ನಟ ಪ್ರವೀಣ್ ಮೇಲೆ ಹಲ್ಲೆ ; ಕೇಸ್ ದಾಖಲು

ಬೆಂಗಳೂರು, ಫೆ.೨೧-ಚೂರಿಕಟ್ಟೆ ಸೇರಿ ಕನ್ನಡದ ಕೆಲ ಚಿತ್ರಗಳಲ್ಲಿ ನಾಯಕನಾಗಿ ನಟಿಸಿರುವ ಪ್ರವೀಣ್ ತೇಜ ಮೇಲೆ ಪರಿಚಯಸ್ಥನಿಂದ ನಗರದಲ್ಲಿ ಹಲ್ಲೆಯಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ದಿಲೀಪ್ ಎಂಬಾತ ನನ್ನ ಮೇಲೆ ಹಲ್ಲೆ ಮಾಡಿ, ದುಬಾರಿ ಕಾರಿನ ಗಾಜನ್ನು ಪುಡಿ ಪುಡಿ ಮಾಡಿದ್ದಾನೆ. ಜೊತೆಗೆ ತಮ್ಮ ಕುಟುಂಬಕ್ಕೆ ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ನಟ ಪ್ರವೀಣ್ ಕೋಣನಕುಂಟೆ ಠಾಣೆಗೆ ದೂರು ನೀಡಿ ದಿಲೀಪ್ ವಿರುದ್ಧ ಕ್ರಮ ತಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.
ಕಳೆದ ಫೆಬ್ರವರಿ ೧೨ ರಂದು ಬನ್ನೇರುಘಟ್ಟ ರಸ್ತೆಯಲ್ಲಿರುವ ಗೆಳೆಯನ ಅಪಾರ್ಟ್ ಮೆಂಟ್ ನಲ್ಲಿ ನಡೆಯುತ್ತಿದ್ದ ಹುಟ್ಟು ಹಬ್ಬದಲ್ಲಿ ಪ್ರವೀಣ್ ಪಾಲ್ಗೊಂಡಿದ್ದಾಗ ದಿಲೀಪ್ ಎಂಬ ಪರಿಚಿತನೊಬ್ಬನಿಂದ ಗಲಾಟೆ ಶುರುವಾಗಿದೆ.
ಪ್ರವೀಣ್ ಅವರ ವೃತ್ತಿಯ ಬಗ್ಗೆ ದಿಲೀಪ್ ಕೆಟ್ಟದ್ದಾಗಿ ಮಾತನಾಡಿದ್ದು ಇದರಿಂದ ಮಾತಿಗೆ ಮಾತು ಬೆಳೆದು ಅದು ಹೊಡೆದಾಟದ ಹಂತಕ್ಕೆ ತಲುಪಿದೆ. ಪ್ರವೀಣ್ ಮೇಲೆ ದೈಹಿಕ ಹಲ್ಲೆಯಾಗಿದ್ದು, ಕುತ್ತಿಗೆ ಭಾಗದಲ್ಲಿ ಗಾಯಗಳಾಗಿವೆ ಎಂದು ದೂರಿನಲ್ಲಿ ಬರೆಯಲಾಗಿದೆ.
ಘಟನೆಯಿಂದ ನೊಂದಿದ್ದ ಪ್ರವೀಣ್ ಆ ರಾತ್ರಿ ಅದೇ ಅಪಾರ್ಟ್ ಮೆಂಟ್ ನಲ್ಲಿ ಉಳಿದುಕೊಂಡಿದ್ದಾರೆ. ಬೆಳಗ್ಗೆ ಮನೆಗೆ ಹೊರಡಲು ಕಾರು ಬಳಿ ಬಂದರೆ ಕಾರಿನ ಗ್ಲಾಸ್ ಗಳನ್ನು ಹೊಡೆದು ಹಾಕಲಾಗಿತ್ತು. ಸಿಸಿ ಟಿವಿ ಪರಿಶೀಲನೆ ಮಾಡಿದಾಗ ದಿಲೀಪ್ ಅವರೇ ಕಾರಿನ ಗಾಜು ಒಡೆದಿದ್ದಾರೆ ಎನ್ನುವುದು ಗೊತ್ತಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
‘ಹೊಂದಿಸಿ ಬರೆಯಿರಿ’ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿರುವ ಪ್ರವೀಣ್ ತೇಜ್, ಈವರೆಗೂ ಯಾವುದೇ ಗಲಾಟೆ ಅಥವಾ ಗಾಸಿಪ್ ಗಳಲ್ಲಿ ಕಾಣಿಸಿಕೊಂಡಿಲ್ಲ. ಇದೇ ಮೊದಲ ಬಾರಿಗೆ ಅವರು ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.