ನಟಿ ಶುಭಾ ಪೂಂಜಾ ಮದುವೆ ನಿಶ್ಚಿತ

ಬೆಂಗಳೂರು, ನ ೨೬- ಬಿಗ್ ಬಾಸ್ ವೇದಿಕೆಯಲ್ಲಿ ಕೈ ಹಿಡಿಯುವ ಗಂಡನ ಬಗ್ಗೆ ಗುಟ್ಟುಬಿಟ್ಟು ಕೊಟ್ಟಿದ್ದ ನಟಿ ಶುಭಾ ಪೂಂಜಾ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ.
ತಮ್ಮ ಗೆಳೆಯ ಸುಮಂತ್ ಮಹಾಬಲ ಜೊತೆ ನಟಿ ಶುಭಾ ಪೂಂಜಾ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅಂದಹಾಗೆ ಇವರಿಬ್ಬರು ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಕಳೆದ ವರ್ಷವೇ ಇವರ ಮದುವೆ ನಡೆಯಬೇಕಾಗಿತ್ತು. ಶುಭಾ ಬಿಗ್ ಬಾಸ್ ಸ್ಪರ್ಧೆಗೆ ಹೋಗಬೇಕಾಗಿದ್ದ ಹಿನ್ನೆಲೆಯಲ್ಲಿ ಮದುವೆಯನ್ನು ಮುಂದೂಡಲಾಗಿತ್ತು.
ಸುಮಂತ್ ಅವರು ಜಯಕರ್ನಾಟಕ ಬೆಂಗಳೂರು ಸೌತ್ ವಿಂಗ್ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಸುಮಾರು ೧೦೦ಕ್ಕೂ ಹೆಚ್ಚು ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದ ಶುಭಾ ಅಲ್ಲಿಂದ ಹೊರಗೆ ಬಂದ ಬಳಿಕ ತಮ್ಮ ಗೆಳೆಯನ ಜೊತೆ ಗೋವಾಕ್ಕೆ ತೆರಳಿದ್ದರು.
ಈ ಜೋಡಿಯ ಮದುವೆ ದಿನಾಂಕ ಫಿಕ್ಸ್ ಆಗಿದ್ದು, ಡಿಸೆಂಬರ್ ನಲ್ಲಿ ಮದುವೆ ನಡೆಸಲು ಬಾರಿ ತಯಾರಿ ನಡೆಸಲಾಗುತ್ತಿದೆ ಎನ್ನಲಾಗಿದೆ. ಶೀಘ್ರದಲ್ಲಿ ಮಾಹಿತಿ ಹಂಚಿಕೊಳ್ಳಲಿದ್ದಾರೆ. ನಟಿ ಶುಭಾ ಪೂಂಜಾ ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದು, ಕನ್ನಡದಲ್ಲಿ ಸುಮಾರು ೨೦ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಸಿದ್ದಾರೆ. ಶುಭಾ ಪೂಂಜಾ ‘ಜಾಕ್ ಪಾಟ್ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದರು.