ನಟ ನವದೀಪ್ ನಿವಾಸದ ಮೇಲೆ ಡ್ರಗ್ಸ್ ನಿಗ್ರಹ ದಾಳಿ

ಹೈದ್ರಾಬಾದ್,ಸೆ.೨೦:ಭಾರತೀಯ ಚಿತ್ರರಂಗದಲ್ಲಿ ಡ್ರಗ್ಸ್ ಹಾವಳಿ ತಾಂಡವವಾಡುತ್ತಿದ್ದು, ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಡ್ರಗ್ಸ್ ನಿಗ್ರಹ ದಳದ ಅಧಿಕಾರಿಗಳು ತೆಲುಗು ನಟ ನವ್‌ದೀಪ್ ನಿವಾಸದ ಮೇಲೆ ದಾಳಿ ಮಾಡಿದ್ದಾರೆ.
ಇತ್ತೀಚೆಗಷ್ಟೆ ನಿರ್ಮಾಪಕ ಸೇರಿದಂತೆ ಹಲವರನ್ನು ಬಂಧಿಸಿದ್ದ ಬೆನ್ನಲ್ಲೆ ಈ ದಾಳಿ ನಡೆದಿದೆ. ಈ ಹಿಂದೆಯೂ ತೆಲುಗಿನ ಅನೇಕ ನಟರು ಡ್ರಗ್ಸ್ ಸೇವಿಸುವ ಆರೋಪ ಕೇಳಿ ಬಂದಿತ್ತು.
ಈ ಬಗ್ಗೆ ನೋಟಿಸ್ ನೀಡಿ ನಟರನ್ನು ವಿಚಾರಣೆಗೊಳಪಡಿಸಲಾಗಿತ್ತು. ಆದರೂ ಚಿತ್ರರಂಗದಲ್ಲಿ ಡ್ರಗ್ಸ್ ಹಾವಳಿಯ ಆರೋಪ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ. ಕೇವಲ ತೆಲುಗು ಚಿತ್ರರಂಗದಲ್ಲಿ ಮಾತ್ರವಲ್ಲ, ಮಲೆಯಾಳಂ ಚಿತ್ರರಂಗದಲ್ಲೂ ಸದ್ದು ಮಾಡುತ್ತಿದೆ.
ಕೆಲವು ನಟರು ಶೂಟಿಂಗ್ ನಡೆಯುವ ಸ್ಥಳದಲ್ಲೇ ಡ್ರಗ್ಸ್ ಸೇವಿಸಿರುವ ಅಂಶ ಭಾರಿ ಚರ್ಚೆಗೆ ಕಾರಣವಾಗಿತ್ತು. ಸ್ಯಾಂಡಲ್‌ವುಡ್‌ನಲ್ಲೂ ಈ ಮೊದಲು ಹಲವು ನಟ-ನಟಿಯರು ಡ್ರಗ್ಸ್ ಸೇವಿಸಿರುವ ಆರೋಪ ಭಾರಿ ಸಂಚಲನಕ್ಕೆ ಕಾರಣವಾಗಿತ್ತು.
ನಟಿಯರಾದ ರಾಗಿಣಿ, ಸಂಜನಾ ಸೇರಿದಂತೆ ಹಲವರು ಜೈಲು ಶಿಕ್ಷೆ ಅನುಭವಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.