
• ಚಿ.ಗೋ ರಮೇಶ್
ಕಿರುತೆರೆಯಲ್ಲಿ ಪ್ರೇಕ್ಷಕರ ಮನಗೆದ್ದ ನಟ ಅನಿರುದ್ಧ್ ಈಗ “ಶೆಫ್ ಚಿದಂಬರ” ಆಗಿದ್ದಾರೆ. ಹೊಸತನ ಮತ್ತು ವಿಭಿನ್ನ ಕಥೆ ಮುಂದಿಟ್ಟುಕೊಂಡು ಪ್ರೇಕ್ಷಕರನ್ನು ರಂಜಿಸಲು ಮತ್ತೆ ಬೆಳ್ಳಿಪರದೆ ಮೇಲೆ ಬರಲು ಸಜ್ಜಾಗಿದ್ದಾರೆ.
ಇತ್ತೀಚೆಗಷ್ಟೇ ಮೈಸೂರಿನ ವಿಷ್ಣುವರ್ಧನ್ ಸ್ಮಾರಕದಲ್ಲಿ ಸ್ಕ್ರಿಪ್ಟ್ ಪೂಜೆ ನೆರವೇರಿಸಿದ್ದ ಚಿತ್ರತಂಡ ಇದೀಗ ನಟ ಕಿಚ್ಚ ಸುದೀಪ್ ಅವರಿಂದ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿಸಿದೆ. ಈ ಮೂಲಕ ಚಿತ್ರ ಆರಂಭಕ್ಕೂ ಮುನ್ನ ಚಿತ್ರತಂಡಕ್ಕೆ ಮತ್ತಷ್ಟು ಬಲ ಬಂದಿದೆ.
ಚಿತ್ರಕ್ಕೆ ಎಂ. ಆನಂದರಾಜ್ ಆಕ್ಷನ್‍ಕಟ್ ಹೇಳುತ್ತಿದ್ದು ನಟ ಅನಿರುದ್ಧ್ ಐದು ವರ್ಷದ ಬಳಿಕ ಮತ್ತೆ ಬೆಳ್ಳಿತೆರೆಯಲ್ಲಿ ಕಮಾಲ್ ಮಾಡಲು ಮುಂದಾಗಿದ್ದಾರೆ. ಇಂದು ಚಿತ್ರದ ಮುಹೂರ್ತ ನಡೆದಿದ್ದು, ಇದೇ ವೇಳೆ ಚಿತ್ರದ ಗ್ಲಿಂಪ್ಸ್ ಬಿಡುಗಡೆ ಮಾಡಿದ್ದಾರೆ. ಅನಿರುದ್ಧ್ ಕುಟುಂಬ ಸೇರಿದಂತೆ ಹಲವರು ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಟ ಅನಿರುದ್ಧ್, ಇದೊಂದು ವಿಭಿನ್ನ, ವಿನೂತನ ಚಿತ್ರ, ಕನ್ನಡದಲ್ಲಿ ಈ ರೀತಿಯ ಕಥೆಗಳು ತುಂಬಾನೇ ವಿರಳ. ಇದೊಂದು ಡಾರ್ಕ್ ಕಾಮಿಡಿ ಚಿತ್ರ. ಥ್ರಿಲ್ಲರ್, ಮರ್ಡರಿ ಮಿಸ್ಟ್ರಿ ಕಥೆ ಒಳಗೊಂಡಿದೆ. ಚೆಫ್ ಪಾತ್ರ. ವಿಭಿನ್ನ,ವಿಶಿಷ್ಠ ಪಾತ್ರ. ಕಥೆ ಕೇಳಿದಾಗ ಖುಷಿ ಆಯ್ತು ಎಂದು ಮಾಹಿತಿ ಹಂಚಿಕೊಂಡರು.
ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ ಕಿಚ್ಚ ಸುದೀಪ್, ಚಿತ್ರಕ್ಕೆ ಒಳ್ಳೆಯದಾಗಲಿ, ನಿಮ್ಮ ಮೇಲೆ ನಿಮ್ ಕುಟುಂಬದ ಮೇಲೆ ಅಪಾರ ಅಭಿಮಾನವಿದೆ, ನಿಮ್ಮ ಜೊತೆ ನಾನಿದ್ದೇನೆ. ವಿತರಣೆಗೂ ಸಹಾಯ ಮಾಡುತ್ತೇನೆ ಎಂದಿದ್ಧಾರೆ.ಇದಕ್ಕಾಗಿ ಅವರಿಗೆ ಅಭಾರಿ ಎಂದು ಕೃತಜ್ಞತಾ ಭಾವ ವ್ಯಕ್ತಪಡಿಸಿದರು.
ರಾಘು ಎನ್ನುವ ವಿಭಿನ್ನ ಚಿತ್ರ ಮಾಡಿದ್ದ ನಿರ್ದೇಶಕರೇ ಈ ಚಿತ್ರಕ್ಕೂ ಕಥೆ ಬರೆದಿದ್ದಾರೆ. ಚಿತ್ರವನ್ನು ಬೆಂಗಳೂರು, ತುಮಕೂರು, ಮಂಗಳೂರು ಮತ್ತಿತರ ಕಡೆ ಚಿತ್ರೀಕರಣ ಮಾಡಲಾಗುವುದು. ಚಿತ್ರದಲ್ಲಿ ರಚೆಲ್ ಡೆವಿಡ್, ನಿಧಿ ಸುಬ್ಬಯ್ಯ,ಶರತ್ ಲೋಹಿತಾಶ್ವ, ಶಿವಮಣಿ ಮತ್ತಿತರರ ತಾರಾಬಳಗವಿದೆ ಎಂದು ಮಾಹಿತಿ ಹಂಚಿಕೊಂಡರು.
ಪ್ರತಿ ಸಿನಿಮಾನೂ ವಿಭಿನ್ನ
ಇದುವರೆಗಿನ ನನ್ನ ಚಿತ್ರಜೀವನದಲ್ಲಿ ಪ್ರತಿ ಸಿನಿಮಾನೂ ವಿಶಿಷ್ಠ ಮತ್ತು ವಿಭಿನ್ನ.ವಿಶಿಷ್ಠ ಅನುಭವ ತಂದುಕೊಟ್ಟಿದೆ. ಈ ಚಿತ್ರವೂ ಕೂಡ. ಧಾರಾವಾಹಿ ಇರಲಿ,ಸಿನಿಮಾ ಇರಲಿ ಯಾವುದೇ ಕೇಲಸ ಮಾಡಿದರೂ ಶೇಕಡಾ ನೂರರಷ್ಟು ಶ್ರದ್ಧೆಯಿಂದ ಮಾಡುತ್ತೇನೆ. -ಅನಿರುದ್ಧ್, ನಟ,