ನಡ್ಡಾ ಭೇಟಿ ಕೈ-ತೆನೆಗೆ ಕಳವಳ

ಬೆಂಗಳೂರು, ಜ. ೫- ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ರಾಜ್ಯಕ್ಕೆ ಬಂದಿದ್ದಾರೆ. ಇದರಿಂದ ಸಹಜವಾಗಿಯೇ ಕಾಂಗ್ರೆಸ್-ಜೆಡಿಎಸ್ ನಾಯಕರುಗಳಿಗೆ ಕಳವಳ ಶುರುವಾಗಿದೆ ಎಂದು ಬಿಜೆಪಿ ಹೇಳಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ನಮ್ಮ ಪಕ್ಷದ ರಾಷ್ಟ್ರಾಧ್ಯಕ್ಷರಾದ ಜೆ.ಪಿ. ನಡ್ಡಾ ಅವರು ರಾಜ್ಯಕ್ಕೆ ಬಂದಿಳಿದಿದ್ದಾರೆ. ಇದು ಸಹಜವಾಗಿಯೇ ತಮಗೆಲ್ಲ ಕಳವಳವಾಗಿರುವುದರಿಂದ ತಮ್ಮ ಟೂಲ್ ಕಿಟ್‌ಗಳನ್ನು ಹೊರ ತೆಗೆದು ಬಿಜೆಪಿ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಲು ಪ್ರಯತ್ನಿಸಬಹುದು ಎಂದು ಕಾಂಗ್ರೆಸ್-ಜೆಡಿಎಸ್‌ಗಳನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್‌ನವರ ಟೂಲ್‌ಕಿಟ್‌ಗಳು ಸಹಜವಾಗಿ ಪ್ರಾದೇಶಿಕತೆ, ಭಾಷೆ, ಜಾತಿ, ಧರ್ಮಗಳನ್ನು ಅವಲಂಬಿಸಿದ್ದು, ಇಂತಹುದೆ ಯಾವುದಾದರು ಸುಳ್ಳು ಸುದ್ದಿಗಳನ್ನು ಹರಿಯ ಬಿಡುವುದನ್ನು ನಾವು ಎದುರು ನೋಡುತ್ತಿದ್ದೇವೆ ಎಂದೂ ವ್ಯಂಗ್ಯವಾಡಿರುವ ಬಿಜೆಪಿ, ಧಾವಂತದಲ್ಲಿ ನಂದಿನಿ-ಅಮೂಲ್ ಬಗ್ಗೆ ಸುಳ್ಳಾಡಿದಂತೆ ಮತ್ತೊಮ್ಮೆ ಸುಳ್ಳಾಡಿ ಉಳಿದಿರುವ ನಿಮ್ಮ ಅಲ್ಪಸ್ವಲ್ಪ ಮರ್ಯಾದೆಯನ್ನೂ ಕಳೆದುಕೊಳ್ಳಬೇಡಿ, ಸುಳ್ಳು ನಾಳೆಯೂ ಆಡಬಹುದು, ಮರ್ಯಾದೆ ಮತ್ತೆ ಬರುವುದಿಲ್ಲ ಎಂದು ವ್ಯಂಗ್ಯವಾಡಿದೆ.
ಈಗಾಗಲೇ ತುಮಕೂರು, ಚಿತ್ರದುರ್ಗ, ದಾವಣಗೆರೆಯ ೨೪ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವನ್ನು ಭದ್ರಪಡಿಸಿಕೊಳ್ಳುತ್ತಿರುವ ಬಿಜೆಪಿಯನ್ನು ತಡೆಯಬೇಕಾದದ್ದು, ವಿರೋಧ ಪಕ್ಷಗಳು ಅಗತ್ಯವಾಗಿ ಮಾಡಲೇಬೇಕಾದ ಕರ್ಮ. ಆದರೆ, ಇದರಲ್ಲಿ ನೀವು ವಿಫಲರಾಗುವುದಂತೂ ಕಟ್ಟಿಟ್ಟ ಬುತ್ತಿ, ನಿಮ್ಮ ಸುಳ್ಳುಗಳಿಗೆ ನಾವು ಮಾತನಾಡಲ್ಲ, ರಾಜ್ಯದ ಅಭಿವೃದ್ಧಿ ಮಾತನಾಡುತ್ತದೆ ಎಂದು ಬಿಜೆಪಿ ಕುಟುಕಿದೆ.ಸ್ಮಾರ್ಟ್‌ಸಿಟಿ ಯೋಜನೆಯಡಿ, ದಾವಣಗೆರೆ-ತುಮಕೂರಿನಲ್ಲಿ ಆಗಿರುವ ಅಭಿವೃದ್ಧಿಯನ್ನು ಕಾಂಗ್ರೆಸ್ ಕನಸಲ್ಲೂ ಕಾಣುವುದಕ್ಕಾಗುವುದಿಲ್ಲ. ಹಾಗೆಯೇ ಚಿತ್ರದುರ್ಗದಲ್ಲಿ ೧೯೬೦೯೩ ಮನೆಗಳಿಗೆ ಕುಡಿಯುವ ನೀರು ಪೂರೈಕೆ ಎಂಬುದೆಲ್ಲ ಏನೆಂದು ಜಾತಿಹುಳು ಜೆಡಿಎಸ್‌ನ ಜಡಮಂಡೆಗೆ ಅರ್ಥವೂ ಆಗುವುದಿಲ್ಲ ಎಂದು ಬಿಜೆಪಿ ಟ್ವಿಟರ್‌ನಲ್ಲಿ ಗೇಲಿ ಮಾಡಿದೆ.