
ವಿಜಯಪುರ ಆ.26: ಐತಿಹಾಸಿಕ ವಿಜಯಪುರ ನಗರದಲ್ಲಿ ಅರಣ್ಯೀಕರಣ ಜೊತೆಗೆ ಐತಿಹಾಸಿಕ ಸ್ಮಾರಕಗಳ ಕುರಿತು ಹೆಚ್ಚಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಕೋಟಿ ವೃಕ್ಷ ಅಭಿಯಾನದ ಅಂಗವಾಗಿ ವೃಕ್ಷೋಥಾನ್ ಹೆರಿಟೇಜ್ ರನ್-2023ಅನ್ನು ಬರುವ ಡಿಸೆಂಬರ್ ಮಾಹೆಯಲ್ಲಿ ಆಯೋಜಿಸುವ ಕುರಿತು ಚರ್ಚಿಸಲಾಯಿತು.
ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಪೂರ್ವಸಿದ್ಧತಾ ಸಭೆಯಲ್ಲಿ ಪರಿಸರ ರಕ್ಷಣೆ ಜೊತೆಗೆ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಹಾಗೂ ಮಹತ್ವ ಕುರಿತು ಪರಿಣಾಮಕಾರಿಯಾಗಿ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿತು ಚರ್ಚಿಸಲಾಯಿತು.
ವಿಜಯಪುರ ನಗರದ ಐತಿಹಾಸಿಕ ಸ್ಮಾರಕಗಳ ಮಹತ್ವ ಕುರಿತು ಜನರಲ್ಲಿ ಆಸಕ್ತಿ ಮೂಡಿಸಿ, ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಹೆರಿಟೇಜ್ ರನ್ ಆಯೋಜಿಸುವ ಕುರಿತು ಅಧಿಕಾರಿಗಳು ನಗರ ಸ್ವಚ್ಛತೆಗೆ ಆದ್ಯತೆ ನೀಡಬೇಕು. ವಿಜಯಪುರ ಐತಿಹಾಸಿಕ ಸ್ಮಾರಕಗಳಿಂದ ಕೂಡಿದ ನಗರವಾಗಿದೆ. ಸ್ಮಾರಕಗಳಿಗೆ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಸ್ಮಾರಕಗಳ ನಿರ್ವಹಣೆ, ಶೌಚಾಲಯ ನಿರ್ಮಾಣ, ಒತ್ತುವರಿಯಾಗಿದ್ದರೆ ತೆರವುಗೊಳಿಸುವ ಕಾರ್ಯಕೈಗೊಳ್ಳಬೇಕು. ಸ್ಮಾರಕಗಳ ಸ್ವಚ್ಛತೆಗೆ ಬಾಧಕವಾಗಿರುವ ಅತಿಕ್ರಮಣ ತೆರವಿಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಈ ಹಿಂದೆ ಯಶಸ್ವಿಯಾಗಿ ಕೋಟಿ ವೃಕ್ಷ ಅಭಿಯಾನ ಹಮ್ಮಿಕೊಂಡು ಈ ಸಂದರ್ಭದಲ್ಲಿ 1.50 ಕೋಟಿ ವೃಕ್ಷಗಳನ್ನು ಬೆಳೆಸಲಾಗಿದೆ. ಈ ಪೈಕಿ ಅರಣ್ಯ ಇಲಾಖೆ ಬಹುಪಾಲು ಇದೆ. ಜನರಲ್ಲಿ ಸಸಿ ಬೆಳೆಸುವ ಕುರಿತು ಅರಿವು ಮೂಡಿಸಬೇಕು. ವೃಕ್ಷ ಬೆಳೆಸುವ ಮತ್ತು ಸ್ಮಾರಕಗಳ ಸಂರಕ್ಷಣೆ ಮಹತ್ವ ಸಾರಬೇಕು. ಮಹಾನಗರ ಪಾಲಿಕೆ ಜಿಲ್ಲಾಡಳಿತದೊಂದಿಗೆ ಸಮನ್ವಯತೆ ಸಾಧಿಸಿಕೊಂಡು ಕಾರ್ಯನಿರ್ವಹಿಸಬೇಕು. ನಗರ ಸ್ಚಚ್ಛತೆ ಕುರಿತು ಖುದ್ದಾಗಿ ನಗರ ಪ್ರದಕ್ಷಿಣೆ ನಡೆಸಿ ಪರಿಶೀಲನೆ ನಡೆಸುವುದಾಗಿ ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ನಾಗಠಾಣ ಶಾಸಕ ವಿಠ್ಠಲ ಕಡಕದೋಂಡ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದ ಕುಮಾರ್, ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಕೋಟಿ ವೃಕ್ಷ ಆಭಿಯಾನದ ಸಂಚಾಲಕರಾದ ಡಾ. ಮುರುಗೇಶ ಪಟಟಣ ಶೆಟ್ಟಿ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.