ನದಿಗೆ ಹಾರಿದ್ದ ಯುವಕನ ಮೃತದೇಹ ಪತ್ತೆ

ಬಂಟ್ವಾಳ, ನ.೧೦- ಪಾಣೆಮಂಗಳೂರು ಸೇತುವೆಯ ಬಳಿ ಬ್ಯಾಗನ್ನಿಟ್ಟು ಯುವಕನೋರ್ವ ನದಿಗೆ ಹಾರಿದ ಘಟನೆ ರವಿವಾರ ನಡೆದಿದ್ದು, ನಿನ್ನೆ ಸಂಜೆ ನದಿ ಕಿನಾರೆಯಲ್ಲಿ ಶವ ಪತ್ತೆಯಾಗಿದೆ.

ಮೃತ ಯುವಕನನ್ನು ಪುತ್ತೂರು ತಾಲೂಕಿನ ಬಲ್ನಾಡು ಕಾಂತಿಲ ನಿವಾಸಿ ಸುಚೇತನ್(27) ಎಂದು ಗುರುತಿಸಲಾಗಿದೆ. ಸೇತುವೆಯ ಬಳಿ ಸಿಕ್ಕಿದ ಬ್ಯಾಗಿನಲ್ಲಿ ಸಿಕ್ಕ ದಾಖಲೆಯ ಆಧಾರದಲ್ಲಿ ಯುವಕ ನದಿಗೆ ಹಾರಿರುವ ಬಗ್ಗೆ ತಿಳಿದುಬಂದಿದೆ. ರವಿವಾರದಂದು ದಿನವಿಡಿ ಹುಡುಕಾಡಿದರೂ ಮೃತದೇಹ ಪತ್ತೆಯಾಗಿರಲಿಲ್ಲ. ಆದರೆ ಸೋಮವಾರದಂದು ಶವ ಪತ್ತೆಯಾಗಿದೆ. ಈತ ಮಂಗಳೂರಿನ ಪಿಜಿಯಿಂದ ಬಂದು ಆದಿತ್ಯವಾರ ಬೆಳಗ್ಗೆ ಪಾಣೆಮಂಗಳೂರು ಹೊಸ ಸೇತುವೆಯಿಂದ ಹಾರಿದ್ದು, ಯಾರೋ ಅದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬ್ಯಾಗಿನಲ್ಲಿ ಸಿಕ್ಕ ಆಧಾರ್ ಕಾರ್ಡ್, ವೋಟರ್ ಐಡಿಯ ಆಧಾರದಲ್ಲಿ ಇದೇ ಯುವಕ ನದಿಗೆ ಹಾರಿದ್ದಾನೆ ಎಂದು ಸಂಶಯಿಸಿ ಮನೆಗೆ ಮಾಹಿತಿ ನೀಡಲಾಗಿತ್ತು. ಮನೆಯವರು ಕೂಡ ಆಗಮಿಸಿದ್ದರು. ಬಳಿಕ ರಾತ್ರಿವರೆಗೂ ಬಂಟ್ವಾಳ ಅಗ್ನಿಶಾಮಕ ದಳದವರು, ಸ್ಥಳೀಯ ಈಜುಗಾರರು ಬೋಟಿನ ಮೂಲಕ ಸಂಜೆಯವರೆಗೂ ಹುಡುಕಾಡಿದರೂ, ಯುವಕನ ಪತ್ತೆಯಾಗಿರಲಿಲ್ಲ. ನಿನ್ನೆ ಸಂಜೆ ವೇಳೆ ನದಿ ಕಿನಾರೆಗೆ ಶವ ತೇಲಿ ಬಂದಿತ್ತು. ಬಂಟ್ವಾಳ ನಗರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.