ನಟ ಪುನೀತ್‍ರಾಜಕುಮಾರ್‍ಗೆ ನುಡಿ ನಮನ ಕಾರ್ಯಕ್ರಮ

ನಂಜನಗೂಡು: ನ.14:- ಆರೋಗ್ಯ ಪೂರ್ಣ ಸಮಾಜ ನಿರ್ಮಾಣದ ಕನಸು ಹೊಂದಿದ್ದ ಸಾಮಾಜಿಕ ಕಳಕಳಿಯ ಚಲನ ಚಿತ್ರನಟ ಪುನೀತ್‍ರಾಜಕುಮಾರ್ ಅಗಲಿಕೆಯಿಂದ ಇಡೀ ನಾಡು ದಿಗ್ಭ್ರಮೆಗೆ ಒಳಗಾಗಿದ್ದು ಅವರ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ ಎಂದು ಶಾಸಕ ಬಿ.ಹರ್ಷವರ್ಧನ್ ಹೇಳಿದರು.
ಅವರು ಶನಿವಾರ ನಗರದ ಯಾತ್ರಿ ಭವನದಲ್ಲಿ ಅಭಿಮಾನಿಗಳು ಏರ್ಪಡಿಸಿದ್ದ ಪುನೀತ್‍ರಾಜಕುಮಾರ್ ನುಡಿ ನಮನ, ಗೀತ ಗಾಯನ ಹಾಗೂ ನೇತ್ರದಾನ ನೋಂದಣಿ ಅಭಿಯಾನ ಕಾರ್ಯಕ್ರಮವನ್ನುದ್ಧೇಶಿಸಿ ಮಾತನಾಡಿದರು.
ನಾಡು ನುಡಿ, ನೆಲ ಜಲ, ಶಿಕ್ಷಣ, ಬಡ ಮಕ್ಕಳ ಕಲ್ಯಾಣಕ್ಕಾಗಿ ಅಹರ್ನಿಶಿಯಾಗಿ ಸೇವೆ ಸಲ್ಲಿಸುತ್ತಾ ಸ್ವಾಸ್ಥ್ಯ ಸಮಾಜ ಕಟ್ಟುವ ಕಾಯಕದಲ್ಲಿ ಎಲೆಮರೆ ಕಾಯಿಯಂತೆ ನೆರವಾಗಿದ್ದ ನಟ ಪುನೀತ್ ರಾಜ ಕುಮಾರ್ ಅವರು ನಡೆಸುತ್ತಿದ್ದ ಸೇವಾ ಕಾರ್ಯಗಳು ಸ್ವತಃ ಅವರ ಕುಟುಂಬದ ಸದಸ್ಯರಿಗೆ ಹೆಚ್ಚಿನ ಮಾಹಿತಿ ಇರಲಿಲ್ಲ ಎಂಬುದು ಅವರ ಸರಳತೆ ಹಾಗೂ ಆದರ್ಶಪ್ರಾಯ ಜೀವನಕ್ಕೆ ನಿದರ್ಶನವಾಗಿದೆ ಎಂದರು.
ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸಿದ ಅಪ್ಪು ಸಿನಿಮಾವನ್ನು ನಾನು ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ರಾಮಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲೇ ಶೂಟಿಂಗ್ ಮಾಡುತ್ತಿದ್ದ ಸಂದರ್ಭ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸಹಜವಾಗಿಯೇ ಬೆರೆಯುತ್ತಿದ್ದರು. ದೊಡ್ಮನೆ ಹುಡುಗ ಎಂಬ ಹಮ್ಮು ಅವರಲ್ಲಿರಲಿಲ್ಲ. ಡಾ.ರಾಜಕುಮಾರ್ ನಂತರ ಪುನೀತ್‍ರಾಜಕುಮಾರ್ ಅವರಲ್ಲಿ ಅಭಿಮಾನಿಗಳು ಅಣ್ಣಾವ್ರನ್ನು ಕಾಣುತ್ತಿದ್ದರು. ಇದೀಗ ಅವರ ಅಗಲಿಕೆಯಿಂಡ ಇಡೀ ನಾಡು ಶೋಕಸಾಗರದಲ್ಲಿ ಮುಳುಗಿದೆ. ಅವರು ಮಾಡಿದ ದಾನ ಧರ್ಮ ಹಾಗೂ ನೆಲ, ಜಲ, ಭಾಷೆ ಬಗ್ಗೆ ಇದ್ದ ಬದ್ಧತೆ ಹಾಗೂ ಕಾಳಜಿ ಇಂದಿನ ಯುವ ಪೀಳಿಗೆಗೆ ಆದರ್ಶವಾಗಲಿ ಎಂದು ಹೇಳಿದರು.
