ನಗುವಿನಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿ

ವಿಜಯಪುರ, ಜು. ೧೫: ಬದಲಾದ ಕಾಲಘಟ್ಟದಲ್ಲಿ ಬದುಕಿನ ಶೈಲಿ ಬದಲಾಗಿದ್ದು ನಗುವ ಪ್ರಸಂಗಗಳೇ ಕಡಿಮೆ. ಹಾಸ್ಯ ಸನ್ನಿವೇಶಗಳನ್ನು ಅವಲಂಬಿಸಿ ನಗುವುದರಿಂದ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಕಾಯ್ದುಕೊಳ್ಳಬಹುದು ಎಂದು ಪ್ರಖ್ಯಾತ ಹಾಸ್ಯ ಕಲಾವಿದ ಮಿಮಿಕ್ರಿ ಗೋಪಾಲ್ ತಿಳಿಸಿದರು.
ಪಟ್ಟಣದ ರೋಟರಿ ಶಾಲಾ ಸಭಾಂಗಣದಲ್ಲಿ ರೋಟರಿ ವತಿಯಿಂದ ಹಮ್ಮಿಕೊಂಡಿದ್ದ ಹಾಸ್ಯ ರಸಸಂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಕಾರ್ಯದೊತ್ತಡದ ಮಧ್ಯೆ ಚಿಕ್ಕವಯಸ್ಸಿನಲ್ಲಿಯೇ ಮಧುಮೇಹ ರೋಗ, ರಕ್ತದೊತ್ತಡದಂತಹ ಕಾಯಿಲೆಗಳಿಗೆ ಯುವಪೀಳಿಗೆಯು ಬಲಿಯಾಗುತ್ತಿದೆ. ಅದರ ಹಿನ್ನೆಲೆಯಲ್ಲಿಯೇ ನಗುವಿನ ಮಹತ್ವವನ್ನು ಜನರು ಇತ್ತೇಚೆಗಷ್ಟೇ ಅರಿಯುತ್ತಿರುವುದರಿಂದ ಅಲ್ಲಲ್ಲಿ ಲಾಫಿಂಗ್ ಕ್ಲಾಸ್‌ಗಳು ತಲೆಯೆತ್ತುವಂತಿವೆ. ದಿನನಿತ್ಯವೂ ಒತ್ತಡದ ಕಾರ್ಯಗಳ ನಡುವೆಯೂ ನಗುವುದನ್ನು ರೂಢಿಸಿಕೊಳ್ಳಬೇಕು ಎಂದರು.
ರೋಟರಿ ಅಧ್ಯಕ್ಷ ಎಚ್.ಎಸ್.ರುದ್ರೇಶಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಗುವುದನ್ನು ಮನುಷ್ಯನಿಗೆ ಮಾತ್ರವೇ ವರವಾಗಿ ಸೃಷ್ಟಿಸಲಾಗಿದೆ. ಹಳಗನ್ನಡ ಸಾಹಿತ್ಯ ಕಾಲದಿಂದಲೂ ಹಾಸ್ಯದ ಸನ್ನಿವೇಶಗಳನ್ನು ಕವಿಗಳ ಪ್ರೌಢಿಮೆಗೆ ತಕ್ಕಂತೆ ಬಳಸಿರುವುದನ್ನು ಕಾಣಬಹುದು. ಶಾಸನಗಳಲ್ಲಿಯೂ ಹಾಸ್ಯಪ್ರಸಂಗಗಳು ಮಿಂಚಿವೆ. ನಿತ್ಯದ ಬದುಕಿನಲ್ಲಿಯೇ ಅನೇಕ ಹಾಸ್ಯಘಟನೆಗಳು ಜರುಗುತ್ತವೆ. ಆರೋಗ್ಯದ ಹವ್ಯಾಸಗಳಲ್ಲಿ ನಗು ಪ್ರಮುಖವಾದುದು. ಇತರರೊಡನೆ ನಗುವನ್ನು ಹಂಚಿಕೊಂಡು ಇತರರನ್ನೂ ಖುಷಿಯಾಗಿಡುವುದು ಒಂದು ಅದ್ಭುತವಾದ ಕಲೆ ಎಂದರು.
ರೋಟರಿ ಕಾರ್ಯದರ್ಶಿ ಎಸ್.ಮಹೇಶ್ ಮಾತನಾಡಿ, ನಗುವುದನ್ನು ಸೌಂದರ್ಯವಾಗಿಸಿಕೊಳ್ಳಬೇಕು. ಸುಖೀ ಕುಟುಂಬಗಳೆಲ್ಲವೂ ನಗುವಿನ ಮೇಲೆಯೇ ನಿಂತಿವೆ ಎಂದರು.
ರೋಟರಿ ಮಾಜಿ ಅಧ್ಯಕ್ಷ ಜಿ.ವೀರಭದ್ರಪ್ಪ, ಸಿ.ಬಸಪ್ಪ, ಪಿ.ಚಂದ್ರಪ್ಪ, ಬಿ.ಸಿ.ಸಿದ್ಧರಾಜು, ಎಸ್.ಬಸವರಾಜು, ಎನ್.ಪುಟ್ಟರಾಜು, ಅನುಸೂಯಮ್ಮಸಂಪತ್, ಮಲ್ಲಿಕಾರ್ಜುನಪ್ಪ, ನಿಯೋಜಿತ ಅಧ್ಯಕ್ಷೆ ಎ.ಎಂ.ಮಂಜುಳಾ, ಇನ್ನರ್‌ವೀಲ್ ಕ್ಲಬ್ ಮಾಜಿ ಅಧ್ಯಕ್ಷೆ ಪ್ರೀತಿ, ನಂದಿನಿ ವಿದ್ಯಾನಿಕೇತನ ಶಾಲೆಯ ಉಪಪ್ರಾಂಶುಪಾಲೆ ವಿಮಲಾಂಬ, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ರೋಟರಿ ಕುಟುಂಬಸ್ಥರು ಪಾಲ್ಗೊಂಡಿದ್ದರು.