ನಟ ಪುನೀತ್ ಗೆ‌ ಪದ್ಮಶ್ರೀ ಪ್ರಶಸ್ತಿ ನೀಡಲು ಸಿದ್ದರಾಮಯ್ಯ ಆಗ್ರಹ

ತುಮಕೂರು, ನ.1- ಹೃದಯ ಸ್ತಂಭನದಿಂದ ನಿಧನರಾದ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಗುಬ್ಬಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುನೀತ್​ ಅವರಿಗೆ ಪದ್ಮಶ್ರೀ ನೀಡುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು.
ಪುನೀತ್ ರಾಜ್ ಕುಮಾರ್ ದಿವಂಗತ ನಟಸಾರ್ವಭೌಮ ರಾಜ್ ಕುಮಾರ್ ಅವರ ಪುತ್ರ. ಮೊನ್ನೆ ನಿಧನರಾಗಿದ್ದಾರೆ. ಅವರದ್ದು ಸಾಯುವ ವಯಸ್ಸಲ್ಲ. ಪ್ರತಿಭಾವಂತ ನಟ ಪುನೀತ್​ಗೆ ಕಲೆ ರಕ್ತಗತವಾಗಿ ಬಂದಿತ್ತು. ರಾಜ್ ಕುಮಾರ್ ದೇಶಕಂಡ ಶ್ರೇಷ್ಠ ನಟ. ಅದಕ್ಕೆ ಅವರಿಗೆ ಫಾಲ್ಕೆ ಪ್ರಶಸ್ತಿ ರಾಜ್ ಕುಮಾರ್ ರಿಗೆ ಲಭಿಸಿತು. ಇತ್ತಿಚೆಗೆ ರಜನಿಕಾಂತ್ ಅವರಿಗೆ ಸಿಕ್ಕಿದೆ, ಅವರು ಕನ್ನಡಿಗರೇ ಎಂದು ಹೇಳಿದರು.
ಚಿಕ್ಕ ವಯಸ್ಸಿನಲ್ಲಿಯೇ ಅಪಾರ ಪ್ರೀತಿ ಗಳಿಸಿದ್ದ ನಟ ಪುನೀತ್ ರಾಜ್‍ಕುಮಾರ್. 20 ಲಕ್ಷ ಜನರು ಅಂತಿಮ ದರ್ಶನ ಮಾಡಿದ್ದಾರೆ. ಬಹಳ ಜನರು ಅತ್ತಿದ್ದಾರೆ, ಸಂಕಟ ಪಟ್ಟಿದ್ದಾರೆ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪುನೀತ್ ರಾಜ್‍ಕುಮಾರ್ ರವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ದುಃಖ ಭರಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು. ಪುನೀತ್ ರಾಜ್‍ಕುಮಾರ್ ರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಿ ಅಂತಾ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಲಾಗುವುದು. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದರು.