ನಟಿ ಶ್ವೇತಾಕುಮಾರಿ ಸೆರೆ

ಮುಂಬಯಿ,ಜ.೫-ಡ್ರಗ್ಸ್ ಜಾಲ ಪ್ರಕರಣದಲ್ಲಿ ಮಾದಕ ನಟಿಯರಾದ ರಾಗಿಣಿ ಹಾಗೂ ಸಂಜನಾ ಜೈಲು ಸೇರಿದ ಬೆನ್ನಲ್ಲೇ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಕನ್ನಡ ಚಲನಚಿತ್ರರಂಗದ ಮತ್ತೋಬ್ಬ ನಟಿ ಶ್ವೇತಾ ಕುಮಾರಿ ಅವರನ್ನು ಎನ್ ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ
ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಮಾದಕ ವಸ್ತು ಪೂರೈಕೆ ಮಾಡಿದ ಆರೋಪದಲ್ಲಿ ನಟಿ ಶ್ವೇತಾ ಕುಮಾರಿ(೨೭)ಯನ್ನು ಬಂಧಿಸಿರುವ ಎನ್ ಸಿಬಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ.
ಮುಂಬೈಯ ಮಿರಾ ರಸ್ತೆಯ ಹೋಟೆಲ್ ಒಂದರ ಮೇಲೆ ನಡೆದ ದಾಳಿಯ ವೇಳೆ ನಟಿ ಶ್ವೇತಾ ಕುಮಾರಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.
ನಟಿ ಕುಮಾರಿ ವಿರುದ್ಧ ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಎನ್ ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೇಡೆ ಮಾಹಿತಿ ನೀಡಿದ್ದಾರೆ.
ಎನ್‌ಸಿಬಿ ಅಧಿಕಾರಿಗಳು ಕಳೆದ ಜ. ೨ ರಂದು ಇಲ್ಲಿನ ಮೀರಾ-ಭಯಾಂದರ್ ಪ್ರದೇಶದಲ್ಲಿರುವ ಕ್ರೌನ್ ಬ್ಯುಸಿನೆಸ್ ಹೋಟೆಲ್ ಮೇಲೆ ದಾಳಿ ನಡೆಸಿ ೪೦೦ ಗ್ರಾಂ ಮೆಫೆಡ್ರೋನ್ (ಎಂಡಿ) ವಶಪಡಿಸಿಕೊಂಡಿದ್ದರು.
ಅಲ್ಲಿ ಶೋಧ ಕಾರ್ಯ ಕಾರ್ಯಚರಣೆ ವೇಳೆ ಹೈದರಾಬಾದ್ ನಿವಾಸಿಯಾಗಿರುವ ನಟಿ ಶ್ವೇತಾ ಕುಮಾರಿಯನ್ನು ಬಂಧಿಸಲಾಗಿತ್ತು.
ಪೆಡ್ಲರ್ ಗಳ ಜೊತೆಗೆ ಮುಖ್ಯ ಸರಬರಾಜುದಾರರನ್ನು ಬಂಧಿಸಲು ಎನ್ ಸಿಬಿ ವ್ಯವಸ್ಥಿತ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.
ಅಂತಾರಾಜ್ಯ ಡ್ರಗ್ ಪೂರೈಕೆದಾರರಿಂದ ವಶಪಡಿಸಿಕೊಳ್ಳುವ ಪ್ರಕರಣಗಳಲ್ಲಿ ಎನ್‌ಸಿಬಿ ಆರ್ಥಿಕ ತನಿಖೆಯತ್ತ ಗಮನ ಹರಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.