ನಡ್ಡಾ ಉತ್ತರಾಧಿಕಾರಿ ಯಾರು ಬಿಜೆಪಿಯಲ್ಲಿ ಚರ್ಚೆ

ನವದೆಹಲಿ, ಜೂ. ೧೦- ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾಗಿರುವ ಜೆ.ಪಿ. ನಡ್ಡಾ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದರ ಬೆನ್ನಲ್ಲೇ ನೂತನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಯಾರಾಗಲಿದ್ದಾರೆ ಎಂಬ ಬಗ್ಗೆ ಪಕ್ಷದಲ್ಲಿ ಚರ್ಚೆ ಆರಂಭವಾಗಿದೆ.
ಬಿಜೆಪಿಯ ನಿಯಮದ ಪ್ರಕಾರ ಪಕ್ಷದ ಅಧ್ಯಕ್ಷ ಸ್ಥಾನ ಹಾಗೂ ಮಂತ್ರಿ ಪದವಿ ಎರಡು ಹುದ್ದೆಗಳನ್ನು ಒಬ್ಬರೇ ನಿರ್ವಹಿಸುವಂತಿಲ್ಲ. ನಡ್ಡಾ ಅವರು ಸಂಪುಟ ದರ್ಜೆ ಸಚಿವರಾಗಿರುವುದರಿಂದ ಮುಂದಿನ ಪಕ್ಷದ ಅಧ್ಯಕ್ಷರು ಯಾರು ಎಂಬುದು ಕುತೂಹಲಕ್ಕೇಡೆ ಮಾಡಿಕೊಟ್ಟಿದೆ.
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಘ್ ಚೌಹಾಣ್ ಹೆಸರು ಮುನ್ನೆಲೆಗೆ ಬಂದಿತ್ತು. ಆದರೆ ಶಿವರಾಜ್ ಸಿಂಘ್ ಕೇಂದ್ರ ಸಂಪುಟಕ್ಕೆ ಸೇರಿದ್ದಾರೆ.
ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಬಿಜೆಪಿ ಗೆಲುವಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೆಂಬಲ ಬೇಕಾಗಿಲ್ಲ ಎಂದು ನಡ್ಡಾ ನೀಡಿರುವ ಹೇಳಿಕೆ ಬಿಜೆಪಿ ಪಾಳೆಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು.
ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಪಟ್ಟ ಅಲಂಕರಿಸುವ ವ್ಯಕ್ತಿ ಆರ್‌ಎಸ್‌ಎಸ್ ಅಥವಾ ಬಿಜೆಪಿ ಜೊತೆ ಉತ್ತಮ ಸಂಬಂಧ ಹೊಂದಿರುವ ವ್ಯಕ್ತಿಯನ್ನು ಆಯ್ಕೆ ಮಾಡಬೇಕೆಂಬ ಬಗ್ಗೆ ಚಿಂತನೆಗಳು ನಡೆದಿವೆ.
೨೦೧೪ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ವೇಳೆ ನಡ್ಡಾ ಅವರಿಗೆ ಆರೋಗ್ಯ ಖಾತೆ ನೀಡಲಾಗಿತ್ತು. ಅಮಿತ್ ಶಾ ಸಂಪುಟ ಸೇರಿದ ಮೇಲೆ ಬಳಿಕ ೨೦೨೦ರಲ್ಲಿ ನಡ್ಡಾ ಅವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಲಾಯಿತು. ೨೦೨೨ರಲ್ಲೆ ಅಂತ್ಯವಾಗಿತ್ತು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಡ್ಡಾಅವರನ್ನೇ ಮುಂದುವರಿಸಿತ್ತು. ಈಗ ನಡ್ಡಾ ಅವರು ಉತ್ತರಾಧಿಕಾರಿ ಯಾರಾಗಲಿದ್ದಾರೆ ಎಂಬುದು ಕುತೂಹಲಿಕ್ಕೆ ಕಾರಣವಾಗಿದೆ.