ನಡ್ಡಾ ಗೋವಾ ಪ್ರವಾಸ ವಿವಿಧ ಮುಖಂಡರೊಂದಿಗೆ ಚರ್ಚೆ

ಪಣಜಿ,ನ.೨೫- ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಪಕ್ಷವನ್ನು ಅಧಿಕಾರಕ್ಕೆ ತರಲು ಬಿಜೆಪಿ ಪಕ್ಷ ಇನ್ನಿಲ್ಲದ ಹರಸಾಹಸ ನಡೆಸಿದೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ಎರಡು ದಿನಗಳ ಗೋವಾ ಪ್ರವಾಸ ಕೈಗೊಂಡಿದ್ದು ಚುನಾವಣೆ ಸಿದ್ಧತೆ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಸೇರಿದಂತೆ ವಿವಿಧ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

ಪಣಜಿ ಯಲ್ಲಿರುವ ಮಹಾಲಕ್ಷ್ಮಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಎರಡು ದಿನಗಳ ಪ್ರವಾಸ ಅಧಿಕೃತವಾಗಿ ಆರಂಭಿಸಿರುವ ಅವರು ಪಕ್ಷದ ಕಾರ್ಯಕರ್ತರು ಮತ್ತು ನಾಯಕರೊಂದಿಗೆ ಸಮಾಲೋಚನೆ ನಡೆಸಿ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವ ಕುರಿತಂತೆ ರಣತಂತ್ರ ರೂಪಿಸಿದ್ದಾರೆ.

ಗೋವಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ನಾಯಕರೊಂದಿಗೆ ಚುನಾವಣಾ ಕಾರ್ಯಕ್ರಮಗಳ ಕುರಿತು ಸಮಾಲೋಚನೆ ನಡೆಸಿದ ಅವರು ಮತ್ತೊಮ್ಮೆ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಸೂಚಿಸಿದ್ದಾರೆ

ಚುನಾವಣಾ ಉಸ್ತುವಾರಿ ಹೊಣೆ:

ಗೋವಾ ಚುನಾವಣಾ ಉಸ್ತುವಾರಿಯನ್ನಾಗಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಕೇಂದ್ರ ಪ್ರವಾಸೋದ್ಯಮ ಸಚಿವ ಜೈಕಿಶನ್ ರೆಡ್ಡಿ ಸಂಸದ ದರ್ಶನ್ ಜೊರ್ದೋಶ್ ಅವರನ್ನು ನೇಮಕ ಮಾಡಲಾಗಿದೆ.

೨೦೨೨ರ ಆರಂಭದಲ್ಲಿ ಗೋವಾ ಸೇರಿದಂತೆ ದೇಶದ ೫ರಾಜ್ಯಗಳ ಚುನಾವಣೆ ನಡೆಯಲಿದೆ.

ಟಿಎಂಸಿ ಯಿಂದ ರಾಜ್ಯಪಾಲರಿಗೆ ಪತ್ರ

ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ ನಿಯೋಗ ರಾಜ್ಯಪಾಲ ಪಿಎಸ್ ಶ್ರೀಧರನ್ ಪಿಳ್ಳೆ ಅವರಿಗೆ ದೂರು ಸಲ್ಲಿಸಿ, ಅವರ ರಾಜೀನಾಮೆ ಪಡೆಯುವಂತೆ ಆಗ್ರಹಿಸಿದೆ.

ತೃಣಮೂಲ ಕಾಂಗ್ರೆಸ್ ಪಕ್ಷದ ನಿಯೋಗದಲ್ಲಿ ಲೋಕಸಭಾ ಸಂಸದ ಸೌಗತ ರಾಯ್, ಕೇಂದ್ರದ ಮಾಜಿ ಸಚಿವ ಬಾಬುಲ್ ಸುಪ್ರಿಯೋ, ಗೋವಾ ಮಾಜಿ ಮುಖ್ಯಮಂತ್ರಿ ಲುಜಿಹಿನೋ ಪೆಲೇರಿಯೋ ಸೇರಿದಂತೆ ಹಲವು ಹಿರಿಯ ನಾಯಕರು ಪಾಲ್ಗೊಂಡಿದ್ದರು