ನಟರಾಜನ್‌ಗೆ ವಿಶೇಷ ಸಂದೇಶ ಕಳುಹಿಸಿದ ವಾರ್ನರ್

ಅಬುಧಾಬಿ, ನ ೧೦ – ಹದಿಮೂರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಗಮನಾರ್ಹ ಬೌಲಿಂಗ್ ಪ್ರದರ್ಶನ ತೋರಿದ್ದ ಟಿ. ನಟರಾಜನ್ ಅವರು ಆಸ್ಟ್ರೇಲಿಯಾ ಪ್ರವಾಸದ ಭಾರತ ಟಿ೨೦ ತಂಡಕ್ಕೆ ಆಯ್ಕೆಯಾಗಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಎಸ್‌ಆರ್‌ಎಚ್ ನಾಯಕ ಡೇವಿಡ್ ವಾರ್ನರ್ ನಟರಾಜನ್‌ಗೆ ಸಂದೇಶವೊಂದನ್ನು ರವಾನಿಸಿದ್ದಾರೆ.

ಕೋಲ್ಕತಾ ರೈಡರ್ಸ್ ತಂಡದ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರು ಭಾರತ ಟಿ೨೦ ತಂಡಕ್ಕೆ ಈ ಮೊದಲು ಆಯ್ಕೆಯಾಗಿದ್ದರು. ಆದರೆ, ಭುಜದ ಗಾಯಕ್ಕೆ ತುತ್ತಾದ ವರುಣ್ ಚಕ್ರವರ್ತಿ ಅವರ ಬದಲು ಇದೀಗ ಯಾರ್ಕರ್ ತಜ್ಞ ನಟರಾಜನ್ ಅವರಿಗೆ ಟೀಮ್ ಇಂಡಿಯಾ ಆಡುವ ಭಾಗ್ಯ ಒಲಿದು ಬಂದಿದೆ.

ಭಾರತ ತಂಡಕ್ಕೆ ನಟರಾಜನ್ ಆಯ್ಕೆಯಾದ ವಿಷಯ ತಿಳಿಯುತ್ತಿದ್ದಂತೆ ಡೇವಿಡ್ ವಾರ್ನರ್, “ಅಭಿನಂದನೆಗಳು .. ಆಸ್ಟ್ರೇಲಿಯಾದಲ್ಲಿ ಭೇಟಿಯಾಗೋಣ” ಎಂದು ಎಸ್‌ಆರ್‌ಎಚ್ ಸಹ ಆಟಗಾರನನ್ನು ಅಭಿನಂದಿಸುವ ವಿಡಿಯೋವನ್ನು ಸನ್‌ರೈಸರ್ಸ್ ಹೈದರಾಬಾದ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

ಪ್ರಸಕ್ತ ಋತುವಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ೧೬ ಪಂದ್ಯಗಳನ್ನು ಆಡಿದ ನಟರಾಜನ್ ೩೧.೫೦ ಸರಾಸರಿಯಲ್ಲಿ ೧೬ ವಿಕೆಟ್‌ಗಳನ್ನು ಮತ್ತು ೮.೦೨ ಎಕಾನಮಿಯನ್ನು ಪಡೆದಿದ್ದಾರೆ. ಡೆತ್ ಓವರ್‌ಗಳಲ್ಲಿ ಯಾರ್ಕರ್‌ಗಳೊಂದಿಗೆ ಬ್ಯಾಟ್ಸ್‌ಮನ್‌ಗಳನ್ನು ಕಾಡುತ್ತಿದ್ದ ನಟರಾಜನ್, ಆರ್‌ಸಿಬಿ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ ಅವರನ್ನು ಯಾರ್ಕರ್ ಮೂಲಕ ಕ್ಲೀನ್ ಬೌಲ್ಡ್ ಮಾಡಿದ ಕ್ಷಣವನ್ನುಅಭಿಮಾನಿಗಳು ಎಂದಿಗೂ ಮರೆಯುವುದಿಲ್ಲ.