ಮಾಜಿ ಶಾಸಕ ಕಳಲೆ ಎನ್.ಕೇಶವಮೂರ್ತಿ ಮಾತನಾಡಿ, ಪುನೀತ್‍ರಾಜಕುಮಾರ್ ಬಾಲನಟನಾಗಿ ಅಭಿನಯಿಸಿ ಜನ ಮೆಚ್ಚುಗೆ ಪಡೆದಿದ್ದರು ನಂತರ ನಾಯಕನಟನಾಗಿ ತಮ್ಮ ತಂದೆ ರಾಜಕುಮಾರ್ ಅವರಂತೆ ಸಾಮಾಜಿಕ ಕಳಕಳಿಯ ಸಿನಿಮಾಗಳನ್ನು ಮಾಡಿ ಕೋಟ್ಯಾಂತರ ಜನರ ಅಭಿಮಾನಕ್ಕೆ ಪಾತ್ರರಾಗಿದ್ದವರು. ಕಾಮನಬಿಲ್ಲು ಸಿನಿಮಾ ಚಿತ್ರೀಕರಣವನ್ನು ನಮ್ಮ ಸ್ವಗ್ರಾಮ ಕಳಲೆಯಲ್ಲಿ ನಡೆಯುತ್ತಿದ್ದ ಸಂದರ್ಭ ಪುನೀತ್‍ರಾಜಕುಮಾರ್ ಚಿಕ್ಕ ಹುಡುಗನಾಗಿದ್ದು ಚಿತ್ರೀಕರಣಕ್ಕೆ ಬರುತ್ತಿದ್ದ ಅಪ್ಪು ನಮ್ಮ ಗ್ರಾಮದಲ್ಲಿ ಆಟವಾಡಿಕೊಂಡಿದ್ದ ನೆನಪು ನಮಗೆ ಇಂದಿಗೂ ಹಚ್ಚ ಹಸಿರಾಗಿದೆ ಎಂದು ಹಳೇ ನೆನಪು ಮೆಲಕು ಹಾಕಿದರು.
154 ಜನರಿಂದ ನೇತ್ರದಾನ
ಪುನೀತ್‍ರಾಜಕುಮಾರ್ ಅವರಿಂದ ಪ್ರೇರಿಪಿತರಾದ 154 ಜನರು ನೇತ್ರದಾನ ನೋಂದಣಿ ಮಾಡಿಸುವ ಮೂಲಕ ಗಮನ ಸೆಳೆದರು. ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು, ಶಿಕ್ಷಕರು, ಕಾರ್ಮಿಕರು ನೋಂದಣಿ ಮಾಡಿಸಿ ಪುನೀತ್‍ರಾಜಕುಮಾರ್ ಅವರಿಗೆ ಕಂಬಿನಿ ಮಿಡಿದರು. ಇದೇ ವೇಳೆ ಗಾಯಕರು ಗೀತ ಗಾಯನದೊಂದಿಗೆ ಪುನೀತ್‍ರಾಜಕುಮಾರ್ ಅವರಿಗೆ ಭಾವುಕ ನಮನ ಸಲ್ಲಿಸಿದರು.
ಇನ್ನು ನಂಜನಗೂಡಿಗೂ, ಪುನೀತ್‍ರಾಜಕುಮಾರ್ ಕುಟುಂಬಕ್ಕೂ ಅವಿನಾಭಾವ ಸಂಬಂಧ ಇರುವುದರಿಂದ ರಸ್ತೆಯೊಂದಕ್ಕೆ ಅವರ ಹೆಸರು ನಾಮಕರಣ ಮಾಡುವಂತೆ ಕಾರ್ಯಕ್ರಮದಲ್ಲಿ ಅಭಿಮಾನಿಗಳು ಶಾಸಕ ಬಿ.ಹರ್ಷವರ್ಧನ್ ಅವರಿಗೆ ಮನವಿ ಸಲ್ಲಿಸಿದರು. ಈ ನಿಟ್ಟಿನಲ್ಲಿ ಕ್ರಮವಹಿಸುವುದಾಗಿ ಹರ್ಷವರ್ಧನ್ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಪುನೀತ್‍ರಾಜಕುಮಾರ್ ಸೋದರ ಮಾವ ಎಸ್.ಎ.ಶ್ರೀನಿವಾಸ್, ಪುನೀತ್ ನಿಕಟವರ್ತಿ ಕಾಳಿಹುಂಡಿ ಪ್ರಭಾಕರ್, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಎನ್.ಆರ್.ಕೃಷ್ಣಪ್ಪಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಎನ್.ನರಸಿಂಹಸ್ವಾಮಿ, ಬಿಜೆಪಿ ಮುಖಂಡರಾದ ಕುಂಬ್ರಹಳ್ಳಿ ಸುಬ್ಬಣ್ಣ, ಬಿ.ನಂಜುಂಡಸ್ವಾಮಿ, ರೈತಸಂಘದ ರಾಜ್ಯ ವರಿಷ್ಠ ಪಚ್ಚೆ ನಂಜುಂಡಸ್ವಾಮಿ, ಜಿಲ್ಲಾಧ್ಯಕ್ಷ ಟಿ.ಆರ್.ವಿದ್ಯಾಸಾಗರ್, ನಿವೃತ್ತ ಸಹಾಯಕ ಪ್ರಾಧ್ಯಾಪಕ ಪೆÇ್ರ.ಮಹದೇವ ಭರಣಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ನಾಗರಾಜು, ಬಿಜೆಪಿ ತಾಲೂಕು ಅಧ್ಯಕ್ಷ ಪಿ.ಮಹೇಶ್, ತಾಲೂಕು ಈಡಿಗರ ಸಂಘದ ಉಪಾಧ್ಯಕ್ಷ ಎನ್.ಟಿ.ಗಿರೀಶ್, ಜಿ.ಕೆ.ಮಂಜುನಾಥ್, ನಾರಾಯಣ, ವಕೀಲ ವಿನಯ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.