ನಟ ರಣವೀರ್ ವಿರುದ್ಧ ಎಫ್‌ಐಆರ್!

ಮುಂಬೈ, ಜು ೨೬: ಬಾಲಿವುಡ್ನಟ ರಣವೀರ್ ಸಿಂಗ್ ಬೆತ್ತಲೆ ಫೋಟೋಗಳು ವೈರಲ್ ಆದ ಬೆನ್ನಲ್ಲೇ ಇದೀಗ ಅವರು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
ರಣವೀರ್ ಸಿಂಗ್ ಅವರ ನಗ್ನ ಫೋಟೋಶೂಟ್ ಚಿತ್ರಗಳ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು. ಇದರ ಬೆನ್ನಲ್ಲೆ ಮಹಿಳೆಯರ ಭಾವನೆಗಳನ್ನು ನೋಯಿಸಿದ ಆರೋಪದ ಮೇಲೆ ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ನಗ್ನವಾಗಿ ಫೋಟೋಶೂಟ್ ಮಾಡಿಸಿದ್ದು ನಟ ರಣವೀರ್ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ತನ್ನ ನಗ್ನ ಫೋಟೋಗಳ ಮೂಲಕ ಮಹಿಳೆಯರ ಭಾವನೆಗಳನ್ನು ಧಕ್ಕೆತರುವ ಪ್ರಯತ್ನ ಎಂದು ಎಫ್‌ಐಆರ್ ದಾಖಲಿಸುವಂತೆ ಕೋರಿ ಮುಂಬೈ ಪೊಲೀಸರಿಗೆ ಸೋಮವಾರ ಅರ್ಜಿ ಸಲ್ಲಿಸಿದ್ದರು.
ರಣವೀರ್ ಸಿಂಗ್ ವಿರುದ್ಧ ಐಪಿಸಿ ಸೆಕ್ಷನ್ ೫೦೯, ೨೯೨, ಮತ್ತು ೨೯೪ ಮತ್ತು ಐಟಿ ಕಾಯ್ದೆಯ ಸೆಕ್ಷನ್ ೬೭ ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈತನ ವಿರುದ್ಧ ಮಂಗಳವಾರ ಚೆಂಬೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಮುಂಬೈನ ಶ್ಯಾಮ್ ಮಂಗರಮ್ ಫೌಂಡೇಶನ್ ಮುಂಬೈನಲ್ಲಿ ದೂರು ದಾಖಲಿಸಲಾಗಿದ್ದು, ವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ನಟರು ಸಮಾಜದ ಸ್ವಾಸ್ತ್ಯವನ್ನು ಹಾಳು ಮಾಡುತ್ತಿದ್ದಾರೆ. ಹಾಗಾಗಿ ಅವರ ವಿರುದ್ಧ ಕ್ರಮ ತಗೆದುಕೊಳ್ಳುವಂತೆ ಫೌಂಡೇಶನ್ ಆಗ್ರಹಿಸಿದೆ. ಕ್ರಮ ತಗೆದುಕೊಳ್ಳುವ ಮೂಲಕ ನಟರಿಗೆ ಸ್ಪಷ್ಟ ಸಂದೇಶವನ್ನು ನೀಡಬೇಕು ಎಂದು ಪೊಲೀಸ್ ಇಲಾಖೆಗೆ ಅದು ಮನವಿ ಮಾಡಿದೆ.
ಅಲ್ಲದೇ, ರಣವೀರ್ ಅಭಿಮಾನಿಗಳಿಗೆ ಕ್ಷಮೆ ಕೇಳಬೇಕೆಂದು ಹೇಳಿದೆ. ರಣವೀರ್ ಪೂರ್ಣ ಬೆತ್ತಲೆಯಾಗಿ ಕಾಣಿಸಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಅಭಿಮಾನಿಗಳು ಕೂಡ ರಣವೀರ್ ಸಿಂಗ್ ಈ ರೀತಿಯಲ್ಲಿ ಕಾಣಿಸಿಕೊಳ್ಳ ಬಾರದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಸ್ವತಃ ಪತ್ನಿ ದೀಪಿಕಾ ಪಡುಕೋಣೆ ಕೂಡ ಅಸಮಾಧಾನ ಹೊರಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.