ನದಿ ಪಾತ್ರದ ಜನರು ಎಚ್ಚರದಿಂದಿರಲು ಪರಮೇಶ್ವರ್ ಮನವಿ

ಮಧುಗಿರಿ, ಆ. ೫- ತಾಲ್ಲೂಕಿನ ಪುರವರ ಹೋಬಳಿ ಚನ್ನಸಾಗರದಲ್ಲಿ ಜಯಮಂಗಲಿ ನದಿ ಹತ್ತು ಅಡಿಗೂ ಹೆಚ್ಚು ಎತ್ತರದಲ್ಲಿ ಹರಿದ ಪರಿಣಾಮ ೮೦ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡು ಹಾನಿಗೊಳಗಾಗಿವೆ. ಎನ್‌ಡಿಆರ್‌ಎಫ್ ಯೋಜನೆಯಡಿ ಪರಿಹಾರವನ್ನು ತಾಲ್ಲೂಕು ಆಡಳಿತ ನೀಡಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಜಿ. ಪರಮೇಶ್ವರ್ ತಿಳಿಸಿದರು.
ತಾಲ್ಲೂಕಿನ ಚನ್ನಸಾಗರ ಗ್ರಾಮಕ್ಕೆ ಭೇಟಿ ನೀಡಿ ಹಾನಿಗೊಳಗಾದ ಪ್ರದೇಶಗಳನ್ನು ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕೃತಿ ವಿಕೋಪದಿಂದಾಗಿ ಮನೆಯಲ್ಲಿದ್ದ ದವಸ ಧಾನ್ಯಗಳು, ಬಟ್ಟೆ ಮತ್ತು ಬೆಳೆ ನಾಶವಾಗಿದೆ. ಈ ಬಗ್ಗೆ ತಹಶೀಲ್ದಾರ್, ಇಒ, ಇಂಜಿನಿಯರ್ ಮತ್ತು ಸಂಬಂಧಪಟ್ಟ ಅಧಿಕಾರಿಗಳು ನಷ್ಟವಾಗಿರುವ ಬಗ್ಗೆ ಅಂದಾಜು ತಯಾರಿಸಿದ್ದು, ಪರಿಹಾರ ವಿತರಿಸಲಾಗುವುದು ಎಂದರು.
ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಕಾರ್ಯನಿರ್ವಹಿಸಿ ಬೆಳೆ ನಷ್ಟವಾದ ಬಗ್ಗೆ ವರದಿ ತಯಾರಿಸುವಂತೆ ಸೂಚಿಸಿದ್ದು, ಈ ಮಳೆ ಇನ್ನೂ ನಾಲ್ಕೈದು ದಿನಗಳು ಇದೆ ಎಂದು ಹವಾಮಾನ ಇಲಾಖೆಯವರು ತಿಳಿಸಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಸಂಬಂಧ ನದಿ ಪಾತ್ರದಲ್ಲಿರುವ ಜನರು ಎಚ್ಚರಿಕೆಯಿಂದಿರುವಂತೆ ಅವರು ಮನವಿ ಮಾಡಿದರು.
ಚನ್ನಾಸಾಗರ ಸಮೀಪ ಇರುವ ನಿಟ್ಟರಹಳ್ಳಿ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆದು ಸತ್ಕರಿಸುತ್ತಿರುವ ತಹಶೀಲ್ದಾರ್, ತಾಲ್ಲೂಕು ಪಂಚಾಯ್ತಿ ಇಒ, ಇಂಜಿನಿಯರ್ ಪೊಲೀಸ್ ಇಲಾಖೆ ಮತ್ತು ಅಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿದಲ್ಲದೆ ವೈದ್ಯರ ತಂಡವೂ ಸಹ ಸಾರ್ವಜನಿಕರ ಆರೋಗ್ಯ ವಿಚಾರಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
೧೯೯೧ ರಲ್ಲಿ ಮಧುಗಿರಿ ಕ್ಷೇತ್ರದ ಶಾಸಕರಾಗಿದ್ದಾಗ ಇದೇ ರೀತಿಯ ಅನುಭವ ನನಗಾಗಿತ್ತು, ಆಗ ಚನ್ನಸಾಗರ ಸಂಪೂರ್ಣ ಮುಳುಗಿ ಹೋಗಿತ್ತು. ಆ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿಯಾಗಿದ್ದ ಡಾ. ನಾಗಲಾಂಬಿಕಾದೇವಿ, ತಹಶೀಲ್ದಾರ್ ನಾಗರಾಜ್ ಮತ್ತು ನಾನು ಜೆತೆಗೂಡಿ ೫ ಅಡಿ ಎತ್ತರದಲ್ಲಿ ಹರಿಯುತ್ತಿದ್ದ ನದಿಯಲ್ಲಿ ನಡೆದುಕೊಂಡು ಹೋಗಿದ್ದನ್ನು ಸ್ಮರಿಸಿ, ಕಾಸ್ವೆ ಇದ್ದಂತಹ ಈ ರಸ್ತೆಗೆ ಸೇತುವೆ ನಿರ್ಮಿಸಲಾಯಿತು. ಮುಂದಿನ ದಿನಗಳಲ್ಲಿ ಶಾಶ್ವತ ಪರಿಹಾರ ಬಗ್ಗೆ ಚಿಂತಿಸಲಾಗಿದೆ ಎಂದರು.
ಇದೇ ವೇಳೆ ಕೊಡಗದಾಲ ಗ್ರಾಮದ ಕೆರೆ ಮಂಗೆ ಬಿದ್ದಿದ್ದ ಸ್ಥಳವನ್ನು ವೀಕ್ಷಿಸಿ ಮಣ್ಣಿನ ಚೀಲವನ್ನು ತುಂಬುತ್ತಿದ್ದುದ್ದನ್ನು ಗಮನಿಸಿದರು. ಸಂಬಂಧಪಟ್ಟ ಇಲಾಖೆಯವರು ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಏರಿಯನ್ನು ದುರಸ್ಥಿ ಮಾಡುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಸುರೇಶ್‌ಅಚಾರ್, ತಾಲ್ಲೂಕು ಪಂಚಾಯಿತಿ ಇಒ ಲಕ್ಷ್ಮಣ್, ಜಿಲ್ಲಾ ಪಂಚಾಯಿತಿ ಎಇ ಸುರೇಶ್ ರೆಡ್ಡಿ, ಕೊರಟಗೆರೆ ತಹಶೀಲ್ದಾರ್ ನಾಯಿದ ಜಮ್ ಜಮ್, ಕೊರಟಗೆರೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ದೊಡ್ಡಸಿದ್ದಪ್ಪ, ಕೊರಟಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವತ್ಥ್ ನಾರಾಯಣ್, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಸಿ. ಬ್ಯೆರಪ್ಪ, ಕೊಡಗದಾಲ ಗ್ರಾಮ ಪಂಚಾಯತ್ ಪಿಡಿಒ ಸೌಮ್ಯವತಿ, ಆರ್‌ಐ ಜಯರಾಮಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ, ಸಿಡಿಪಿಒ ಅನಿತಾ ಮತ್ತಿತರರು ಇದ್ದರು.