ನದಿಗೆ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ

ಕಲಬುರಗಿ,ಜು.21-ಹೊಟ್ಟೆ ನೋವು ಮತ್ತು ಮುಖದ ಮೇಲೆ ಮೊಡವೆ ಆದವು ಎಂಬ ಕಾರಣಕ್ಕೆ ಮನನೊಂದ ವಿದ್ಯಾರ್ಥಿನಿಯೊಬ್ಬಳು ಶಹಾಬಾದ ಸಮೀಪದ ಶಂಕರವಾಡಿ ಬಳಿಯ ಕಾಗಿಣಾ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಚಿತ್ತಾಪುರ ತಾಲ್ಲೂಕಿನ ಗುಂಡುಗುರ್ತಿ ಗ್ರಾಮದ ಭಾಗ್ಯಶ್ರೀ ಬಸವರಾಜ ಹೊಸಳ್ಳಿ (21) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.
ಕಲಬುರಗಿ ನಗರದ ಖಾಸಗಿ ಕಾಲೇಜಿನಲ್ಲಿ ಬಿ.ಎಸ್.ಸಿ. ಓದುತ್ತಿದ್ದ ಭಾಗ್ಯಶ್ರೀ ಬುಧವಾರ ಮಧ್ಯಾಹ್ನ 3.30ರ ಸುಮಾರಿಗೆ ತನ್ನ ಸ್ಕೂಟಿಯನ್ನು ಸೇತುವೆ ಮೇಲೆ ನಿಲ್ಲಿಸಿ ನದಿಗೆ ಹಾರಿದ್ದಾಳೆ. ದೂರದಲ್ಲಿದ್ದ ಪ್ರತ್ಯಕ್ಷದರ್ಶಿಗಳು ಯುವತಿ ನದಿಗೆ ಹಾರಿದನ್ನು ಗಮನಿಸಿ, ಸೇತುವೆ ಬಳಿಗೆ ಧಾವಿಸಿ ನೋಡುವಷ್ಟರಲ್ಲಿಯೇ ಯುವತಿ ನೀರಿನಲ್ಲಿ ಮುಳುಗಿದ್ದಳು. ತಕ್ಷಣವೇ ಅಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಶಹಾಬಾದ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ. ಅಶೋಕ ಪಾಟೀಲ, ಅಗ್ನಿಶಾಮಕದಳ, ಎನ್.ಡಿ.ಆರ್.ಎಫ್.ತಂಡ ಮತ್ತು ಮೀನುಗಾರರು ನದಿಯಲ್ಲಿ ಹುಡುಕಾಟ ಸಂಜೆಯವರೆಗೂ ಹುಡುಕಾಟ ನಡೆಸಿದರೂ ಶವ ಪತ್ತೆಯಾಗಿರಲಿಲ್ಲ. ಇಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಯುವತಿಯ ಶವ ದೊರೆತಿದ್ದು, ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.