ನಟ ಪುನೀತ್ ಜವಾಬ್ದಾರಿ ಮೆರೆಯಲಿ: ತೆಗನೂರ

ಕಲಬುರಗಿ:ಎ.6: ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆ ಸರಕಾರ ಕೆಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ ಅದರಲ್ಲಿ ಈಜುಕೊಳ, ಜಿಮ್ ಪೂರ್ತಿ ಬಂದಾದರೆ ಚಿತ್ರಮಂದಿರಗಳಿಗೆ ಶೇ.50 ರಷ್ಟು ಅವಕಾಶ ಕಲ್ಪಿಸಿದೆ. ಆದರೆ ನಟ ಪುನೀತ್ ರಾಜ್‍ಕುಮಾರ್ ತಮ್ಮ ಚಿತ್ರ ‘ಯುವರತ್ನ’ ಬಿಡುಗಡೆಗೊಂಡಿರುವುದರಿಂದ ಸರಕಾರದ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವುದು ಸರಿಯಲ್ಲ ಎಂದು ನಟ ಪುನೀತ ರಾಜಕುಮಾರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಿಗರ ಬಣ) ದ ಜಿಲ್ಲಾಧ್ಯಕ್ಷರಾದ ಆನಂದ ತೆಗನೂರ ಅಸಮಾಧಾನ ಹೊರಹಾಕಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ನಟ ಪುನೀತ್ ಅವರಿಂದ ಇಂತಹ ಮಾತುಗಳನ್ನು ನಿರೀಕ್ಷಿಸಿರಲಿಲ್ಲ. ತಮ್ಮ ಚಿತ್ರದ ಮೇಲೆ ಇರುವ ಕಾಳಜಿ ಅವರ ಅಭಿಮಾನಿಗಳ ಮೇಲೆ ಇಲ್ಲ ಆದರೆ ಅವರ ಚಿತ್ರ ಯಶಸ್ಸು ಕಾಣುವುದು ಮಾತ್ರ ಅವರಿಗೆ ಮುಖ್ಯವಾಗಿದೆ ಎಂದರು.ಜವಾಬ್ದಾರಿಯುತ ನಟನಾಗಿ ಕೊರೊನಾ ಎರಡನೇ ಅಲೇ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಅಭಿಮಾನಿಗಳ ಆರೋಗ್ಯವನ್ನು ನಿರ್ಲಕ್ಷಿಸಿರುವುದು ಸರಿಯಲ್ಲ ಎಂದು ನಟ ಪುನೀತ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಭಿಮಾನಿಗಳನ್ನು ದೇವರು ಎಂದು ಕರೆದ ವರನಟ ರಾಜಕುಮಾರ್ ಅವರ ಪುತ್ರನಾಗಿ ಕನ್ನಡಿಗರಿಂದ ಅಪ್ಪು ಎಂದು ‌ಕರೆಯಿಸಿಕೊಂಡು ಈ ರೀತಿಯ ಹೇಳಿಕೆ ನೀಡಿ ಸ್ವಾರ್ಥಿ ಎನಿಸಿಕೊಳ್ಳುತ್ತಿದ್ದಾರೆ. ಇದು ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡುತ್ತಿದೆ. ಚುನಾವಣಾ ಪ್ರಚಾರದಲ್ಲಿ ತೊಡಗಿ ಟೀಕೆಗೆ ಒಳಗಾಗುತ್ತಿರುವ ರಾಜಕಾರಣಿಗಳತ್ತ ನಟ ಪುನೀತ್ ಬೊಟ್ಟು ಮಾಡಬಾರದು ಎಂದು ಅವರು ಕಿವಿಮಾತು ಹೇಳಿದರು. ಒಟಿಟಿಯಂತಹ ಡಿಜಿಟಲ್ ವೇದಿಕೆಗೆ ಜನರು ಒಗ್ಗಿಕೊಳ್ಳುತ್ತಿರುವಾಗ ಪುನೀತ್ ಅವರು ಚಿತ್ರಮಂದಿರದಲ್ಲೇ ಪ್ರದರ್ಶನ ಆಗಬೇಕು ಎಂಬ ಧೋರಣೆ ಕೈ ಬಿಡಬೇಕು ಎಂದು ನಟ ಪುನೀತ್ ಅವರಲ್ಲಿ ಅವರು ಮನವಿ ಮಾಡಿದರು.