ನಟಿ ರಾಖಿ ಸಾವಂತ್ ಬಂಧನ ಕೋರ್ಟ್ ಗೆ ಹಾಜರು

ಮುಂಬೈ(ಮಹಾರಾಷ್ಟ್ರ),ಜ.19- ನಟಿಯೊಬ್ಬರ ಆಕ್ಷೇಪಾರ್ಹ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ ಪ್ರಕರಣದ ಸಂಬಂಧಿಸಿದಂತೆ ಬಾಲಿವುಡ್​ ನಟಿ ರಾಖಿ ಸಾವಂತ್ ಅವರನ್ನು ನಗರ ಪೊಲೀಸರು ಬಂಧಿಸಿದ್ದಾರೆ.ಬಂಧಿತ ನಟಿಯನ್ನು ಇದೀಗ ಅಂಧೇರಿ ನ್ಯಾಯಾಲಯಕ್ಕೂ ಹಾಜರುಪಡಿಸಲಾಗಿದೆ.
ಆಕ್ಷೇಪಾರ್ಹ ಫೋಟೋ ಮತ್ತು ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡುವ ಮೂಲಕ ತಮ್ಮ ಮಾನಹಾನಿ ಕಾರಣರಾಗಿದ್ದಾರೆ ಎಂದು ಆರೋಪಿಸಿ ನಟಿ ಶೆರ್ಲಿನ್ ಚೋಪ್ರಾ ಇತ್ತೀಚೆಗೆ ರಾಖಿ ಸಾವಂತ್ ವಿರುದ್ಧ ಅಂಬೋಲಿ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು.ಇವರ ದೂರಿನಂತೆ ಪೊಲೀಸರು ರಾಖಿ ಸಾವಂತ್ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿಕೊಂಡಿದ್ದರು. ಸದ್ಯ ಮುಂಬೈ ಪೊಲೀಸರು ನಟಿ ರಾಖಿ ಸಾವಂತ್ ಅವರನ್ನು ಬಂಧಿಸಿದ್ದಾರೆ ಎಂದು ಶೆರ್ಲಿನ್ ಚೋಪ್ರಾ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ರಾಖಿ ಸಾವಂತ್ ತನ್ನ ಕೆಲವು ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ ಎಂದು ಆರೋಪಿಸಿ ರೂಪದರ್ಶಿ ಶೆರ್ಲಿನ್ ಚೋಪ್ರಾ ತಮ್ಮ ದೂರು ಪ್ರತಿಯಲ್ಲಿ ಉಲ್ಲೇಖ ಮಾಡಿದ್ದರು. ಅದರಂತೆ ಎಫ್‌ಐಆರ್ ಕೂಡ ದಾಖಲು ಮಾಡಿಕೊಳ್ಳಲಾಗಿತ್ತು. ಸದ್ಯ​ ಅಂಬೋಲಿ ಪೊಲೀಸರು ರಾಖಿ ಸಾವಂತ್ ಅವರನ್ನು ವಿಚಾರಣೆಗಾಗಿ ಅಂಧೇರಿ ನ್ಯಾಯಾಲಯಕ್ಕೂ ಹಾಜರುಪಡಿಸಲಿದ್ದಾರೆ ಎಂಬ ಮಾಹಿತಿ ಇದೆ. ವೈರಲ್​ ಫೋಟೋ ಘಟನೆಯು ಕಳೆದ ಒಂದು ವರ್ಷದ ಹಿಂದೆಯೇ ನಡೆದಿದ್ದು, ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.ಅಂಬೋಲಿ ಪೊಲೀಸರು ದಾಖಲಾದ ಎಫ್‌ಐಆರ್ 883/2022ಗೆ ಸಂಬಂಧಿಸಿದಂತೆ ನಟಿ ರಾಖಿ ಸಾವಂತ್ ಅವರನ್ನು ಬಂಧಿಸಿದ್ದಾರೆ. ನಿನ್ನೆ ರಾಖಿ ಸಾವಂತ್ ಅವರ ಎಬಿಎ 1870/2022 ಅನ್ನು ಮುಂಬೈ ಸೆಷನ್ ಕೋರ್ಟ್ ತಿರಸ್ಕರಿಸಿತ್ತು ಎಂದು ಶೆರ್ಲಿನ್ ಚೋಪ್ರಾ ಟ್ವೀಟ್ ಮಾಡಿದ್ದಾರೆ.