ನಡವಿ ಗ್ರಾಮದಲ್ಲಿ ಪೋಲಿಸ್ ಇಲಾಖೆಯಿಂದ ದಲಿತ ಸಭೆ”


ಸಂಜೆವಾಣಿ ವಾರ್ತೆ
ಸಿರಿಗೇರಿ ಮೆ21. ಇಂದು ಸಮೀಪದ ನಡವಿ ಗ್ರಾಮದಲ್ಲಿ ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ ಪೋಲಿಸ್ ಇಲಾಖೆಯಿಂದ ದಲಿತ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ಸಿರಿಗೇರಿ ಪೋಲಿಸ್ ಠಾಣೆಯ ಪಿಎಸ್‍ಐ ವೆಂಕಟೇಶನಾಯಕ ಮಾತನಾಡಿ ಕನೂನಾತ್ಮಕವಾಗಿ ದಲಿತವರ್ಗದವರಿಗೆ ಕೆಲವು ಅನುಕೂಲತೆಗಳಿವೆ. ಸರ್ಕಾರದ ಮಟ್ಟದಲ್ಲಿ ಇರುವ ಇಂತಹ ಸೌಲಭ್ಯಗಳನ್ನು ಪಡೆದುಕೊಂಡು ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಬೇಕು. ಅವರನ್ನು ಮುಂದೆ ಉತ್ತಮ ಪ್ರಜೆಗಳಾಗಿ ರೂಪಿಸಬೇಕು. ನಿಮ್ಮ ಕಾಲೋನಿಗಳಲ್ಲಿ, ನೀವು ವಾಸಿಸುತ್ತಿರುವ ಪ್ರದೇಶಗಳಲ್ಲಿ ಯಾವುದೇ ರೀತಿಯ ಸಮಸ್ಯೆಗಳಿದ್ದಲ್ಲಿ ನಮ್ಮ ಗಮನಕ್ಕೆ ತಂದರೆ ಅವುಗಳ ಇತ್ಯರ್ಥಕ್ಕೆ ಸಂಬಂಧಿಸಿದ ಅಧಿಕಾರಿಗಳ ಸಹಕಾರದಿಂದ ಪ್ರಯತ್ನಿಸಲಾಗುವುದು. ವಿನಾಕಾರಣ ಕ್ಷುಲ್ಲಕ ಕಾರಣಗಳಿಗೆ ಜಗಳವಾಗಲು ಅವಕಾಶ ನೀಡದಂತೆ ಪರಸ್ಪರರು ಪ್ರೀತಿ ವಿಶ್ವಾಸದಿಂದ ಇರಬೇಕು ಎಂದು ತಿಳಿಸಿದರು. ನಂತರ ಎಎಸ್‍ಐ ಗಂಗಣ್ಣ. ಎಚ್. ಇವರು ಮಾತನಾಡಿ ಯುವಕರು ಉದ್ಯೋಗಗಳನ್ನು ಹಿಡಿದು, ಸ್ವಂತ ಉದ್ಯೋಗದಿಂದ, ವ್ಯವಹಾರದಿಂದ ಮುಂದೆ ಬರುವುದಕ್ಕೆ ಪ್ರಯತ್ನಿಸಬೇಕು. ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಇತರೆ ಸಮಸ್ಯೆಗಳಿದ್ದಲ್ಲಿ ಠಾಣೆಗೆ ಬಂದು ತಿಳಿಸಿದರೆ ಅವುಗಳ ಪರಿಹಾರಕ್ಕೆ ನಮ್ಮ ಅಧಿಕಾರಿಗಳು ನೆರವಾಗುತ್ತಾರೆಂದು ತಿಳಿಸಿದರು. ನಡವಿ ಗ್ರಾಮದ ದಲಿತ ಮುಖಂಡರು ಸಭೆಯಲ್ಲಿ ಪಾಲ್ಗೊಂಡು ತಮ್ಮ ಕೆಲವು ಸಮಸ್ಯೆಗಳ ಕುರಿತು ಅಧಿಕಾರಿಗಳಿಗೆ ತಿಳಿಸಿದರು.

One attachment • Scanned by Gmail