ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ: ಪೂರ್ವಭಾವಿ ಸಿದ್ಧತಾ ಸಭೆ

ಬೀದರ ಏ.2: ರಾಜ್ಯ ಚುನಾವಣಾ ಆಯೋಗವು ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ವೇಳಾಪಟ್ಟಿಯಂತೆ ಸಾರ್ವತ್ರಿಕ ಚುನಾವಣೆ ನಡೆಸಲು ಆದೇಶಿಸಿದ ಹಿನ್ನೆಲೆಯಲ್ಲಿ ಚುನಾವಣೆ ಪ್ರಕ್ರಿಯೆಯನ್ನು ಪ್ರಾರಂಭಿಸುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಏಪ್ರಿಲ್ 1ರಂದು ಬೆಳಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಸಂವಾದ ಸಭಾಂಗಣದಲ್ಲಿ ಬೀದರ ನಗರಸಭೆ ಪೌರಾಯುಕ್ತರು ಸೇರಿದಂತೆ ಇನ್ನೀತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಅವಧಿ ಮುಕ್ತಾಯಗೊಂಡಿರುವ ಬೀದರ ನಗರಸಭೆಯ 35 ವಾರ್ಡಗಳಿಗೆ ಮತ್ತು ಹಳ್ಳಿಖೇಡ್ (ಬಿ)ನ 11 ನೇ ವಾರ್ಡವೊಂದಕ್ಕೆ ಉಪ ಚುನಾವಣೆಗೆ ಏಪ್ರೀಲ್ 8ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುವುದು. ಏಪ್ರಿಲ್ 15 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನ. ಏಪ್ರೀಲ್ 16ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಏಪ್ರಿಲ್ 19 ಕೊನೆಯ ದಿನ. ಏಪ್ರೀಲ್ 27ರಂದು ಮತದಾನ ನಡೆಯಲಿದೆ. ಮರು ಮತದಾನವಿದ್ದಲ್ಲಿ ಏಪ್ರಿಲ್ 29ರಂದು ಮತದಾನ ನಡೆಯಲಿದೆ. ಏಪ್ರಿಲ್ 30ರಂದು ಮತಗಳ ಎಣಿಕೆ ನಡೆಯಲಿದೆ. ಏಪ್ರಿಲ್ 30ರಂದು ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗಲಿದೆ ಎಂದು ತಿಳಿಸಿದರು.
ನೀತಿ ಸಂಹಿತೆ ಜಾರಿ: ಏಪ್ರಿಲ್ 8ರಿಂದ ಏಪ್ರಿಲ್ 30ರವರೆಗೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡು ಬಂದಲ್ಲಿ ಚುನಾವಣಾ ಆಯೋಗವು ದಿನಾಂಕ 06-07-2016ರಂದು ಹೊರಡಿಸಿದ ತಿದ್ದುಪಡಿ ಆದೇಶದಂತೆ ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದರು.
ವಾರ್ಡವಾರು ಅಂತಿಮ ಮೀಸಲಾತಿ: ರಾಜ್ಯದ ಬೇರೆ ಬೇರೆ ನಗರ ಸ್ಥಳೀಯ ಸಂಸ್ತೆಗಳ ಜೊತೆಗೆ ಬೀದರ ನಗರ ಸಭೆಗೂ ಸರ್ಕಾರವು ವಾರ್ಡವಾರು ಅಂತಿಮ ಮೀಸಲಾತಿಯನ್ನು ಮರುನಿಗದಿಪಡಿಸಿ ಅಧಿಸೂಚಿಸಲಾಗಿದೆ. ಚುನಾವಣೆ ನಡೆಯುವ ನಗರ ಸ್ಥಳಿಯ ಸಂಸ್ತೆಗಳ ಹೆಸರು, ವಾರ್ಡಿನ ಸಂಖ್ಯೆ ಮತ್ತು ಮೀಸಲಾತಿ ವಿವರಗಳನ್ನು ಸ್ಪಷ್ಟವಾಗಿ ನಮೂದಿಸಬೇಕು. ಅಧೀಸೂಚನೆಯನ್ನು ಸ್ಥಳೀಯ ಸಂಸ್ತೆಗಳ ಕಚೇರಿ ಮತ್ತು ಇನ್ನೀತರ ಮುಖ್ಯ ಸ್ಥಳಗಳಲ್ಲೂ ಪ್ರದರ್ಶಿಸಬೇಕು ಎಂದು ತಿಳಿಸಿದರು.
