ನಟ ದರ್ಶನ್ ಬೇರೆ ಜೈಲಿಗೆ ವರ್ಗಾವಣೆ ಸಾಧ್ಯತೆ

ಬೆಂಗಳೂರು,ಜೂ.೨೪-ಚಿತ್ರದುರ್ಗದ ರೇಣುಕಾಸ್ವಾಮಿ ಕ್ರೂರ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್‌ನನ್ನು ಭದ್ರತೆ ದೃಷ್ಟಿಯಿಂದ ಬೇರೆ ಜೈಲಿಗೆ ವರ್ಗಾವಣೆ ಮಾಡುವ ಸಾಧ್ಯತೆಗಳಿವೆ.
ದರ್ಶನ್‌ನನ್ನು ಬೇರೆ ಜೈಲಿಗೆ ವರ್ಗಾವಣೆ ಮಾಡಲು ಅವಕಾಶ ಕೊಡುವಂತೆ ಎಸ್‌ಪಿಪಿ ನ್ಯಾಯಾಲಯದಲ್ಲಿ ಮನವಿ ಮಾಡಿದ್ದು,ಈ ಸಂಬಂಧಿಸಿದಂತೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ನಡೆಯಲಿದೆ.
ಒಂದು ವೇಳೆ ನ್ಯಾಯಾಲಯ ಅರ್ಜಿ ಪುರಸ್ಕರಿಸಿದರೆ ತುಮಕೂರು ಜೈಲಿಗೆ ಕಳಿಸಲಾಗುತ್ತದೆ. ಇಲ್ಲವಾದರೆ ಪರಪ್ಪನ ಅಗ್ರಹಾರದ ಭದ್ರತಾ ಸಿಬ್ಬಂದಿ ಕೊಠಡಿಯಲ್ಲೇ ನಟ ಕಾಲ ಕಳೆಯಬೇಕಾಗಿದೆ.
ಬೇರೆ ಜೈಲಿಗೆ ವರ್ಗಾವಣೆ ಮಾಡಲು ಮನವಿ ಮಾಡಿರುವ ಕಾರಣಗಳೆಂದರೆ, ಜನಪ್ರಿಯ ನಟನಾಗಿರುವುದರಿಂದ ಹಲವರು ಪರಿಚಯವಿದ್ದು ಕೈದಿಗಳ ನಡುವೆ ಗಲಾಟೆಯಾಗುವ ಸಾಧ್ಯತೆ ಇದೆ. ಸಹ ಕೈದಿಗಳು ದರ್ಶನ್ ಮೇಲೆ ದಾಳಿ ಮಾಡಬಹುದು. ಪ್ರಕರಣದಲ್ಲಿರುವ ಹಲವು ಆರೋಪಿಗಳಿಗೆ ರೌಡಿ ಕಾಂಟ್ಯಾಕ್ಟ್ ಇರುವ ಹಿನ್ನೆಲೆಯಲ್ಲಿ, ರೌಡಿಗಳ ಮುಖಾಂತರ ಸಾಕ್ಷಿ ನಾಶ ಮಾಡುವಲ್ಲಿ ಯತ್ನಿಸುವ ಸಾಧ್ಯತೆ ಇದೆ. ಜೊತೆಗೆ ದರ್ಶನ್‌ನನ್ನು ನೋಡಲು ಕೈದಿಗಳಿಂದ ಜೈಲಿನೊಳಗೆ ಹಾಗೂ ಅಭಿಮಾನಿಗಳಿಂದ ಜೈಲಿನ ಹೊರಗೆ ದೊಂಬಿ ಆಗುವ ಸಾಧ್ಯತೆಯೂ ಇದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಬೇರೆ ಜೈಲಿಗೆ ಸ್ಥಳಾಂತರ ಮಾಡಲು ಎಸ್ಪಿಪಿ ಮನವಿ ಮಾಡಿದ್ದಾರೆ.
