ನದಾಫ್, ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯ

ದಾವಣಗೆರೆ,ಡಿ.31: ಎಲ್ಲಾ ಕ್ಷೇತ್ರಗಳಲ್ಲಿಯು ಹಿಂದುಳಿದಿರುವ ನದಾಫ್ ಪಿಂಜಾರ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂದು ಕರ್ನಾಟಕ ರಾಜ್ಯ ನದಾಫ್, ಪಿಂಜಾರ ಸಂಘದ ಜಿಲ್ಲಾಧ್ಯಕ್ಷ ಜೆ.ಎಚ್.ಉಕ್ಕಡಗಾತ್ರಿ ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರಾಜ್ಯದಲ್ಲಿ ಅಂದಾಜು 23 ಲಕ್ಷ ಜನಸಂಖ್ಯೆ ಹೊಂದಿರುವ ನದಾಫ್, ಪಿಂಜಾರ ಸಮುದಾಯವು ಶೈಕ್ಷಣಿಕ, ಆರ್ಥಿಕ, ರಾಜಕೀಯ, ಔದ್ಯೋಗಿಕ ಕ್ಷೇತ್ರಗಳಲ್ಲಿ ಅತ್ಯಂತ ಹಿಂದುಳಿದಿದೆ. ಹೀಗಾಗಿ ಸಮುದಾಯದ ಅಭಿವೃದ್ಧಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂದು ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.ತಕ್ಷಣವೇ ನದಾಫ್, ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ನಮ್ಮ ಸಮಾಜ ಬಾಂಧವರಿಗೆ ಪ್ರವರ್ಗ-1ರ ಜಾತಿ ಪ್ರಮಾಣಪತ್ರ ನೀಡಬೇಕು. ಪ್ರಧಾನಮಂತ್ರಿಯವರ 15 ಅಂಶಗಳ ಕಾರ್ಯಕ್ರಮದ ಸಮಿತಿಯಲ್ಲಿ ನಮ್ಮ ಸಮುದಾಯದವರಿಗೂ ಅವಕಾಶ ನೀಡಬೇಕೆಂದು ಒತ್ತಾಯಿಸಿ, ನಾಳೆ (ಜ.1ರಂದು) ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಅಯಾಜ್ ಹುಸೇನ್, ಅನ್ವರ್ ಹುಸೇನ್, ಎ.ಫಕೃದ್ದೀನ್ ಮತ್ತಿತರರು ಹಾಜರಿದ್ದರು.