ನಡೆ, ನುಡಿ ಕನ್ನಡವಾಗಿರಲಿ ಸಿ.ಎಂ. ಆಶಯ

ಬೆಂಗಳೂರು, ನ. ೭- ಕರ್ನಾಟಕದಲ್ಲಿ ಕನ್ನಡಕ್ಕೆ ಅಗ್ರಸ್ಥಾನ. ಕನ್ನಡದ ಕೆಲಸಕ್ಕೆ ಮತ್ತು ಕನ್ನಡ ಏಳ್ಗೆಗೆ ಸರ್ಕಾರ ಸದಾ ಬದ್ಧವಾಗಿರಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಕನ್ನಡ ಭಾಷೆಯ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸದಾ ಬದ್ಧವಾಗಿರಲಿದೆ. ಕನ್ನಡ ಭಾಷೆ ಮತ್ತು ಸಾಹಿತ್ಯ ಹಾಗೂ ಕಲೆಗಳ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಇದೇ ನವೆಂಬರ್‌ನಿಂದ ೨೦೨೧ನೇ ಅಕ್ಟೋಬರ್ ೩೧ ರವರೆಗೂ ಕನ್ನಡ ಕಾಯಕ ವರ್ಷವನ್ನು ಆಚರಿಸಲಾಗುವುದು ಎಂದರು.
೨೦೨೦ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ವ್ಯವಹಾರದಲ್ಲಿ ಕನ್ನಡವನ್ನು ಬಳಸುವ ಮೂಲಕ ಕನ್ನಡ ಭಾಷೆಯನ್ನು ಬೆಳೆಸಬೇಕು. ಕನ್ನಡವನ್ನು ಇಲ್ಲಿ ಬಳಸದಿದ್ದರೆ ಬೇರೆಲ್ಲೂ ಬೆಳೆಸಲು ಸಾಧ್ಯವಿಲ್ಲ ಎಂದರು.
ಕನ್ನಡ ನಮ್ಮ ಹೃದಯದ ಭಾಷೆ, ವ್ಯವಹಾರದ ಭಾಷೆಯೂ ಆಗಬೇಕು. ದೈನಂದಿನ ವ್ಯವಹಾರದಲ್ಲಿ ಹೆಚ್ಚು ಹೆಚ್ಚು ಕನ್ನಡವನ್ನೇ ಬಳಸುವಂತಾಗಬೇಕು. ಭಾಷೆಯನ್ನು ಬಳಸಿದಂತೆ ಅದು ಬೆಳೆಯುತ್ತಾ ಹೋಗುತ್ತದೆ ಎಂದರು.
ಆಧುನಿಕ ಯುಗದಲ್ಲಿ ನಮ್ಮ ಬದುಕನ್ನು ಆವರಿಸಿಕೊಂಡು ಶರವೇಗದಲ್ಲಿ ಬೆಳೆಯುತ್ತಿರುವ ಮಾಹಿತಿ ತಂತ್ರಜ್ಞಾನಕ್ಕೆ ತಕ್ಕಂತೆ ನಾವು ನಮ್ಮ ಭಾಷೆಯನ್ನು ಸಜ್ಜುಗೊಳಿಸುವುದು ಅನಿವಾರ್ಯ ಎಂದರು.
ಕನ್ನಡ ನಾಡು-ನುಡಿ, ಸಾಹಿತ್ಯ, ಸಂಸ್ಕೃತಿ ಎನ್ನುವುದು ನಮ್ಮ ಅಸ್ಮಿತೆಯ ಭಾಗವಾಗಿದೆ. ಭಾಷೆ ಮತ್ತು ಜನ್ಮಭೂಮಿ ನಮಗೆ ಹೆತ್ತ ತಾಯಿಗೆ ಸಮಾನ. ಹೆತ್ತ ತಾಯಿಗೆ ಸಲ್ಲುವ ಗೌರವ ಆಧರಗಳು ನಮ್ಮ ಭಾಷೆ ಮತ್ತು ನಾವು ಹುಟ್ಟಿರುವ ನಾಡಿಗೆ ಸಲ್ಲಬೇಕು ಎಂದರು.
ಕನ್ನಡದ ಸಾಮರ್ಥ್ಯ, ಅದರ ತೀಕ್ಷ್ಣತೆ, ಅದರ ಸೂಕ್ಷ್ಮತೆ, ಅದರ ಶಕ್ತಿ, ಅದರ ಓಜಸ್ಸು ಜಗತ್ತಿನ ಯಾವ ಭಾಷೆಗೂ ಕೀಳಲ್ಲ ಎಂದು ರಾಷ್ಟ್ರಕವಿ ಕುವೆಂಪು ಹೇಳಿರುವುದನ್ನು ಮುಖ್ಯಮಂತ್ರಿ ಯಡಿಯೂರಪ್ಪ ಸ್ಮರಿಸಿದರು.
ಕನ್ನಡದ ಸೌಂದರ್ಯ ಸತ್ವವನ್ನು ಕಾಪಾಡುವ ಹೊಣೆ ನಮ್ಮೆಲ್ಲರದ್ದು ಎಂದ ಅವರು, ನಮ್ಮ ನಡೆ-ನುಡಿ ಸದಾ ಕನ್ನಡವಾಗಿರಲಿ ಎಂದು ಅವರು ಹೇಳಿದರು.
ಈ ವರ್ಷ ಅತ್ಯಂತ ಪಾರದರ್ಶಕವಾಗಿ ನಾಡಿನ ಮೂಲೆ ಮೂಲೆಗಳಲ್ಲೂ ಎಲೆಮರೆಯ ಕಾಯಿಯಂತಿರುವ ಸಾಧಕರನ್ನು ಶೋಧಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದೇವೆ. ನಾಡು-ನುಡಿ ಅಭಿವೃದ್ಧಿಗೆ ಈ ಸಾಧಕರ ಸೇವೆ ಅಪಾರ. ಸಾಮಾನ್ಯರಲ್ಲಿ ಅಸಮಾನ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಇವರೆಲ್ಲರೂ ತಮ್ಮದೇ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ೬೫ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಪ್ರಶಸ್ತಿ ೧ ಲಕ್ಷ ರೂ. ನಗದು ಮತ್ತು ೨೦ ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿದೆ.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣಸವದಿ, ಪ್ರವಾಸೋದ್ಯಮ, ಕನ್ನಡ ಮತ್ತ ಸಂಸ್ಕೃತಿ, ಕ್ರೀಡಾ ಸಚಿವ ಸಿ.ಟಿ.ರವಿ, ಸಂಸದ ತೇಜಸ್ವಿ ಸೂರ್ಯ, ಶಾಸಕ ಉದಯ ಗರುಡಾಚಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ರಶ್ಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ರಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.