
ನ್ಯೂಯಾರ್ಕ್, ಆ.೧- ಯುಪೋರಿಯಾ ಮಕ್ಕಳ ಧಾರಾವಾಹಿಯಲ್ಲಿ ಡ್ರಗ್ ಪಾತ್ರದ ಮೂಲಕ ಜಗತ್ತಿನ ಗಮನ ಸೆಳೆದಿದ್ದ ಯುವನಟ ಆಂಗಸ್ ಕ್ಲೌಡ್ (೨೫) ಅವರು ಇದೀಗ ನಿಧನರಾಗಿದ್ದಾರೆ. ಆದರೆ ಕ್ಲೌಡ್ ನಿಧನಕ್ಕೆ ಅವರ ಕುಟುಂಬ ಯಾವುದೇ ಸೂಕ್ತ ಕಾರಣವನ್ನು ನೀಡಿಲ್ಲ. ಸಹಜವಾಗಿಯೇ ಕ್ಲೌಡ್ ನಿಧನದ ಸುದ್ದಿ ಕೇಳಿ ಅಭಿಮಾನಿಗಳು ಆಘಾತಕ್ಕೆ ಒಳಗಾಗಿದ್ದಾರೆ.
ಹಲವು ಬಾರಿ ಪ್ರತಿಷ್ಟಿತ ಎಮ್ಮಿ ಅವಾರ್ಡ್ ಪ್ರಡೆದುಕೊಂಡಿರುವ ಯುಪೋರಿಯಾ ಧಾರಾವಾಹಿಯಲ್ಲಿ ಕ್ಲೌಡ್ ಅವರು ಕುಖ್ಯಾತ ಡ್ರಗ್ ವ್ಯಾಪಾರಿ ಫೆಝ್ಕೊ ಫೆಝ್ ಒನೀಲ್ ಪಾತ್ರದ ಮೂಲಕ ಗಮನ ಸೆಳೆದಿದ್ದರು. ಇನ್ನು ಕ್ಲೌಡ್ ನಿಧನಕ್ಕೆ ಸೂಕ್ತ ಕಾರಣ ಇನ್ನೂ ತಿಳಿದು ಬಂದಿಲ್ಲ. ಆದರೆ ಮೂಲಗಳ ಪ್ರಕಾರ ಕ್ಲೌಡ್ ಅವರ ತಂದೆ ಇತ್ತೀಚಿಗಷ್ಟೇ ನಿಧನರಾಗಿದ್ದರು. ಹೀಗಾಗಿ ಆ ಬಳಿಕ ಕ್ಲೌಡ್ ಅವರು ವಿಪರೀತ ಮಾನಸಿಕ ಖಿನ್ನತೆಗೆ ಒಳಗಾಗಿ, ಸಮಸ್ಯೆ ಎದುರಿಸಿದ್ದರು ಎನ್ನಲಾಗಿದೆ. ತಂದೆಯ ಸಾವಿನ ಬಳಿಕ ಕ್ಲೌಡ್ ಕಳೆದ ಒಂದು ವಾರ ಮಾನಸಿಕವಾಗಿ ಜರ್ಝರಿತರಾಗಿದ್ದು, ಇದೇ ಕಾರಣದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇನ್ನು ಕ್ಲೌಡ್ ನಿಧನಕ್ಕೆ ಸಂಬಂಧಿಸಿದಂತೆ ಪ್ರಕಟನೆ ಹೊರಬಂದಿದ್ದು, ತಂದೆಯ ಸಾವಿನ ಬಳಿಕ ಕ್ಲೌಡ್ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಖಿನ್ನತೆಗೆ ಒಳಗಾಗಿದ್ದರು. ಕ್ಲೌಡ್ ತಾನು ಅತಿಯಾಗಿ ಪ್ರೀತಿಸುತ್ತಿದ್ದ ತಂದೆಯನ್ನು ಸದ್ಯ ಕೂಡಿಕೊಂಡಿದ್ದಾರೆ. ಕ್ಲೌಡ್ ಅವರ ನಿಧನವು ಇತರರಿಗೆ ಅವರು ಒಬ್ಬಂಟಿಯಾಗಿಲ್ಲ ಮತ್ತು ಮೌನವಾಗಿ ಹೋರಾಡಬಾರದು ಎಂಬುದನ್ನು ನೆನಪಿಸುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ತಿಳಿಸಲಾಗಿದೆ. ಎರಡು ವಾರಗಳ ಹಿಂದೆಯಷ್ಟೇ ಕ್ಲೌಡ್ ಅವರು ಇನ್‌ಸ್ಟಾಗ್ರಾಂನಲ್ಲಿ ತಂದೆಯ ಫೊಟೋ ಅಪ್ಲೋಡ್ ಮಾಡಿ ಮಿಸ್ ಯೂ ಎಂದು ಪೋಸ್ಟ್ ಮಾಡಿದ್ದರು. ಇನ್ನು ಕುಟುಂಬದ ಮೂಲಗಳ ಪ್ರಕಾರ ಐರ್ಲೆಂಡ್‌ನಲ್ಲಿ ತನ್ನ ತಂದೆಯ ಅಂತಿಮ ವಿಧಿ-ವಿಧಾನ ಮಾಡಿದ ಬಳಿಕ ಅಮೆರಿಕಾಗೆ ಮರಳಿದ ನಂತರ ಕ್ಲೌಡ್ ಹಲವು ಬಾರಿ ಆತ್ಮಹತ್ಯೆಗೆ ಸಂಬಂಧಿಸಿದ ಮಾನಸಿಕತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.