ನಟ ದರ್ಶನ್ ಬಂಧನದ ಬಳಿಕ ಆರೋಪಿಗಳ ಮುಖಾಮುಖಿ

ಬೆಂಗಳೂರು,ಜೂ.೧೭-ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೃತ್ಯದಲ್ಲಿ ಭಾಗಿಯಾಗಿರುವ ಕೆಲವರು ನಟ ದರ್ಶನ್ ಬಂಧಿತನಾದ ಬಳಿಕವೇ ಮುಖಾಮುಖಿ ಭೇಟಿಯಾಗಿರುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
ದರ್ಶನ್‌ಗಾಗಿ ಅಂದಾಭಿಮಾನದಿಂದ ಕೃತ್ಯ ಎಸಗಿದವರಲ್ಲಿ ಕೆಲವರು ದರ್ಶನ್ ಅವರನ್ನು ಮುಖಾಮುಖಿ ನೋಡಿದ್ದೇ ಪೊಲೀಸ್ ಠಾಣೆಯಲ್ಲಿ ಎನ್ನಲಾಗಿದೆ.
ಪ್ರಕರಣದಲ್ಲಿ ಪವಿತ್ರಾಗೌಡ, ಆಕೆಯ ಮ್ಯಾನೇಜರ್ ಪವನ್, ಸ್ಟೋನಿಬ್ರೂಕ್ಸ್ ಮಾಲೀಕ ವಿನಯ್, ದರ್ಶನ್ ಮ್ಯಾನೇಜರ್ ನಾಗರಾಜ್, ಸ್ಕಾರ್ಪಿಯೋ ಕಾರು ಮಾಲೀಕ ಪುನೀತ್, ವಿನಯ್,ದೀಪಕ್, ಪ್ರದೋಶ್, ಚಿತ್ರದುರ್ಗದ ರಾಘವೇಂದ್ರ, ಮಂಡ್ಯದ ನಂದೀಶ್ ಮಾತ್ರ ದರ್ಶನ್‌ಗೆ ನೇರ ಪರಿಚಯವಿತ್ತು.
ರಾಘವೇಂದ್ರ ಜತೆ ಅಪಹರಣ ಮಾಡಿದ್ದ ಅನುಕುಮಾರ್, ಈಟಿಯೋಸ್ ಕಾರು ಚಾಲಕ ರವಿ, ಲಕ್ಷ್ಮಣ್, ಜಗದೀಶ್ ಇವರುಗಳು ದರ್ಶನ್ ಅವರನ್ನು ಕಂಡಿದ್ದೆ ಪೊಲೀಸ್ ಠಾಣೆಯಲ್ಲಿ ಎಂದು ತಿಳಿದು ಬಂದಿದೆ.
ದರ್ಶನ್‌ಗಾಗಿ ರೇಣುಕಾಸ್ವಾಮಿ ಮೃತ ದೇಹ ಬಿಸಾಡಿದ್ದ ಕೇಶವ್, ಕಾರ್ತಿಕ್, ನಿಖಿಲ್ ನಾಯಕ್ ನಟ ದರ್ಶನ್ ನನ್ನು ಮೊದಲು ಭೇಟಿಯಾಗಿದ್ದು ಕೊಲೆಯಾದ ಮಾರನೇ ದಿನ ಅಂದರೆ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಎನ್ನಲಾಗಿದೆ.
