ನಗೆ ಬೀರಿದ ಕೆಂಪು ಹೂವಿನ ಗುಲ್‍ಮೊಹರ

ಸಿರುಗುಪ್ಪ, ಜೂ.11: ಧರೆಯ ಮೇಲೆ ಕೆಂಡದಂತೆ ಕಂಡು ಬರುವ ಗು¯ಮೊಹರ್ ಮರಗಳು ಪಟ್ಟಣದ ಸೌಂದರ್ಯವನ್ನು ಇಮ್ಮಡಿಗೊಳಿಸಿ ನಗೆ ಬೀರುವ ಕೆಂಪು ಹೂವಿನ ಗುಲ್‍ಮೊಹರ್.
ನಗರದ ಶಾಲಾ ಮೈದಾನದಲ್ಲಿ, ವಿವಿಧ ಸರಕಾರಿ ಕಛೇರಿಗಳ ಆವರಣದಲ್ಲಿ, ರಸ್ತೆ ಬದಿಯಲ್ಲಿ ಸೇರಿದಂತೆ ವಿವಿಧೆಡೆಗಳಲ್ಲಿ ಕಂಡು ಬರುವ ಈ ಗುಲ್ಮೊಹರ್ ಮರಗಳು ಕೆಂಬಣ್ಣದ ಹೂ ಬಿಟ್ಟು ಜನರನ್ನು ಆಕರ್ಷಿಸುತ್ತಿವೆ.
ಸಾಮಾನ್ಯವಾಗಿ ಮೇ ಮತ್ತು ಜೂನ್ ತಿಂಗಳಲ್ಲಿ ಗೊಂಚಲು ಗೊಂಚಲಾಗಿ ಕೆಂಬಣ್ಣದಂತೆ ಕಂಡು ಬರುವ ಈ ಹೂಗಳು ನೋಡುಗರ ಮನ ತಣಿಸುತ್ತಿವೆ. ಮುಂಗಾರು ಆರಂಭಕ್ಕೂ ಮುನ್ನವೇ ಅರಳಿ ಮನಸೆಳೆಯುವ ಈ ಹೂಗಳು ಮುಂಗಾರು ಮಳೆ ಬರುವಿಕೆಗೆ ಸ್ವಾಗತ ಕೋರುವಂತೆ ಭಾಸವಾಗುತ್ತಿವೆ.
ಈ ಮರಗಳಲ್ಲಿ ಎಲೆಗಳಿಗಿಂತ ಹೂಗಳೇ ಇಡೀ ಮರವನ್ನು ಆವರಿಸಿರುತ್ತವೆ. ಕೆಂಪು ಬಣ್ಣದ ಹೂಗಳು ಇಡೀ ಮರವನ್ನು ತುಂಬಿಕೊಂಡಿರುತ್ತವೆ. ಎಲೆಗಳು ಅಲ್ಲಲ್ಲಿ ಕಂಡು ಬರುತ್ತವೆ. ಇನ್ನೇನು ಬೇಸಿಗೆ ಮುಗಿಯಿತು, ಮಳೆ ಬರುವ ಸಮಯ ಎನ್ನುವ ಸಮಯದಲ್ಲಿ ಈ ಹೂಗಳು ಇಡಿ ಗಿಡವನ್ನೆಲ್ಲಾ ಆವರಿಸಿ ಸೌಂದರ್ಯ ಹೆಚ್ಚಿಸಿಕೊಳ್ಳುತ್ತವೆ.
