
ಮೈಸೂರು: ಮಾ.14:- ಮೇಯರ್ ಅನಾರೋಗ್ಯದಿಂದ ಮೈಸೂರು ಮಹಾನಗರ ಪಾಲಿಕೆಯಲ್ಲಿ ನಡೆಯಬೇಕಿದ್ದ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆಯನ್ನು ಮುಂದೂಡಲಾಯಿತು.
ಪಾಲಿಕೆ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಸೋಮವಾರ ಬೆಳಗ್ಗೆ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳಾದ ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳಿಗಾಗಿ ಸ್ಥಾಯಿ ಸಮಿತಿ, ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಸ್ಥಾಯಿ ಸಮಿತಿ, ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ ಮತ್ತು ಲೆಕ್ಕಪತ್ರಗಳ ಸ್ಥಾಯಿ ಸಮಿತಿ ಚುನಾವಣೆ ನಡೆಸಲು ನಿರ್ಧರಿಸಲಾಗಿತ್ತು.
ಅದರಂತೆ ಅದರಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಕೆಲ ಸದಸ್ಯರು ಮಾತ್ರ ಸಭೆಗೆ ಆಗಮಿಸಿದ್ದರು. ಮೇಯರ್ ಸೇರಿ ಬಿಜೆಪಿ ಸದಸ್ಯರು ಸಭೆಗೆ ಗೈರು ಹಾಜರಾದ ಹಿನ್ನೆಲೆ ಸಭೆಯನ್ನು ಸಂಜೆಗೆ ಮುಂದೂಡಲಾಯಿತು.
ಸಭೆಗೆ ಆಗಮಿಸಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಸಂಜೆ ಮತ್ತೆ ಆಗಮಿಸಿದರೂ ಮೇಯರ್ ಮತ್ತು ಉಪಮೇಯರ್ ಆದಿಯಾಗಿ ಬಿಜೆಪಿ ಸದಸ್ಯರು ಆಗಮಿಸದ ಹಿನ್ನೆಲೆ ನಾನಾ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆಯನ್ನು ಮುಂದೂಡಲಾಯಿತು.
ಚುನಾವಣಾ ಸಭೆಗೆ ಆಗಮಿಸಿದ್ದ ಕಾಂಗ್ರೆಸ್ ಸದಸ್ಯರು ಮಧ್ಯಾಹ್ನದವರೆಗೂ ಕಾದು ಹಿಂದಿರುಗಿದರು. ಪಾಲಿಕೆ ಪ್ರತಿ ಪಕ್ಷದ ನಾಯಕ ಅಯೂಬ್ ಖಾನ್ ಕಚೇರಿಯಲ್ಲಿ ಕೆಲ ಸದಸ್ಯರು ಮಾತುಕತೆ ನಡೆಸಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ನಡೆಗೆ ಬೇಸರ ವ್ಯಕ್ತಪಡಿಸಿದರು.
ಚುನಾವಣಾ ಪ್ರಕ್ರಿಯೆ ಮುಂದೂಡಿದ ಹಿನ್ನೆಲೆ ಪಾಲಿಕೆ ಪ್ರತಿ ಪಕ್ಷ ನಾಯಕ ಅಯೂಬ್ ಖಾನ್ ಮಾತನಾಡಿ,ಮೇಯರ್ ಏಕೆ ಬರಲಿಲ್ಲ ಎಂಬುದು ಗೊತ್ತಿಲ್ಲ. ಇದು ಪ್ರಜಾಪ್ರಭುತ್ವದ ಕಗ್ಗೊಲೆ.ಇಡೀ ಮೈಸೂರು ನಗರದ ಜನರಿಗೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾ.31 ರೊಳಗೆ ಬಜೆಟ್ ಮಂಡಿಸದಿದ್ದರೆ ನಾವು ಯಾವುದೇ ಕೆಲಸ ಮಾಡಲು ಆಗುವುದಿಲ್ಲ. ನೌಕರರಿಗೆ ಸಂಬಳ ನೀಡುವುದು ಕಷ್ಟ. ಬಿಜೆಪಿ ಮತ್ತು ಜೆಡಿಎಸ್‍ನವರು ದುರಾಡಳಿತ ನಡೆಸುತ್ತಿದ್ದಾರೆ ಎಂದು ದೂರಿದರು.
ಚುನಾವಣಾ ಸಭೆಗೆ ಜೆಡಿಎಸ್ ಸದಸ್ಯ ಪ್ರೇಮ ಶಂಕರೇಗೌಡ, ಅಶ್ವಿನಿ ಅನಂತು, ಕಾಂಗ್ರೆಸ್ ಸದಸ್ಯರಾದ ಪುಷ್ಪಲತಾ ಜಗನ್ನಾಥ್, ರಜನಿ ಅಣ್ಣಯ್ಯ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಸ್ಥಾಯಿ ಸಮಿತಿ ಅಧ್ಯಕ್ಷರ ಸ್ಥಾನಕ್ಕೆ ಪಟ್ಟು:
ಮೇಯರ್ ಮತ್ತು ಉಪ ಮೇಯರ್ ಸ್ಥಾನವನ್ನು ಬಿಜೆಪಿಗೆ ಬಿಟ್ಟುಕೊಟ್ಟಿರುವುದರಿಂದ ನಾಲ್ಕೂ ಸ್ಥಾಯಿ ಸಮಿತಿಯ ಅಧ್ಯಕ್ಷತೆಯನ್ನು ತಮಗೆ ಬಿಟ್ಟುಕೊಡಬೇಕು ಎಂದು ಪಟ್ಟು ಹಿಡಿದಿದ್ದ ಜೆಡಿಎಸ್ ಸದಸ್ಯರ ಬೇಡಿಕೆಗೆ ಬಿಜೆಪಿ ಸ್ಪಂದಿಸಿಲ್ಲ.
ಮೇಯರ್ ಮತ್ತು ಉಪ ಮೇಯರ್ ಚುನಾವಣೆ ವೇಳೆ ಮೂರು ಪಕ್ಷಗಳ ನಡುವೆ ಯಾವುದೇ ಹೊಂದಾಣಿಕೆಯ ಮಾತುಕತೆ ನಡೆದಿರಲಿಲ್ಲ. ಆದರೆ ಕಾಂಗ್ರೆಸ್‍ಗೆ ಮತ ಹಾಕಬೇಕಾಗುತ್ತದೆ ಎಂಬ ಕಾರಣಕ್ಕೆ ಮೇಯರ್ ಸ್ಥಾನದ ಬಿಜೆಪಿ ಅಭ್ಯರ್ಥಿಗೆ ಜೆಡಿಎಸ್ ಸದಸ್ಯರು ಮತ ಹಾಕಿದ್ದರು. ಇನ್ನು ಉಪ ಮೇಯರ್ ಸ್ಥಾನದ ಜೆಡಿಎಸ್ ಅಭ್ಯರ್ಥಿ ನಾಮಪತ್ರ ತಿರಸ್ಕೃತವಾದ ಹಿನ್ನೆಲೆಯಲ್ಲಿ ಜೆಡಿಎಸ್ ಸದಸ್ಯರು ಉಪ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಡಾ.ಜಿ. ರೂಪಾ ಅವರನ್ನೇ ಬೆಂಬಲಿಸಿದರು.
ಈ ಎಲ್ಲಾ ಕಾರಣದಿಂದಾಗಿ ಸ್ಥಾಯಿ ಸಮಿತಿಯ ನಾಲ್ಕು ಸ್ಥಾನವನ್ನು ಜೆಡಿಎಸ್‍ಗೆ ಬಿಟ್ಟುಕೊಡಲು ಬಿಜೆಪಿ ಒಪ್ಪುತ್ತಿಲ್ಲ. ಒಂದು ವೇಳೆ ಹಾಗೆ ಮಾಡಿದರೆ ಚುನಾವಣೆ ಹೊಸ್ತಿಲಲ್ಲಿ ಸ್ಥಳೀಯ ಸಂಸ್ಥೆಯಲ್ಲಿ ಹೊಂದಾಣಿಕೆ ಎಂಬ ಸಂದೇಶ ರವಾನೆಯಾಗುತ್ತದೆ ಎಂಬ ಕಾರಣಕ್ಕೆ ಬಿಜೆಪಿ ಈ ಹೊಂದಾಣಿಕೆ ಪ್ರಕ್ರಿಯೆ ಕೈಬಿಟ್ಟಿದೆ ಎನ್ನಲಾಗಿದೆ.