ನಟ ಪುನೀತ್ ರಾಜಕುಮಾರ್ ಅವರಿಗೆ ಶ್ರದ್ಧಾಂಜಲಿ ನುಡಿನಮನ

ಅಥಣಿ : ನ.24: ಗಡಿನಾಡು ಕನ್ನಡಿಗರ ಆರಾಧ್ಯ ದೈವ, ಭಾವೈಕ್ಯತೆಗೆ ಹೆಸರಾದ ಸುಕ್ಷೇತ್ರ ಖಿಳೇಗಾವಿ ಬಸವಣ್ಣನ ದೇವಸ್ಥಾನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ( ಪ್ರವೀಣ್ ಕುಮಾರ್ ಶೆಟ್ಟಿ ಬಣ) ಯ ವತಿಯಿಂದ ಗಡಿನಾಡು ಕನ್ನಡ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ದೇವಸ್ಥಾನದ ಸುತ್ತಮುತ್ತಲು ರಸ್ತೆಯುದ್ದಕ್ಕೂ ಕನ್ನಡ ಧ್ವಜಗಳು, ತಳಿರು-ತೋರಣಗಳಿಂದ ಶೃಂಗರಿಸಲಾಗಿತ್ತು. ಕನ್ನಡ ನಾಡಿನ ಧ್ವಜದ ಸಂಕೇತವಾದ ಹಳದಿ ಮತ್ತು ಕೆಂಪು ಹೂವುಗಳಿಂದ ಬಸವಣ್ಣನ ಮೂರ್ತಿಗೆ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮಂಗಳಾರತಿ ಮತ್ತು ನಾಡಗೀತೆಯನ್ನು ಹಾಡುವ ಮೂಲಕ ಗಡಿನಾಡು ಉತ್ಸವಕ್ಕೆ ಚಾಲನೆ ನೀಡಲಾಯಿತು.
ನಂತರ ದೇವಸ್ಥಾನದ ಆವರಣದಲ್ಲಿ ನಡೆದ ಕನ್ನಡ ಹಬ್ಬ ಕಾರ್ಯಕ್ರಮದಲ್ಲಿ ಕರವೇ ರಾಜ್ಯ ಕಾರ್ಯದರ್ಶಿ ರವಿ ಪೂಜಾರಿ ನಾಡದೇವಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ ಕನ್ನಡಿಗರ ಸ್ವಾಭಿಮಾನದ ಸಂಕೇತವಾದ ಕನ್ನಡ ರಾಜ್ಯೋತ್ಸವವನ್ನು ನಾಡಿನಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಭಾವೈಕ್ಯತೆಯ ಕೇಂದ್ರವಾಗಿರುವ ಸುಕ್ಷೇತ್ರ ಖಿಳೇಗಾವಿ ಬಸವಣ್ಣನ ಸನ್ನಿಧಿಯಲ್ಲಿ ಗಡಿನಾಡು ಕನ್ನಡ ಉತ್ಸವ ನಡೆಯುತ್ತಿರುವುದು ಕನ್ನಡದ ಜಾತ್ರೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಖಿಳೇಗಾವಿ ಗ್ರಾಪಂ ಅಧ್ಯಕ್ಷ ಸುನಿಲ್ ಚೌಗುಲೆ ನಾಡ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಗಡಿನಾಡು ಕನ್ನಡಿಗರ ಆಶೋತ್ತರಗಳಿಗೆ ಸರಕಾರ ತ್ವರಿತಗತಿಯಲ್ಲಿ ಸ್ಪಂದಿಸಬೇಕು. ಗಡಿಭಾಗದಲ್ಲಿರುವ ಅನೇಕ ರಸ್ತೆಗಳು ಹಾಳಾಗಿದ್ದು, ಈ ಭಾಗದ ಅನೇಕ ಕನ್ನಡ ಶಾಲೆಗಳಿಗೆ ಮೂಲಭೂತ ಸೌಕರ್ಯವಿಲ್ಲದೆ ಮುಚ್ಚುವಂತಹ ಸ್ಥಿತಿಯಲ್ಲಿವೆ, ನೀರಾವರಿ ಸೇರಿದಂತೆ ಅನೇಕ ಸೌಲಭ್ಯಗಳು ಗಡಿಭಾಗದ ಕನ್ನಡಿಗರಿಗೆ ತ್ವರಿತ ಗತಿಯಲ್ಲಿ ಸಿಗುವಂತೆ ಈ ಭಾಗದ ಜನಪ್ರತಿನಿಧಿಗಳು ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರಾದವರು ಶ್ರಮಿಸಬೇಕು ಎಂದು ಒತ್ತಾಯಿಸಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕ ಅಧ್ಯಕ್ಷ ಅಣ್ಣಾಸಾಬ ತೆಲಸಂಗ ಮಾತನಾಡಿ ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಗಡಿಭಾಗದಲ್ಲಿ ಬೇರೆ ಭಾಷೆಗಳ ಪ್ರಭಾವದಿಂದ ಕನ್ನಡ ಭಾಷೆ ನಶಿಸುತ್ತಿರುವ ಇಂದಿನ ಸಂದರ್ಭದಲ್ಲಿ ಗಡಿಭಾಗದ ಕನ್ನಡಿಗರು ಸ್ವಾಭಿಮಾನದಿಂದ ನಿತ್ಯ ಬದುಕಿನಲ್ಲಿ ನಮ್ಮ ಭಾಷೆ ಕಲೆ ಸಂಸ್ಕøತಿಯನ್ನು ಅಳವಡಿಸಿಕೊಂಡಾಗ ಕನ್ನಡವನ್ನು ಇನ್ನಷ್ಟು ಗಟ್ಟಿಯಾಗಿ ಕಟ್ಟಲು ಸಾಧ್ಯವಿದೆ. ಗಡಿಭಾಗದಲ್ಲಿ ಕನ್ನಡಪರ ಸಂಘಟನೆಗಳು ಮಾತ್ರ ಹೋರಾಡಿದರೆ ಸಾಲದು, ಪ್ರತಿಯೊಬ್ಬ ಕನ್ನಡಿಗನು ಸ್ವಾಭಿಮಾನದಿಂದ ಕನ್ನಡತನವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶ್ರಮಿಸಬೇಕಾಗಿದೆ.ಸರಕಾರ ಇತ್ತೀಚಿಗೆ ನಮ್ಮ ಗಡಿಭಾಗವನ್ನು ಚಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡಿದೆ. ಕೇವಲ ನಾಮಕರಣ ಮಾಡಿದರೆ ಸಾಲದು, ಗಡಿ ಭಾಗದ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಮತ್ತು ಗಡಿಭಾಗದ ಕನ್ನಡ ಶಾಲೆಗಳನ್ನು ಪುನಃಶ್ಚೇತನಗೊಳಿಸಲು ವಿನೂತನ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ರಾಜ್ಯ ಸರಕಾರವನ್ನು ಆಗ್ರಹಿಸಿದರು.
ಕರವೇ ಜಿಲ್ಲಾ ಸಂಚಾಲಕ ಜಗನ್ನಾಥ ಬಾಮನೆ ಮಾತನಾಡಿ ಕನ್ನಡಿಗರ ಹಬ್ಬವನ್ನು ನಾಡದೇವಿ ಭುವನೇಶ್ವರಿಯ ಭಾವಚಿತ್ರದೊಂದಿಗೆ ಅನೇಕ ಕನ್ನಡಪರ ಕಾರ್ಯಕ್ರಮಗಳ ಮೂಲಕ ಆಚರಿಸಲಾಗುತ್ತದೆ. ಭುವನೇಶ್ವರಿಯ ಅರಿಶಿನ ಕುಂಕುಮ ಸಂಕೇತವಾದ ಹಳದಿ ಕೆಂಪು ಬಣ್ಣಗಳ ನಾಡಧ್ವಜವು ಎಲ್ಲೆಡೆಯ ಹಾರಾಡುತ್ತವೆ. ಕನ್ನಡ ನಮ್ಮ ಅನ್ನದ ಭಾಷೆಯಾಗಿದ್ದು, ನಿತ್ಯ ಬದುಕಿನಲ್ಲಿ ನಮ್ಮ ಭಾಷೆ, ಕಲೆ-ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ಕಲಾವಿದ ವಿಜಯ್ ಹುದ್ದಾರ ಮತ್ತು ಅವರ ತಂಡದವರ ಶಿವಯೋಗಿ ಕಲಾ ತಂಡದವರಿಂದ ಕನ್ನಡ ಸಂಗೀತ ರಸಮಂಜರಿ ಜರುಗಿತು. ಇದೇ ವೇಳೆ ಇತ್ತೀಚಿಗೆ ಇಹಲೋಕ ತ್ಯಜಿಸಿದ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಪುನೀತ್ ರಾಜಕುಮಾರ್ ಅವರ ಶ್ರದ್ಧಾಂಜಲಿ ನುಡಿನಮನ ಸಲ್ಲಿಸಲಾಯಿತು.
ಈ ವೇಳೆ ದೇವಸ್ಥಾನ ಕಮಿಟಿಯ ಅಧ್ಯಕ್ಷ ಸತೀಶ್ ಹೊನಗೋಳ, ಗ್ರಾಪಂ ಸದಸ್ಯ ರವಿ ನಾಗಗೋಳ, ಪ್ರಕಾಶ ಹಿಡಕಲ್, ರಾಘು ಜಗಳಗಂಟಿ, ಕರವೇ ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾ ಮರಡಿ, ಕರವೇ ಉಪಾಧ್ಯಕ್ಷ ಸಿದ್ದು ಹಂಡಗಿ, ಉದಯ ಮಾಕಾಣಿ,
ಕಾರ್ಯದರ್ಶಿ ಶಂಕರ್ ಮಗದುಮ್, ಕುಮಾರ್ ಬಡಿಗೇರ್, ರಾಜು ತಂಗಡಿ, ರಾಜು ವಾಘಮೊರೆ, ಮಹಾದೇವಿ ಹೊಳಿಕಟ್ಟಿ, ಜಾನಕಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ವಿಜಯ ಹುದ್ದಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಚಾಲಕ ಮುರಗೇಶ ಬಾನಿ ನಿರೂಪಿಸಿದರು. ರವಿ ನಾಗಗೊಳ ವಂದಿಸಿದರು.