ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದ ಯುವಕನ ಶವ ಪತ್ತೆ

ಚಡಚಣ,ಸೆ.14-ಭೀಮಾ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದ ಹತ್ತಳ್ಳಿ ಗ್ರಾಮದ ಯುವಕ ರಮೇಶ ದುಂಡಪ್ಪಾ ಬಸರಗಿ (25) ಶವ ಮಹಾರಾಷ್ಟ್ರ ಕರ್ನಾಟಕ ಗಡಿ ಭಾಗದ ಧೂಳಖೇಡ ಸೇತುವೆ ಬಳಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸ್ವಗ್ರಾಮ ಹತ್ತಳ್ಳಿಗೆ ಬೈಕ್ ಮೇಲೆ ಉಮರಾಣಿ ಬಾಂದಾರ ಮೇಲೆ ಹಾದು ಹೋಗುತ್ತಿದ್ದಾಗ ಭೀಮಾ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ. ಧೂಳಖೇಡ ಸೇತುವೆಯ ಭೀಮಾ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಚಡಚಣ ಸಿಪಿಐ ಚಿದಂಬರ ಮಡಿವಾಳ, ಪಿಎಸ್ಐ ಸತೀಶ ಗೌಡರ್ ಮತ್ತು ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ನೆರೆಯ ಮಹಾರಾಷ್ಟ್ರ ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಉಜನಿ ಜಲಾಶಯದಿಂದ ಭೀಮಾ ನದಿಗೆ ಭಾರಿ ಪ್ರಮಾಣದ ನೀರು ಹರಿಯಬಿಡಲಾಗಿತ್ತು. ರಮೇಶ ಬಸರಗಿ ಅವರು ತಂದೆ ದುಂಡಪ್ಪಾ ಬಸರಗಿ ಅವರೊಂದಿಗೆ ಸೊಲಾಪುರಕ್ಕೆ ಹೋಗಿ ಮರಳಿ ಬರುತ್ತಿದ್ದಾಗ ಈ ದುರಂತರ ಸಂಭವಿಸಿದೆ. ದುಂಡಪ್ಪಾ ಅವರು ಉಮರಾಣಿ ಬಾಂದಾರ ಮೇಲೆ ನಡೆದುಕೊಂಡು ಬಂದರೆ, ಅವರ ಮಗ ರಮೇಶ ಬೈಕ್ ಮೇಲೆ ಬರುತ್ತಿದ್ದಾಗ ನೀರಿನ ರಬಸಕ್ಕೆ ಸಿಲುಕಿ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದ.