ನಡೆದುಕೊಂಡು ಹೊರಟಿದ್ದ ಮಹಿಳೆಯ 10 ಗ್ರಾಂ.ಬಂಗಾರದ ಮಂಗಲ ಸೂತ್ರ ಕಿತ್ತುಕೊಂಡು ಪರಾರಿ

ಕಲಬುರಗಿ,ಜೂ.29-ನಡೆದುಕೊಂಡು ಮನೆಗೆ ಹೋಗುತ್ತಿದ್ದ ಮಹಿಳೆಯ ಕೊರಳಲ್ಲಿನ 53 ಸಾವಿರ ರೂ.ಮೌಲ್ಯದ 10 ಗ್ರಾಂ.ಬಂಗಾರದ ಗುಂಡುಗಳುಳ್ಳ ಕರಿಮಣಿಯ ಮಂಗಳಸೂತ್ರ ಕಿತ್ತುಕೊಂಡು ಪರಾರಿಯಾದ ಘಟನೆ ನಗರದ ಶೇಖ್ ರೋಜಾ ರಸ್ತೆಯ ಮಹಾದೇವ ನಗರ ಕಮಾನ್ ಹತ್ತಿರ ನಡೆದಿದೆ.
ಈ ಸಂಬಂಧ ಶೇಖ್ ರೋಜಾ ನಿವಾಸಿ ಸುಜಾತಾ ಶಿವಾನಂದ ಬಿರಾದಾರ ಅವರು ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಶಾಲೆಯೊಂದರಲ್ಲಿ ಆಯಾ ಕೆಲಸ ಮಾಡುವ ಸುಜಾತಾ ಬಿರಾದಾರ ಅವರು ಎಂದಿನಂತೆ ಕೆಲಸ ಮುಗಿಸಿಕೊಂಡು ಗೋವಾ ಹೋಟೆಲ್ ಹತ್ತಿರ ಆಟೋರೀಕ್ಷಾ ಹತ್ತಿಕೊಂಡು ಶೆಟ್ಟಿ ಟಾಕೀಸ್ ಹತ್ತಿರ ಇಳಿದು ಶೇಖ್ ರೋಜಾ ರಸ್ತೆ ಮುಖಾಂತರ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಹಿಂದುಗಡೆಯಿಂದ ಬೈಕ್ ಮೇಲೆ ಬಂದ ಮೂವರು ಇವರ ಕೊರಳಲ್ಲಿನ ಮಂಗಲ ಸೂತ್ರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.