ಪ್ರಕರಣ ಸಂಬಂಧ ನಟಿಯನ್ನು ಹೆಚ್ಚಿನ ತನಿಖೆಗಾಗಿ ಅಂಬೋಲಿ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಸದ್ಯ ನಟಿಯನ್ನು ಬಂಧನದಲ್ಲಿರಿಸಲಾಗಿದೆ ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಬಂದೋಪಂತ್ ಡಿ.ಬನ್ಸೋಡೆ ತಿಳಿಸಿದ್ದಾರೆ. ಆದರೆ, ರಾಖಿ ಸಾವಂತ್ ಅವರನ್ನು ಬಂಧಿಸಲಾಗಿದೆ ಎಂದು ಶೆರ್ಲಿನ್ ಚೋಪ್ರಾ ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾರೆ.ಈ ವಿದ್ಯಮಾನ ನಡೆಯುತ್ತಿದ್ದಂತೆ ರಾಖಿ ಸಾವಂತ್ ಸಹೋದರ ರಾಕೇಶ್ ಸಾವಂತ್ ಅವರು ಶೆರ್ಲಿನ್ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರೆ. ಬಂಧನದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ತನ್ನ ಸಹೋದರಿ ಯಾವುದೇ ದೊಡ್ಡ ಅಪರಾಧ ಮಾಡಿಲ್ಲ. ಹಾಗಾಗಿ ನಾನು ಅದರ ಬಗ್ಗೆ ಚಿಂತಿಸುವುದಿಲ್ಲ ಎಂದು ಹೇಳಿದ್ದಾರೆ.’ಪೊಲೀಸರು ಹೇಳಿದ ಸಮಯಕ್ಕೆ ಪೊಲೀಸ್ ಠಾಣೆಗೆ ಹೋಗಲು ಸಾಧ್ಯವಾಗದ ಕಾರಣ ರಾಖಿಯನ್ನು ಬಂಧಿಸಲಾಗಿದೆ. ಇದು ಶೆರ್ಲಿನ್ ಮತ್ತು ರಾಖಿ ನಡುವಿನ ವೈಯಕ್ತಿಕ ವಿಷಯವಾಗಿದೆ. ತಾಯಿಯ ಆರೋಗ್ಯ ತುಂಬಾ ಹದಗೆಟ್ಟಿದ್ದರಿಂದ ಪೊಲೀಸರು ಕರೆದಾಗ ರಾಖಿ ಹೋಗಲು ಸಾಧ್ಯವಾಗಲಿಲ್ಲ. ಬಹುಶಃ, ರಾಖಿಯನ್ನು ಕರೆದುಕೊಂಡ ಹೋದ ಪೊಲೀಸರು ವಿಚಾರಣೆ ನಡೆಸಿ ಬಿಡಬಹುದು. ವಕೀಲರೊಂದಿಗೆ ಈ ಬಗ್ಗೆ ಮಾತನಾಡುವೆ. ಆಕೆಯ ಪತಿ ಆದಿಲ್ ಖಾನ್ ಕೂಡ ನನ್ನ ಜೊತೆಗಿದ್ದಾರೆ ಎಂದು ರಾಕೇಶ್ ಹೇಳಿದ್ದಾರೆ. ಸಹೋದರಿ ರಾಖಿಯನ್ನು ‘ಜಾನ್ ಆಫ್ ಮಹಾರಾಷ್ಟ್ರ’ ಎಂದು ಕರೆದ ರಾಕೇಶ್ ಇದೇ ವೇಳೆ ಶೆರ್ಲಿನ್ ಚೋಪ್ರಾ​ಗೆ ಕೆಲವು ಪ್ರಶ್ನೆಗಳನ್ನು ಕೇಳಿದರು.ರಾಖಿ ಸಾವಂತ್ ಮತ್ತು ಆದಿಲ್ ಖಾನ್ ದುರಾನಿ ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ತಮ್ಮ ಮದುವೆ ಬಗ್ಗೆ ಬಹಿರಂಗಪಡಿಸಿದ್ದರು. ಮದುವೆಯ ನಂತರ ರಾಖಿ ಸಾವಂತ್ ತನ್ನ ಹೆಸರನ್ನು ಫಾತಿಮಾ ಎಂದು ಬದಲಾಯಿಸಿಕೊಂಡಿದ್ದರು. ಈಗ ತನ್ನನ್ನು ರಾಖಿ ಆದಿಲ್ ಖಾನ್ ಎಂದು ಗುರುತಿಸಿಕೊಂಡಿದ್ದಾರೆ. ಮದುವೆ ಸೇರಿದಂತೆ ಕಳೆದ ಕೆಲವು ದಿನಗಳಿಂದ, ನಟಿ ರಾಖಿ ಸಾವಂತ್ ತಮ್ಮ ವೈಯಕ್ತಿಕ ಜೀವನದ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ಸದ್ಯ ಬಂಧನದಿಂದ ರಾಖಿ ಸಾವಂತ್ ಮತ್ತೆ ಚರ್ಚೆಯ ಮುನ್ನಲೆಗೆ ಬಂದಿದ್ದಾರೆ.