ಇಂದು ಜಾಮೀನು ಅರ್ಜಿ:
ದರ್ಶನ್ ಸೇರಿದತೆ ರೇಣುಕಾ ಸ್ವಾಮಿ ಕೊಲೆ ಆರೋಪಿಗಳು ಜಾಮೀನು ಕೋರಿ ಇಂದು ಎಸಿಎಂಎಂ ಕೋರ್ಟ್ ಮುಂದೆ ಅರ್ಜಿ ಸಲ್ಲಿಸಲಿದ್ದಾರೆ. ಜಾಮೀನು ಅರ್ಜಿ ಸಲ್ಲಿಕೆ ಮಾಡಿದರೆ ದರ್ಶನ್ ಪರ ವಾದ ಮಂಡನೆಯನ್ನು ಹಿರಿಯ ವಕೀಲ ಸಿ.ವಿ ನಾಗೇಶ್ ಮಾಡಲಿದ್ದಾರೆ.
ಈ ನಡುವೆ ನಟ ದರ್ಶನ್. ಜೈಲೂಟ ಸೇರದೆ ಪರದಾಡುತ್ತಿದ್ದಾರೆ. ಎ೧ ಆರೋಪಿ ಪವಿತ್ರಾ ಗೌಡ ಸಹ ಜೈಲಿನ ಆಹಾರ ಇಷ್ಟವಾಗದೆ ಒದ್ದಾಡುತ್ತಿದ್ದಾರೆ. ಮೊದಲೇ ದೇಹ ದಾಡ್ಯ ಕಾಯ್ದುಕೊಳ್ಳಲು ಚಿಕನ್, ಮಟನ್, ಪ್ರೂಟ್ಸ್, ಜೂಸ್ ಸೇವಿಸುತ್ತಿದ್ದ ದರ್ಶನ್, ಜೈಲಿನಲ್ಲಿ ಸರಿಯಾಗಿ ಉಪ್ಪು ಕಾರ ಇಲ್ಲದ ಸಾಂಬಾರ್, ಮುದ್ದೆ ಅನ್ನ ತಿನ್ನಲು ಕಷ್ಟಪಡುತ್ತಿದ್ದಾನೆ.
ಪವಿತ್ರಾ ಮೌನ:
ಹೊರಗಡೆ ಇದ್ದಾಗ ಐಷಾರಾಮಿ ಜೀವನ ನಡೆಸುತ್ತಿದ್ದ ನಟಿ ಪವಿತ್ರಾಗೆ ಜೈಲಿನಲ್ಲಿ ದಿನ ಕಳೆಯುವುದು ಕಷ್ಟವಾಗಿದ್ದು, ಸಹ ಕೈದಿಗಳ ಜೊತೆ ಆಕೆ ಬೆರೆಯದೇ ಸಂಪೂರ್ಣ ಮೌನಕ್ಕೆ ಶರಣಾಗಿದ್ದಾರೆ.
ಇಂದು ಬೆಳಗ್ಗೆ ಬೇಗ ಎದ್ದ ಅವರು ಕಾಫಿ ಕುಡಿದು, ಪೇಪರ್ ಓದಿದ್ದಾರೆ. ನಿನ್ನೆ ರಾತ್ರಿ ಜೈಲಿನ ಸಿಬ್ಬಂದಿ ನೀಡಿದ್ದ ಮುದ್ದೆ, ಅನ್ನ, ಚಪಾತಿ ತರಕಾರಿ ಸಾಂಬಾರ್ ಮತ್ತು ಮಜ್ಜಿಗೆ ಊಟವನ್ನು ಅವರು ಒಲ್ಲದ ಮನಸ್ಸಿನಿಂದ ಸೇವಿಸಿದ್ದಾರೆ ಎನ್ನಲಾಗಿದೆ.
ಸರಿಯಾಗಿ ಉಪ್ಪು ಖಾರ ಇಲ್ಲದ ಜೈಲಿನ ಊಟ ಸೇವಿಸುವುದು ಪವಿತ್ರಾ ಗೌಡಗೆ ಕಷ್ಟವಾಗಿದ್ದು, ಚಾಪೆಯಲ್ಲಿ ಮಲಗಲು ಅವರಿಗೆ ಸಾಧ್ಯವಾಗುತ್ತಿಲ್ಲ. ಇದರ ಜೊತೆಗೆ ಸೊಳ್ಳೆ ಕಾಟ ಕೂಡ ಇರುವುದರಿಂದ ಅವರು ಇನ್ನಷ್ಟು ಹೈರಾಣಾಗಿದ್ದಾರೆ.