ದರ್ಶನ್ ತಂಗಿದ್ದ ಮೈಸೂರಿನ ಖಾಸಗಿ ಹೋಟೆಲ್‌ಗೆ ಕೇಶವ್, ಕಾರ್ತಿಕ್, ನಿಖಿಲ್ ರನ್ನು ಕರೆದೊಯ್ದು ದೀಪಕ್ ಭೇಟಿ ಮಾಡಿಸಿದ್ದು ದೀಪಕ್ ಸೂಚನೆಯಂತೆ ರೇಣುಕಾಸ್ವಾಮಿ ಮೃತದೇಹವನ್ನು ಸುಮ್ಮನಹಳ್ಳಿ ರಾಜಕಾಲುವೆಗೆ ಬಿಸಾಡಿದ್ದರು. ನಂತರ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಹೋಗಿ ಹಣಕಾಸಿನ ವಿಚಾರಕ್ಕೆ ರೇಣುಕಾಸ್ವಾಮಿ ಹತ್ಯೆ ಮಾಡಿದ್ದಾಗಿ ಕೇಶವ್, ಕಾರ್ತಿಕ್, ನಿಖಿಲ್‌ನಾಯಕ್ ಶರಣಾಗಿದ್ದರು.
ಪತ್ತೆಯಾಗದ ಮೊಬೈಲ್:
ಕಳೆದ ಹತ್ತು ದಿನಗಳಿಂದ ಹುಡುಕಾಡಿದರೂ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿರುವ ರೇಣುಕಾಸ್ವಾಮಿ ಮೊಬೈಲ್ ಪತ್ತೆಯಾಗಿಲ್ಲ. . ಅಶ್ಲೀಲ ಕಮೆಂಟ್ ಸಂಬಂಧಪಟ್ಟಂತೆ ಇದರಿಂದ ಸಾಕ್ಷಿಗಳನ್ನು ರಿಟ್ರೀವ್ ಮಾಡಬೇಕಾಗಿದೆ. ಆರೋಪಿಗಳು ರೇಣುಕಾಸ್ವಾಮಿ ಮೊಬೈಲ್‌ನಲ್ಲೇ ಕ್ಷಮಾಪಣಾ ವಿಡಿಯೋ ಮಾಡಿಸಿದ್ದರು. ಆರ್‌ಆರ್ ನಗರ ಪಟ್ಟಣಗೆರೆ ಶೆಡ್, ಕಿಡ್ನಾಪ್ ಮಾಡಿದ ರವಿಯ ಈಟಿಯೋಸ್ ಕಾರು ಸೇರಿ ಹಲವು ಕಡೆ ಹುಡುಕಿದರೂ ಮೊಬೈಲ್ ಪತ್ತೆಯಾಗಿಲ್ಲ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಆದರೆ, ವಿಚಾರಣೆ ವೇಳೆ ಮೊಬೈಲ್ ಪಾಸ್‌ವರ್ಡ್ ನೀಡಲು ದರ್ಶನ್ ಮತ್ತು ಆತನ ಗ್ಯಾಂಗ್ ನಿರಾಕರಿಸುತ್ತಿದೆ. ಇದರಿಂದ ಪೊಲೀಸರ ತನಿಖೆಗೆ ಅಡಚಣೆಯಾಗುತ್ತಿದೆ ಎಂದು ತಿಳಿದುಬಂದಿದೆ.
ಪಟ್ಟು ಬಿಡದ ಪೊಲೀಸ್:
ದರ್ಶನ್ ಗ್ಯಾಂಗ್‌ನಿಂದ ಪೊಲೀಸರು ಇದುವರೆಗೆ ೧೦ ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದು,ಡೇಟಾ ವರದಿಗಾಗಿ ಕಾಯುತ್ತಿದ್ದಾರೆ. ಇನ್ನು ಕೆಲವು ಮೊಬೈಲ್‌ಗಳಲ್ಲಿದ್ದ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದು, ಆರೋಪಿಗಳು ಇನ್ನೂ ಕೆಲವು ಮೊಬೈಲ್‌ಗಳ ಪಾಸ್‌ವರ್ಡ್ ನೀಡುತ್ತಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇಷ್ಟಾದರೂ ಪಟ್ಟು ಬಿಡದ ಪೊಲೀಸ್ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ
ಎಲೆಕ್ಟ್ರಿಕ್ ಡಿವೈಸ್:
ದರ್ಶನ್ ಮೇಲಿನ ಅಂಧಾಭಿಮಾನದಿಂದ ಎ೫ ಆರೋಪಿ ನಂದೀಶ್ ಸ್ನೇಹಿತನನ್ನು ಭಾಗಿಯಾಗಿಸಿದ್ದಾನೆ. ಜೊತೆಗೆ ಕೆಲಸ ಮಾಡುತ್ತಿದ್ದವನ ಮಾತು ಕೇಳಿ ಎಲೆಕ್ಟ್ರಿಕ್ ಡಿವೈಸ್ ತಂದು ಸಹಾಯ ಮಾಡಿದ್ದಕ್ಕೆ ಈಗ ರಾಜು ಪ್ರಕರಣದ ಆರೋಪಿ ಪಟ್ಟಿ ಸೇರಿದ್ದಾನೆ.
