
ನವದೆಹಲಿ, ಮಾ.೧೪- ಇತ್ತೀಚೆಗೆ ನಿಧನ ಹೊಂದಿದ ಬಾಲಿವುಡ್ ಹಿರಿಯ ನಟ ಸತೀಶ್ ಕೌಶಿಕ್ ಅವರನ್ನು ಹತ್ಯೆ ಮಾಡಲಾಗಿದೆ ಎಂದು ದೆಹಲಿಯ ಉದ್ಯಮಿಯೊಬ್ಬರ ಪತ್ನಿ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಉದ್ಯಮಿ ವಿಕಾಸ್ ಮಾಲು ಅವರ ಎರಡನೇ ಪತ್ನಿ ಸಾನ್ವಿ ಮಾಲು ಆರೋಪ ಮಾಡಿದ್ದು, ಹದಿನೈದು ಕೋಟಿ ಹಣದ ಆಸೆಗೆ ಸತೀಶ್ ಕೌಶಿಕ್‌ಗೆ ವಿಕಾಸ್ ಮಾಲು ವಿಷ ಉಣಿಸಿದ್ದಾರೆ ಎಂದಿದ್ದಾರೆ. ಮಾತ್ರವಲ್ಲ ಈ ಕುರಿತು ದೆಹಲಿ ಪೊಲೀಸರಿಗೆ ಲಿಖಿತ ದೂರು ಸಹ ಸಲ್ಲಿಸಿದ್ದಾರೆ.
ದೂರಿನ ಬಗ್ಗೆ ಮಾಧ್ಯಮಗಳ ಬಳಿ ಮಾತನಾಡಿರುವ ವಿಕಾಸ್ ಮಾಲು ಪತ್ನಿ ಸಾನ್ವಿ, ಸತೀಶ್ ಕೌಶಿಕ್, ಫಾರ್ಮ್‌ಹೌಸ್‌ಗೆ ಬಂದ ಕೆಲ ಹೊತ್ತಿನಲ್ಲಿಯೇ ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿತು. ಅಲ್ಲದೆ ಫಾರ್ಮ್ ಹೌಸ್‌ನಲ್ಲಿ ಕೆಲವು ಔಷಧಿಗಳು ಸಹ ನನ್ನ ಕಣ್ಣಿಗೆ ಬಿದ್ದವು ಆಗಲೇ ನನಗೆ ಅನುಮಾನ ಬಂತು. ತಮ್ಮ ಪತಿ ವಿಕಾಸ್ ಹಾಗೂ ಸತೀಶ್ ಕೌಶಿಕ್ ನಡುವೆ ಹಣದ ವ್ಯವಹಾರವಿತ್ತು. ಇದೇ ಕಾರಣಕ್ಕೆ ನನ್ನ ಪತಿಯೇ ಸತೀಶ್ ಅವರನ್ನು ಕೊಂದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಈ ಹಿಂದೆ ಉದ್ಯಮಿ ವಿಕಾಸ್ ಮಾಲು, ಸತೀಶ್ ಕೌಶಿಕ್ ಬಳಿ ೧೫ ಕೋಟಿ ಸಾಲ ಪಡೆದುಕೊಂಡಿದ್ದರು. ಆದರೆ ಕೋವಿಡ್ ಸಮಯದಲ್ಲಾದ ನಷ್ಟದಿಂದಾಗಿ ಆ ಹಣ ಮುಳುಗಿ ಹೋಯಿತು. ಹಣ ಮರಳಿಸುವಂತೆ ನಾನೂ ಸಹ ವಿಕಾಸ್‌ಗೆ ಪದೇ-ಪದೇ ಹೇಳುತ್ತಿದ್ದೆ. ಈ ಬಗ್ಗೆ ಜಗಳ ಸಹ ಮಾಡಿದ್ದೆ. ಆದರೆ ವಿಕಾಸ್ ಹಣ ಮರಳಿ ನೀಡಬೇಕಾಗುತ್ತದೆ ಎಂದು ಸತೀಶ್ ಕೌಶಿಕ್ ಅನ್ನು ಕೊಂದಿದ್ದಾರೆ ಎಂದು ಸಾನ್ವಿ ಮಾಲು ದೂರಿದರು.
ಎರಡನೇ ಪತ್ನಿ ಸಾನ್ವಿ ಹೇಳಿಕೆ ಹೊರ ಬೀಳುತ್ತಲೇ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಸಮೇತ ಪೋಸ್ಟ್ ಒಂದನ್ನು ಉದ್ಯಮಿ ವಿಕಾಸ್ ಹಂಚಿಕೊಂಡಿದ್ದು, ಸತೀಶ್ ಅವರು ಕಳೆದ ೩೦ ವರ್ಷದಿಂದಲೂ ನಮ್ಮ ಕುಟುಂಬದ ಸದಸ್ಯರಾಗಿದ್ದಾರೆ. ಆದರೆ ಅವರು ಹೋದ ಕೆಲವೇ ಗಂಟೆಗಳಲ್ಲಿ ನನ್ನ ಹೆಸರನ್ನು ಕೆಟ್ಟ ರೀತಿಯಲ್ಲಿ ಕೆಲವರು ಬಳಸುತ್ತಿದ್ದಾರೆ ಎಂದಿದ್ದಾರೆ.
ಐದು ದಿನಗಳ ಹಿಂದಷ್ಟೆ (ಮಾ.೯) ಬಾಲಿವುಡ್‌ನ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಸತೀಶ್ ಕೌಶಿಕ್ ನಿಧನ ಹೊಂದಿದ್ದರು.ಹೃದಯಾಘಾತ ಇವರ ನಿಧನಕ್ಕೆ ಕಾರಣ ಎನ್ನಲಾಗಿತ್ತು.