ್ಲು. ಖಾಜಾ ಓಡಕೋತ ಬಂದ ಪಿ.ಎಸ್.ಐ. ಜೊತೆಗೆ ಇನ್ನಷ್ಟು ಪೋಲೀಸರು ಬ್ಯಾರೆ ಬಂದಿದ್ರೂ ದುರಗುಟ್ಟಿ ನೋಡಿದ ಅವರ ಅವ್ವ ಅಮೀನಾಬಿ ಅಳಕೊಂತ ಇದ್ದಾಗ ಬಂದ ಪೋಲೀಸರು ಬೈಯ್ದದ್ದಕ್ಕೆ ಸುಮ್ಮನಾಗಿ ಜೀಪನ್ಯಾಗ ಕುಂತಳು. ಸಾಬ್ಯಾ ಸಲ್ಮಾ ಶಾಣವ್ವ ಎಲ್ಲರಿಗೂ ಕುಡಸ್ಕೊಂಡು ಸಿಟಿಗೆ ಹೋಯ್ತು ಜೀಪ್.
ಅಲ್ಲಿ ಎಲ್ಲ ರಾಜಿ ಪಂಚಾಯ್ತಿ ಆಗಿ ಅವರ ಮದುವಿ ಕೂಡ ಮಾಡಿ ಗೌಡರು ಅವರಿಗೆ ಕರಕೊಂಡು ಮನಿಗೆ ಬಂದ್ರು ಖಾಜಾ ಊರ ಹೊರಗ ಚಾವಡಿ ಕಟ್ಟಿಗಿ ನಾಕು ಮಂದಿ ಜೊತೆ ಕುಂತು ಪರೇಲ ಆಡತ್ತಿದ್ದ. ನೋಡಿದವನೇ ರಕ್ತ ಕೊತ ಕೊತ ಅಂತ ಕುದಿಲಾಕ ಹತ್ತಿದ್ದು ಆದರ ಆಗಲಿ ಇವತ್ತು ಸಾಬ್ಯಾ ಜೀವ ತೆಗಿತಿನಿ ನಮ್ಮ iನಿ ಬರಬಾದ ಮಾಡಿದ. ಅವತ್ತು ಸಂಗಣ್ಣಗೌಡ್ರು ಮನಿಗಿ ಹೋಗಿ ಅವರ ಕಾಲು ಬಿದ್ದು ನಮ್ಮ ತಂಗಿ ನಮಗ ಒಪ್ಪಿಸ್ರಿ ಅಂತ ಹೇಳಿದ್ರೂ ಕೇಳಲಿಲ್ಲ ಅಂತ ಹಲ್ಲ ಮಸಿಲತ್ತಿದ್ದ. ನಾಕು ಮಂದಿ ಗೆಳೆಯರ ಕೂಡ ಜೊತೆಯಾಗಿ ರಾತ್ರಿ ಗೌಡ್ರು ಮನಿಗೆ ಹೋಗೋಣಂತ ಪ್ಲ್ಯಾನ್ ಮಾಡಿದ.
ಸರಿ ರಾತ್ರಿ ಆಗೋದೇ ಕಾಯ್ತಿದ್ದ ಊಟ ಸೇರಲಿಲ್ಲ. ಅಮೀನಾಬಿ ಆಗಿದ್ದ ಆಯ್ತು ಬಿಡು ಎಲ್ಲರೂ ಮನುಷ್ಯರೇ ಬದುಕು ಮಾಡದೇ ಅವರು ನಾವು ಅಕ್ಕ ತಂಗಿರಂಗ ನಡದಿನಿ ಮುಂದ ಹಂಗ ಇದ್ದರಾಯ್ತು ಅಂತ ತಿಳಿಸಿ ಹೇಳಿದ್ಲೂ. ಆಗ ಹೂಂ ಅಂದು ರಾತ್ರಿ ತಲವಾರ ತಗೊಂಡು ಸೀದಾ ನಾಕು ಮಂದಿ ಸಂಗಡ ಗೌಡರ ಮನಿ ಹೊಕ್ಕಿದ.
ಗೌಡರು ಅವರಿಗೆ ಅವತ್ತೆ ರಾತ್ರಿ ಬೆಂಗಳೂರಿಗೆ ಬಸ್ ಹತ್ತಿಸಿ ಬಂದಿದ್ರೂ ಮನಿಯೆಲ್ಲಾ ಹುಡುಕಾಡಿ ಇಲ್ಲ ಅಂದ್ರೂ ಕೇಳಲಾರದ ಇದೇ ಸಮಯ ನೋಡಿ ಹಿಂದ ಇದ್ದ ನಾಲ್ಕು ಮಂದಿ ಬ್ಯಾಡ ಅಂತ ಖಾಜಾ ಬಡಿಕೊಂಡ್ರೂ ಕೇಳಲಾರದ ಗೌಡ್ರೂ ಎದಿಗಿ ಚುಚ್ಚೇ ಬಿಟ್ರೂ. ಅವರು ಚುನಾವಣೆಗೆ ನಿಂತವರ ಪೈಕಿಯಾಗಿದ್ರೂ ತಲವಾರ ಖಾಜಾನಾದ್ದು ಚುಚ್ಚಿದ್ದು ಬ್ಯಾರೆ. ಖಾಜಾ ಕತ್ತಿ ಕೈಯ್ಯಾಗ ಹಿಡಕೊಂಡ ನಿಂತು ಅಳಕತ್ತಾ ಕಾಶಿಬಾಯಿ ಇದೆಲ್ಲ ನೋಡಿ ಗಸ್ತು ಬಂದು ಬಿದ್ದಹೊದ್ರೂ.
ಊರ ತುಂಬಾ ಖಾಜಾ ಗೌಡ್ರಿಗೆ ಕೊಂದಾನ ಅವರ ತಂಗಿ ನ್ಯಾಯ ಮಾಡಿದ್ದಕ್ಕೆ ಅಂತ ಪುಕಾರ ಮಾಡಿದ್ರೂ ಪೋಲೀಸರು ಬಂದು ಖಾಜಾಗ ಹಿಡಕೊಂಡು ಹೋಗಿದ್ರೂ ಅಮೀನಾಬೀ ಎದಿ ಒಡ್ದೂ ಸತ್ತು ಬಿದ್ಲೂ ಆ ಊರಿಗಿ ಬಂದು ಎಬ್ಬಿಸಿದ ಜೀಪಿನ ಧೂಳು ಮಾತ್ರ ಮಬ್ಬ ಮಬ್ಬಾಗೇಯಿತ್ತು.

-ರೇಣುಕಾ ಹೆಳವರ್, ಕಲಬುರಗಿ