ನಟಿ ಪೂನಂ ವಿರುದ್ಧ ಎಫ್‌ಐಅರ್

ಮುಂಬೈ,ಫೆ.೫-ಗರ್ಭಕಂಠ ಕ್ಯಾನ್ಸರ್ ಕುರಿತಂತೆ ಜಾಗೃತಿಗಾಗಿ ಸಾವನ್ನಪ್ಪಿದ ನಾಟಕವಾಡಿದ್ದ ಬಾಲಿವುಡ್ ನಟಿ ಪೂನಂ ಪಾಂಡೆ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ವಕೀಲ ಅಲಿ ಕಾಶಿಪ್ ಅವರು ನೀಡಿದ ದೂರಿನ ಆಧಾರದ ಮೇಲೆ ಪೂನಂ ಮತ್ತು ಆಕೆಯ ಮ್ಯಾನೇಜರ್ ವಿರುದ್ಧ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿದೆ.
ಈ ಪ್ರಕರಣದ ಕುರಿತಂತೆ ಪೂನಂ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದ್ದು, ಔಷಧಿ ಕಂಪನಿಗಳು ಈಕೆಗೆ ಹಣ ನೀಡಿ, ಈ ರೀತಿ ನಾಟಕವಾಡುವಂತೆ ಮಾಡಿವೆ ಎನ್ನುವ ಆರೋಪವಿತ್ತು. ಈ ಕುರಿತಂತೆ ಸ್ವತಃ ಪೂನಂ ಸ್ಪಷ್ಟನೆ ನೀಡಿದ್ದಾರೆ. ತಾವು ಸತ್ತಿರುವುದಾಗಿ ಹೇಳಿಕೊಂಡಿದ್ದರ ಹಿಂದೆ ನಿಜವಾದ ಕಾಳಜಿ ಇತ್ತು. ಯಾವುದೇ ಔಷಧಿ ಕಂಪನಿಗಳು ತಮಗೆ ಹಣ ನೀಡಿಲ್ಲ ಎಂದು ಸಾಮಾಜಿಕ ಜಾಲತಾಣ ಇನ್ಸ್ ಟ್ರಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ತನ್ನ ತಾಯಿ ಕೂಡ ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಕ್ಯಾನ್ಸರ್ ರೋಗಿಗಳು ಹೇಗೆ ನರಳುತ್ತಾರೆ ಎನ್ನುವುದನ್ನು ಸ್ವತಃ ನಾನು ನೋಡಿದ್ದೇನೆ. ಸದ್ಯ ತಾಯಿ ಆರೋಗ್ಯವಾಗಿದ್ದಾರೆ. ಅವರ ನೋವನ್ನು ನೋಡಿಯೇ ನಾನು ಗರ್ಭಕಂಠ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ನಿರ್ಧಾರ ಮಾಡಿದ್ದು. ನೀವು ಟೀಕೆಗಳನ್ನು ಮಾಡುತ್ತಿದ್ದೀರಿ. ಆದರೆ, ನಾನು ಮಾಡಿದ್ದರ ಹಿಂದಿನ ಪರಿಣಾಮವನ್ನೂ ನೀವು ಗಮನಿಸಬೇಕು ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಗರ್ಭಕಂಠ ಕ್ಯಾನ್ಸರ್ ಕುರಿತಾಗಿ ಜಾಗೃತಿ ಮೂಡಿಸುವುದಕ್ಕಾಗಿ ತಾನು ಸತ್ತಿರುವುದಾಗಿ ಮ್ಯಾನೇಜರ್ ಮೂಲಕ ಸುದ್ದಿ ಮಾಡಿಸಿದ್ದ ಬಾಲಿವುಡ್ ನಟಿ ಪೂನಂ ಪಾಂಡೆ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಆದರೆ, ಹೆಸರಾಂತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮಾತ್ರ ನಟಿಯ ಬೆಂಬಲಕ್ಕೆ ನಿಂತಿದ್ದಾರೆ. ಪೂನಂ ಮಾಡಿದ ಕೆಲಸ ಉತ್ತಮವಾದದ್ದು ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಗರ್ಭಕಂಠ ಕ್ಯಾನ್ಸರ್:
ನೀವು ಮಾಡಿದ ಕೆಲಸಕ್ಕೆ ಟೀಕೆಗಳು ಬರಬಹುದು. ಆದರೆ, ನೀವು ಮಾಡಿದ ಕೆಲಸ ಮೆಚ್ಚುವಂಥದ್ದು. ನಿಮ್ಮಿಂದಾಗಿ ಗರ್ಭಕಂಠ ಕ್ಯಾನ್ಸರ್ ಕುರಿತಂತೆ ವ್ಯಾಪಕವಾಗಿ ಪ್ರಚಾರ ಸಿಕ್ಕಿದೆ. ನಿಮ್ಮಂತೆಯೇ ನಿಮ್ಮ ಆತ್ಮ ಕೂಡ ಸುಂದರ. ನಿಮಗೆ ಮತ್ತಷ್ಟು ಆಯುಷ್ಯ ಹೆಚ್ಚಲಿ ಎಂದು ವರ್ಮಾ ಬರೆದುಕೊಂಡಿದ್ದಾರೆ.
