ನಟ ಶಿವರಾಂ ಸ್ಥಿತಿ ಮತ್ತಷ್ಟು ಗಂಭೀರ

ಬೆಂಗಳೂರು,ಡಿ.೩-ಮೆದುಳಿನ ರಕ್ತಸ್ರಾವದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಕಲಾವಿದ ಶಿವರಾಂ ಅವರ ಆರೋಗ್ಯ ಕ್ಷಿಣಿಸುತ್ತಿದ್ದು ಆತಂಕಕ್ಕೆ ಕಾರಣವಾಗಿದೆ.
ನಗರದ ಬ್ಯಾಂಕ್ ಕಾಲೋನಿಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಶಿವರಾಂ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಚಂದನವನದ ಅನೇಕ ಹಿರಿಯ ನಟ-ನಟಿಯರು ಬಂದು ಅವರನ್ನು ನೋಡಿಕೊಂಡು ಹೋಗುತ್ತಿದ್ದಾರೆ. ಅವರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಆದರೆ ಸದ್ಯಕ್ಕೆ ಶಿವರಾಂ ಅವರು ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ.
ಶಿವರಾಂ ಅವರ ಆರೋಗ್ಯ ಇನ್ನಷ್ಟು ಗಂಭೀರ ಪರಿಸ್ಥಿತಿ ತಲುಪಿದೆ. ಅವರ ಮಿದುಳು ನಿಷ್ಕ್ರಿಯಗೊಂಡಿದ್ದು, ಕೋಮಾ ಹಂತ ತಲುಪಿದ್ದಾರೆ. ಇದು ಅವರ ಕುಟುಂಬದವರು, ಸ್ನೇಹಿತರು ಮತ್ತು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.
ಶಿವರಾಂ ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡು ಬಂದಿಲ್ಲ ನುರಿತ ವೈದ್ಯರು ಪರೀಕ್ಷೆ ಮಾಡಿ ಹೆಚ್ಚಿನ ಮಾಹಿತಿ ನೀಡಲಿದ್ದಾರೆ. ಮೆದುಳಿನ ರಕ್ತಸ್ರಾವದಿಂದ ಈಗಾಗಲೇ ಅವರು ಕೋಮಾ ಸ್ಥಿತಿ ತಲುಪಿದ್ದಾರೆ. ಅವರ ಆರೋಗ್ಯದ ವಿಚಾರದಲ್ಲಿ ಮಿರಾಕಲ್ ಆಗಬೇಕು’ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
೮೪ ವರ್ಷದ ಶಿವರಾಂ ಅವರಿಗೆ ಏಕಾಏಕಿ ಆರೋಗ್ಯದಲ್ಲಿ ಏರುಪೇರು ಆಗಿದ್ದು ಏಕೆ ಎಂಬುದನ್ನು ಪ್ರಶಾಂತ್ ಆಸ್ಪತ್ರೆ ವೈದ್ಯ ಮೋಹನ್ ವಿವರಿಸಿ ‘ಶಿವರಾಂ ಅವರು ಮನೆಯಲ್ಲಿ ಅಯ್ಯಪ್ಪ ಸ್ವಾಮಿ ಪೂಜೆ ಮಾಡಲು ಟೆರೆಸ್‌ನಲ್ಲಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಅಲ್ಲಿಗೆ ತೆರಳಿದ್ದಾಗ ಪ್ರಜ್ಞೆ ತಪ್ಪಿ ಬಿದ್ದರು. ಒಂದೂವರೆ ಗಂಟೆ ಬಳಿಕ ಅದು ತಿಳಿದುಬಂದಿದೆ. ಅವರ ಮಗ ಮತ್ತು ಮೊಮ್ಮಗಳು ಆಸ್ಪತ್ರೆಗೆ ಕರೆದುಕೊಂಡು ಬಂದರು. ಎಂಆರ್‌ಐ ಸ್ಕ್ಯಾನ್ ಮಾಡಿದಾಗ ತಲೆ ಒಳಗೆ ಪೆಟ್ಟು ಬಿದ್ದಿರುವುದು ತಿಳಿಯಿತು ಎಂದರು.
ಕನ್ನಡ ಚಿತ್ರರಂಗಕ್ಕೆ ಶಿವರಾಂ ಅವರು ನೀಡಿದ ಕೊಡುಗೆ ಅಪಾರ. ನಟನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿಯೂ ಅವರು ಕೆಲಸ ಮಾಡಿದ್ದಾರೆ. ಹಲವಾರು ಬಗೆಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ.
ಸಿನಿಮಾ ಮಾತ್ರವಲ್ಲದೇ ಕಿರುತೆರೆಯಲ್ಲಿ ಅಭಿನಯಿಸಿದ್ದಾರೆ. ಬಣ್ಣದ ಲೋಕದಲ್ಲಿ ಅವರ ಅನುಭವ ೬ ದಶಕಗಳಿಗೂ ಹೆಚ್ಚಾಗಿದೆ.
ಕನ್ನಡದ ನೂರಾರು ಚಿತ್ರಗಳಲ್ಲಿ ಪೋಷಕ ನಟರಾಗಿ ನಟಿಸಿರುವ ಶಿವರಾಂ ಇತ್ತೀಚಿನವರೆಗೂ ಬಣ್ಣ ಹಚ್ಚಿದ್ದರು.
ಡಾ. ರಾಜ್‌ಕುಮಾರ್ ವಿಷ್ಣುವರ್ಧನ್ ಅಂಬರೀಶ್ ಸೇರಿದಂತೆ ಹಿರಿಯ ಕಲಾವಿದರ ಜೊತೆ ಹಲವು ಚಿತ್ರಗಳಲ್ಲಿ ನಟಿಸಿ ಕಿರಿಯ ಕಲಾವಿದರಿಗೆ ಮಾದರಿಯಾಗಿದ್ದರು.