ನದಿ ದಂಡೆಯ ಗ್ರಾಮಸ್ಥರ, ಪ್ರವಾಹಪೀಡಿತ ಗ್ರಾಮಗಳಿಗೆ ಜಿಲ್ಲಾಧಿಕಾರಿಗಳ ಭೇಟಿ: ಪರಿಶೀಲನೆ

ವಿಜಯಪುರ, ಜು.13-ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು, ಪ್ರವಾಹಪೀಡಿತ ನಿಡಗುಂದಿ ತಾಲೂಕಿನ ವಿವಿಧ ಹಳ್ಳಿಗಳಿಗೆ ಜುಲೈ 12ರಂದು ಭೇಟಿ ನೀಡಿದರು. ಸಹಾಯಕ ಆಯುಕ್ತರಾದ ಬಲರಾಮ ಲಮಾಣಿ ಅವರೊಂದಿಗೆ ಮೊದಲಿಗೆ ಯಲಗೂರ ಗ್ರಾಮಕ್ಕೆ ಭೇಟಿ ನೀಡಿದರು.
ರಾಜ್ಯದ ವಿವಿಧೆಡೆ ಮತ್ತು ಪಕ್ಕದ ಮಹಾರಾಷ್ಟ್ರರಾಜ್ಯದಲ್ಲಿ ನಿರಂತರ ಮಳೆಯಾಗುತ್ತಿದೆ. ಇದರಿಂದಾಗಿ ನದಿಗಳು ತುಂಬಿ ಯಾವುದೇ ಸಂದರ್ಭದಲ್ಲಿ ತೀವ್ರ ಹಾನಿ ಸಂಭವಿಸಬಹುದಾಗಿದೆ. ಹೀಗಾಗಿ ನದಿತೀರದ ಗ್ರಾಮಸ್ಥರು ನದಿಯ ಬಳಿಗೆ ಹೋಗಬಾರದು. ಜಾನುವಾರು ಬಿಡಬಾರದು. ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು ಎಂದು ಗ್ರಾಮಸ್ಥರಿಗೆ ತಿಳಿವಳಿಕೆ ಮೂಡಿಸಿದರು. ಬಳಿಕ ಜಿಲ್ಲಾಧಾಕಾರಿಗಳು, ನದಿ ದಂಡೆಯ ಊರಾದ ಯಲ್ಲಮ್ಮನ ಬೂದಿಹಾಳ ಗ್ರಾಮಕ್ಕೆ ತೆರಳಿದರು. ದೇವಸ್ಥಾನಕ್ಕೆ ಬರುವ ಭಕ್ತರು ಮತ್ತು ಗ್ರಾಮಸ್ಥರು ಸ್ನಾನಕ್ಕಾಗಿ ನದಿಗೆ ಇಳಿಯಬಾರದು ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು. ಮಳೆ ಹಿನ್ನೆಲೆಯಲ್ಲಿ ನದಿಯತ್ತ ಯಾರು ಹೋಗಬಾರದು ಎನ್ನುವ ಫಲಕವೊಂದನ್ನು ಹಾಕಿಸಲು ಮತ್ತು ಈ ಸ್ಥಳದಲ್ಲಿ ಪೆÇಲೀಸ್ ಪೇದೆಯೊಬ್ಬರನ್ನು ನೇಮಿಸಲು ಕ್ರಮ ವಹಿಸುವಂತೆ ನಿರ್ದೇಶನ ನೀಡಿದರು. ಬಳಿಕ ಜಿಲ್ಲಾಧಿಕಾರಿಗಳು ಹೊಳೆಮಸೂತಿ ಗ್ರಾಮಕ್ಕೆ ಭೇಟಿ ನೀಡಿದರು. ಅಲ್ಲಿನ ಅಂಗನವಾಡಿಗೆ ತೆರಳಿ ಆಹಾರ ಸಾಮಗ್ರಿಗಳನ್ನು ಪರಿಶೀಲಿಸಿದರು.
ಸ್ಮಶಾನ ಜಾಗಕ್ಕೆ ಮನವಿ: ಯಲಗುರ ಗ್ರಾಮ ಭೇಟಿ ವೇಳೆ ಅಲ್ಲಿನ ಗ್ರಾಮಸ್ಥರ ಸ್ಮಶಾನಕ್ಕೆ ಜಾಗ ಕೇಳಿದರು. ಯಲಗುರ ಮುಳುಗಡೆ ಪ್ರದೇಶ ವ್ಯಾಪ್ತಿಯನ್ನು ಸರಿಯಾಗಿ ಗುರುತಿಸಿದ ಬಳಿಕ ಉಳಿಯುವ ಜಾಗವನ್ನು ಸ್ಮಶಾನಕ್ಕಾಗಿ ಬಳಕೆ ಮಾಡಿಕೊಳ್ಳಲು ಪ್ರಸ್ತಾವನೆಯನ್ನು ಸಿದ್ದಪಡಿಸಿ ಸಲ್ಲಿಸಲು ತಹಸೀಲ್ದಾರ ಅನಿಲಕುಮಾರ ಡವಳಗಿ ಅವರಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಪರಿಶೀಲನೆ: ಗ್ರಾಮಗಳ ಭೇಟಿ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು, ಯಲಗೂರ, ಮಸೂತಿ ಮತ್ತು ಯಲ್ಲಮ್ಮನ ಬೂದಿಹಾಳ ಗ್ರಾಮಗಳಲ್ಲಿ ಹಿಂದಿನ ವರ್ಷ ದಲ್ಲಿ ಆಗಿರುವ ಬೆಳೆ ಮತ್ತು ಮನೆ ಹಾನಿಗೆ ದೊರೆತ ಪರಿಹಾರ, ಬೆಳೆ ವಿಮೆ ಪರಿಹಾರದ ಬಗ್ಗೆ ಮಾಹಿತಿ ಪಡೆದು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ನಿಡಗುಂದಿ ತಾಪಂ ಇಓ ವಿ ಎಸ್ ಹಿರೇಮಠ, ನಿಡಗುಂದಿ ಪುರಸಭೆ ಮುಖ್ಯಾಧಿಕಾರಿ ರಮೇಶ ಮುಡಗೋಳ, ಯಲಗೂರ ಪಿಡಿಓ ಹನುಮಂತ ವಡ್ಡರ, ಬಳಬಟ್ಟಿ ಪಿಡಿಓ ಮಹಾಂತೇಶ ಹೊಸಗೌಡರ ಹಾಗೂ ಇತರರು ಇದ್ದರು.