ನಂದೀಶ್ ಜೊತೆ ರಾಜು ಕೇಬಲ್ ಕೆಲಸ ಮಾಡಿಕೊಂಡಿದ್ದು, ಎಲೆಕ್ಟ್ರಿಕಲ್ ಮೆಗ್ಗಾರ್ ಬಗ್ಗೆ ಆರೋಪಿಗಳು ತಿಳಿದುಕೊಂಡಿದ್ದರು.
ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿಗೆ ನಂದೀಶ್ ಮತ್ತು ಇತರ ಆರೋಪಿಗಳು ಕರೆಂಟ್ ಶಾಕ್ ನೀಡುವ ಸಂಚು ಮಾಡಿ ಜೂ. ೮ ರಂದು ಮೆಗ್ಗಾರ್ ಜೊತೆ ರಾಜುನನ್ನು ಪಟ್ಟಣಗೆರೆ ಶೆಡ್‌ಗೆ ನಂದೀಶ್ ಕರೆಸಿಕೊಂಡಿದ್ದ.
ಪೂರ್ವ ನಿಯೊಜಿತ ಸಂಚಿನಂತೆ ರಾಜುವಿನಿಂದ ಎಲೆಕ್ಟ್ರಿಕಲ್ ಮೆಗ್ಗಾರ್ ಯಂತ್ರವನ್ನು ನಂದೀಶ್ ತರಿಸಿಕೊಂಡಿದ್ದು,ಅದನ್ನು ಬಳಸಿ ರೇಣುಕಾಸ್ವಾಮಿಗೆ ಆರೋಪಿಗಳು ಕರೆಂಟ್ ಶಾಕ್ ನೀಡಿದ್ದರು.
ಎಲೆಕ್ಟ್ರಿಕಲ್ ಮೆಗ್ಗರ್ ಜಪ್ತಿ:
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರಾಜು ತಲೆ ಮರೆಸಿಕೊಂಡಿದ್ದು, ಪ್ರಕರಣದಲ್ಲಿ ರಾಜು ಪಾತ್ರ ಇರುವುದನ್ನು ಖಚಿತಪಡಿಸಿದ ಪೊಲೀಸರು ಎಫ್‌ಐಆರ್‌ನಲ್ಲಿ ೯ನೇ ಆರೋಪಿಯನ್ನಾಗಿ ಹೆಸರಿಸಿದ್ದರು. ನಾಪತ್ತೆಯಾಗಿದ್ದ ಸ್ನೇಹಿತ ರಾಜುವನ್ನು ಸ್ನೇಹಿತನ ಮನೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ರಾಜು ಜೊತೆ ಎಲೆಕ್ಟ್ರಿಕಲ್ ಮೆಗ್ಗರ್ ಯಂತ್ರ ಕೂಡ ವಶಕ್ಕೆ ಪಡೆದು ನಡೆಸಿದ ವಿಚಾರಣೆ ವೇಳೆ ರಾಜು ತನ್ನ ಪಾತ್ರವನ್ನು ವಿವರಿಸಿದ್ದಾನೆ