ನಟನೆ ಮೇಲೆ ಪ್ರಿತಿಕಾಗೆ ಪ್ರೀತಿ..

ನಿರ್ದೇಶಕ ಗುರು ದೇಶಪಾಂಡೆ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ “ಪೆಂಟಗಾನ್” ಚಿತ್ರ ವಿವಿಧ ವಿಷಯಗಳಿಂದ ಕುತೂಹಲ ಹೆಚ್ಚಿಸುತ್ತಿದೆ. ಐದು ಕಥೆ, ಐವರು ನಿರ್ದೇಶಕರು ಇರುವ ಈ ಚಿತ್ರ ಮುಹೂರ್ತದಿಂದ ಒಂದಿಲ್ಲೊಂದು ವಿಷಯಕ್ಕೆ ಸುದ್ದಿಯಲ್ಲಿದೆ.

ಇದೀಗ ಚಿತ್ರತಂಡ ಮತ್ತೊಂದು ಸುದ್ದಿ ಬಹಿರಂಗಪಡಿಸಿದೆ. ಈ ಚಿತ್ರದ ಒಂದು ಕಥೆಯ ಮೂಲಕ ನಿರ್ದೇಶಕ ಗುರು ದೇಶಪಾಂಡೆ ಪತ್ನಿ ಪ್ರಿತಿಕಾ ದೇಶಪಾಂಡೆ, ಬಣ್ಣ ಹಚ್ಚಿದ್ದಾರೆ.

ಇದುವರೆಗೂ ತೆರೆಯ ಹಿಂದೆ ನಿಂತು ಪತಿ ನಿರ್ದೇಶನ ಮತ್ತು ನಿರ್ಮಾಣದಲ್ಲಿ ತೊಡಗಿದ್ದ ಪ್ರಿತಿಕಾ, ಇದೇ ಮೊದಲ ಬಾರಿಗೆ ನಟಿಯಾಗಿ ಬಣ್ಣ ಹಚ್ಚಿದ್ದಾರೆ. ಅವರ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಅದು ಖ್ಯಾತ ಖಳನಟ ರವಿಶಂಕರ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

ಎಂತಹುದೇ ಪಾತ್ರ ನೀಡಿದರೂ ಅದನ್ನು ನೀರು ಕುಡಿದಷ್ಟು ಸಲೀಸಾಗಿ ಮಾಡಿ ಬಿಡುವ ರವಿಶಂಕರ್ ಮುಂದೆ ನಟನೆ ಮಾಡುವುದು ಅಷ್ಟು ಸುಲಭವಿರಲಿಲ್ಲ. ಆದರೆ ಕಳೆದ ಹಲವು ವರ್ಷಗಳಿಂದ ಚಿತ್ರರಂಗ ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರಿಂದ ನಟನೆ ಕಷ್ಟವಾಗಲಿಲ್ಲ ಎಂದರು ಪ್ರಿತಿಕಾ.

ಐವರು ನಿರ್ದೇಶಕರು ಒಂದೊಂದು ಕಥೆಯನ್ನು ನಿರ್ದೇಶನ ಮಾಡಿದ್ದಾರೆ.ಅದರಲ್ಲಿ ಕಿರಣ್ ಕುಮಾರ್ ಆಕ್ಷನ್ ಕಟ್ ಹೇಳಿರುವ ಕಥೆಯಲ್ಲಿ  ಪಾರ್ವತಿ ಎನ್ನುವ ಪಾತ್ರ ನನ್ನದು. ಇನ್ನೊಬ್ಬರಿಗೆ ಸಹಾಯ ಮಾಡುವ ಪಾತ್ರ ಹೀಗಾಗಿ ಎಲ್ಲರು ಅಕ್ಕ ಎಂದು ಪ್ರೀತಿಯಿಂದ ಕರೆಯುತ್ತಾರೆ ಎಂದು ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.

ವಂಶಿ ಕೃಷ್ಣ ಮತ್ತು ಅನುಷಾ ರೈ ಕೂಡ ನಟಿಸುವ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದಾರೆ.ನನ್ನ ಭಾಗದ ಚಿತ್ರೀಕರಣವನ್ನು ಸಕಲೇಶಪುರ ಸುತ್ತ ಮುತ್ತ ಮಾಡಲಾಗಿದೆ. ಒಳ್ಳೆಯ ಪಾತ್ರ ಸಿಕ್ಕಿದೆ. ಕಥೆಯಲ್ಲಿ ಕುಳಿತಿದ್ದರಿಂದ ಆಗಲೇ ಒಳ್ಳೆಯ ಪಾತ್ರ ಅನ್ನಿಸಿತ್ತು.ಕೊನೆಗೆ ನಿರ್ದೇಶಕ ಕಿರಣ್ ನೀವೇ ಮಾಡಿ ಎಂದರು. ಮೊದಲಿನಿಂದ ನಟನೆ ಬಗ್ಗೆ ಆಸಕ್ತಿ ಇದ್ದುದರಿಂದ ಒಪ್ಪಿಕೊಂಡು ನಟಿಸಿದ್ದೇನೆ ಎಂದರು.

ನಮ್ಮದೇ ನಿರ್ಮಾಣದ ಚಿತ್ರ ಎಂದು ಖರ್ಚು ವೆಚ್ಚದಲ್ಲಿ ಎಲ್ಲಿಯೂ ರಾಜಿ ಮಾಡಿಕೊಂಡಿಲ್ಲ.ಕಥೆಗೆ ಎಷ್ಟು ಬೇಕೋ ಅಷ್ಟು ಖರ್ಚು ಮಾಡಿದ್ದೇವೆ.ಪಾತ್ರ ಚೆನ್ನಾಗಿ ಮೂಡಿ ಬಂದಿದೆ ಎನ್ನುವ ವಿವರಣೆ ಅವರದು

1 ಕಥೆ ಬಾಕಿ

“ಐದು ಕಥೆಗಳ ಪೈಕಿ ರಾಘು ಶಿವಮೊಗ್ಗ, ಆಕಾಶ್ ಶ್ರೀವತ್ಸ ,ಕಿರಣ್ ಕುಮಾರ್ ಮತ್ತು ಚಂದ್ರ ಮೋಹನ್ ಅವರ ನಿರ್ದೇಶನದ ಕಥೆಗಳ ಚಿತ್ರೀಕರಣ ಪೂರ್ಣಗೊಂಡಿದೆ. ಇನ್ನು ಗುರು ದೇಶಪಾಂಡೆ ನಿರ್ದೇಶನ ಮಾಡುವ ಕಥೆ ಬಾಕಿ ಇದೆ.ಅದನ್ನು ಸೆಪ್ಟಂಬರ್ ಅಥವಾ ಅಕ್ಟೋಬರ್‍ನಲ್ಲಿ ಚಿತ್ರೀಕರಣ ಮಾಡುವ ಸಾಧ್ಯತೆಗಳಿವೆ.”