ಗರ್ಭಕಂಠ ಕ್ಯಾನ್ಸರ್ ಕುರಿತಂತೆ ಜಾಗೃತಿ ಮೂಡಿಸುವುದಕ್ಕಾಗಿ ವಾಮಮಾರ್ಗ ಹಿಡಿದಿರುವ ಬಾಲಿವುಡ್ ನಟಿ, ವಿವಾದಾತ್ಮಕ ನಟಿ ಪೂನಂ ಪಾಂಡೆಯನ್ನು ಬಂಧಿಸಬೇಕು ಎಂದು ಅಭಿಮಾನಿಗಳು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ‘ಬಾಯ್ಕಾಟ್ ಪೂನಂ ಪಾಂಡೆ’ ಟ್ರೆಂಡ್ ಶುರು ಮಾಡಿದ್ದಾರೆ.
ಕ್ರಮಕ್ಕೆ ಶಾಸಕರ ಆಗ್ರಹ:
ಈ ಬೆನ್ನಲ್ಲೇ ಪೂನಂ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮಹಾರಾಷ್ಟ್ರ ಶಾಸಕ ಸತ್ಯಜೀತ್ ತಾಂಬೆ ಮುಂಬೈ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಈ ನಡುವೆ ಪೂನಂ ಪಾಂಡೆ ಅವರ ದಿನಚರಿಗಳನ್ನು ಮ್ಯಾನೇಜ್ ಮಾಡುವ ಏಜೆನ್ಸಿ ಈ ರೀತಿಯ ಪ್ಲ್ಯಾನ್ ರೂಪಿಸಿತ್ತು. ಈ ಏಜೆನ್ಸಿಯವರು ಕ್ಷಮೆ ಕೋರಿದ್ದಾರೆ. ಈ ಸಂಬಂಧ ಪ್ರಕಟಣೆ ಹೊರಡಿಸಲಾಗಿದೆ. ‘ಗರ್ಭಕಂಠ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ನಾವೇ ಈ ಕೆಲಸವನ್ನು ಮಾಡಿದ್ದು. ನಾವು ಈ ಬಗ್ಗೆ ಕ್ಷಮೆ ಕೇಳುತ್ತೇವೆ’ ಎಂದು ಏಜೆನ್ಸಿ ಅವರು ಬರೆದುಕೊಂಡಿದ್ದಾರೆ.
ಜಾಗೃತಿ ಉದ್ದೇಶ:
‘ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸೋದು ಮಾತ್ರ ನಮ್ಮ ಉದ್ದೇಶ ಆಗಿತ್ತು. ೨೦೨೨ರಲ್ಲಿ ಭಾರತದಲ್ಲಿ ೧,೨೩,೯೦೭ ಗರ್ಭಕಂಠ ಕ್ಯಾನ್ಸರ್ ಪ್ರಕರಣ ಬೆಳಕಿಗೆ ಬಂದಿದ್ದು, ಈ ಪೈಕಿ ೭೭,೩೪೮ ಸಾವುಗಳು ಉಂಟಾಗಿವೆ. ಗರ್ಭಕಂಠದ ಕ್ಯಾನ್ಸರ್ ಭಾರತದಲ್ಲಿ ಮಧ್ಯವಯಸ್ಕ ಮಹಿಳೆಯರನ್ನು ಬಾಧಿಸುವ ಎರಡನೇ ಅತಿ ಹೆಚ್ಚು ಮಾರಣಾಂತಿಕ ಕಾಯಿಲೆ ಆಗಿದೆ. ಮೊದಲ ಸ್ಥಾನದಲ್ಲಿ ಸ್ತನ ಕ್ಯಾನ್ಸರ್ ಇದೆ. ಪೂನಂ ಅವರ ತಾಯಿಯು ಕ್ಯಾನ್ಸರ್ ವಿರುದ್ಧ ಧೈರ್ಯದಿಂದ ಹೋರಾಡಿದ್ದರು’ ಎಂದು ಬರೆದುಕೊಳ್ಳಲಾಗಿದೆ.