ಗುಲ್ಮೊಹರ್ ಮರದ ವೈಜ್ಞಾನಿಕ ಹೆಸರು ಡೆಲೋನಿಕ್ಸ್ ರೆಜಿಯಾ ರಾಫ್. ಡೆಲೋನಿಕ್ಸ್ ಎಂದರೆ ಸ್ಪಷ್ಟವಾದ ಇಕ್ಕಳ ಅಥವಾ ಉಗುರು ಹೊಂದಿದ ಎಂದರ್ಥ. ಇದು ಹೂವಿನ ಎಸಳಿನ ಆಕಾರ ಸೂಚಿಸುತ್ತದೆ. ಮಕ್ಕಳು ಇದನ್ನು ಬಳಸಿ ಕೋಳಿ ಪಂದ್ಯ ಎಂಬ ಆಟವಾಡುತ್ತಾರೆ. ಹಿಂದಿಯಲ್ಲಿ ಈ ಮರವನ್ನು ಗುಲ್ಮೊಹರ್ ಎಂದು ಕರೆಯುತ್ತಾರೆ. ಗುಲ್ ಎಂದರೆ ಗುಲಾಬಿ ಅಥವಾ ಹೂವು. ಮೋರ್ ಅಂದರೆ ನವಿಲು. ನವಿಲು ಗುಲಾಬಿ ಗುಲ್ಮೊಹರ್ ಎಂದಾಗಿದೆ. ಇದಕ್ಕೆ ಮೇ ಪ್ಲಾವರ್ ಎಂತಲೂ ಕರೆಯುತ್ತಾರೆ.
ಗ್ರಾಮೀಣ ಭಾಗದಲ್ಲಿ ಈ ಹೂವನ್ನು ವಿಶೇಷವಾಗಿ ಮಳೆ-ಬೆಳೆ ಚೆನ್ನಾಗಿ ಬರಲೆಂದು ಕಾರಹುಣ್ಮಿಮೆ, ಮಣ್ಣೆತ್ತಿನ ಅಮವಾಸ್ಯೆ ದಿನಂದು ವಿಶೇಷವಾಗಿ ಬಳಸುವುದು ಕಂಡುಬರುತ್ತದೆ, ಈ ಹೂವು ಅರಳುವಿಕೆಯ ಆಧಾರದ ಮೇಲೆ ರೈತರು ಬೆಳೆಯನ್ನು ಆಧಾರಿಸುವುದು ಸಂಪ್ರದಾಯ ಕಂಡು ಬರುತ್ತದೆ. ಈ ಸಂದರ್ಭದಲ್ಲಿ ವಿಶೇಷವಾಗಿ ಮಕ್ಕಳು ದೇವರುಗಳಿಗೆ ನೀರು ಹಾಕಿ ಈ ಗುಲ್ಮೊಹರ್ ಹೂಗಳನ್ನೇ ದೇವಿಗೆ ಅರ್ಪಿಸಿ ಬರುತ್ತಾರೆ. ಅಷ್ಟೇ ಅಲ್ಲ ಈ ಹೂಗಳನ್ನು ಕೊಡ, ಬಿದುರಿನ ಪುಟ್ಟುಯಲ್ಲಿ, ಈಚಲು ಮರದ ಪುಟ್ಟಿಯಲ್ಲಿ, ಚಿಕ್ಕ ಚಿಕ್ಕ ತಂಬಿಗೆಗಳಲ್ಲಿ ಹಾಕಿಕೊಂಡು ಮನೆಗೆ ಸುತ್ತಿ ಬರುವುದು ಈ ಭಾಗದಲ್ಲಿ ಕಂಡು ಬರುತ್ತದೆ.
ಅರಣ್ಯ ಇಲಾಖೆಯವರು ವಿಶೇವಾಗಿ ಗ್ರಾಮೀಣ ಭಾಗದ ರಸ್ತೆ, ನಗರ ಪ್ರದೇಶದ ಮುಖ್ಯ ರಸ್ತೆಗಳ ಎಡ ಬಲದಂಚಿನಲ್ಲಿ ಈ ಗುಲ್‍ಮೊಹರ್ ಗಿಡಗಳನ್ನು ಹೆಚ್ಚಾಗಿ ಬೆಳೆಸಿದ್ದಾರೆ. ಪ್ರಯಾಣಿಕರಿಗೆ ಈ ಹೂಗಳು ಕಣ್ಣಿಗೆ ತಂಪು ನೀಡುತ್ತವೆ. ಪ್ರಯಾಣಕ್ಕೆ ಆಹ್ಲಾದಕರ ವಾತಾವರಣ ಕಲ್ಪಿಸುತ್ತವೆ.