181 ಮತಗಟ್ಟೆಗಳು: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಯಾ ವಾರ್ಡಿನ ವ್ಯಾಪ್ತಿಯಲ್ಲಿ ಅಗತ್ಯವಿರುವಷ್ಟು ಮತಗಟ್ಟೆಗಳನ್ನು ಗುರುತಿಸಲಾಗಿದೆ. ಬೀದರ ನಗರಸಭೆ ಚುನಾವಣೆಯಲ್ಲಿ
173 ಮತಗಟ್ಟೆಗಳು ಮತ್ತು 8 ಹೆಚ್ಚುವರಿ ಮತಗಟ್ಟೆಗಳು ಸೇರಿ ಒಟ್ಟು 181 ಮತಗಟ್ಟೆಗಳು ಕಾರ್ಯ ನಿರ್ವಹಿಸಲಿವೆ. ಹಳ್ಲಿಖೇಡ ಬಿ ಉಪ ಚುನಾವಣೆಯಲ್ಲಿ 1 ಮತಗಟ್ಟೆ ಕಾರ್ಯನಿರ್ವಹಿಸಲಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.
ವಿಶೇಷ ಸೂಚನೆ ಪಾಲನೆಯಾಗಲಿ: ಹಾಲಿ ಚಾಲ್ತಿಯಲ್ಲಿರುವ ವಿಧಾನಸಭಾ ಮತದಾರರ ಪಟ್ಟಿಯನ್ನು ಅಳವಡಿಸಿಕೊಂಡು ತಯಾರಿಸಲಾಗುವ ಮತದಾರರ ಪಟ್ಟಿಯಂತೆ ಚುನಾವಣೆ ನಡೆಸಬೇಕು ಎಂದು ರಾಜ್ಯ ಚುನಾವಣಾ ಆಯೋಗವು ನೀಡಿರುವ ವಿಶೇಷ ಸೂಚನೆ ಪಾಲನೆಯಾಗಬೇಕು. ಒಂದು ವಾರ್ಡಿನ ಮತದಾರರು ಇನ್ನೊಂದು ವಾರ್ಡಿನ ಮತದಾರರ ಪಟ್ಟಿಗೆ ಸೇರ್ಪಡಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಮತಪತ್ರದಲ್ಲಿ ಭಾವಚಿತ್ರ: ನಗರಸಭೆ ವ್ಯಾಪ್ತಿಯಲ್ಲಿ ಬರುವ ವಿಧಾನಸಭಾ ಮತದಾರರ ಪಟ್ಟಿಯ ಮತದಾರರ ಸಂಖ್ಯೆಗೂ ವಾರ್ಡವಾರು ತಯಾರಿಸಲಾದ ಮತದಾರರ ಸಂಖ್ಯೆಗೂ ತಾಳೆಯಾಗಬೇಕು. 2018ರ ಜೂನ್ 1ರಂದು ರಾಜ್ಯ ಚುನಾವಣಾ ಆಯೋಗವು ಹೊರಡಿಸಿದ ಆದೇಶದಂತೆ ಮತ ಪತ್ರದಲ್ಲಿ ಎಲ್ಲಾ ಅಭ್ಯರ್ಥಿಗಳ ಹೆಸರಿನ ಮುಂದೆ ಅವರ ಇತ್ತೀಚಿನ ಭಾವಚಿತ್ರ ಮುದ್ರಿಸುವಂತೆ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.
ನೋಟಾಗು ಅವಕಾಶ: ಅರ್ಹ ಮತದಾರನು ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳ ಪೈಕಿ ಯಾವೊಬ್ಬ ಅಭ್ಯರ್ತಿಯ ಪರವಾಗಿ ತನ್ನ ಮತವನ್ನು ಚಲಾಯಿಸಲು ಇಚ್ಚಿಸದಿರುವ ಸಂದರ್ಭದಲ್ಲಿ ಆತನು ನೋಟಾ ( ಮೇಲಿನ ಯಾರೊಬ್ಬರಿಗೂ ಇಲ್ಲ) ಎಂದು ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಅಧಿಕಾರಿ ಸಿಬ್ಬಂದಿ ನೇಮಕ: ಸಭೆಯಲ್ಲಿ ನಗರಸಭೆ ರಿಟನಿರ್ಂಗ ಅಧಿಕಾರಿ ಮತ್ತು ಸಹಾಯಕ ರಿಟನಿರ್ಂಗ ಅಧಿಕಾರಿಗಳ ನೇಮಕ ಪ್ರಕ್ರಿಯೆ ಕುರಿತು ಮತ್ತು ಚುನಾವಣೆ ನಡೆಯುವ ವಾರ್ಡಗಳ ಮತಗಟ್ಟೆಗಳಿಗೆ ಅನುಸಾರ ಮತದಾನ ಸಿಬ್ಬಂದಿ ನೇಮಕ ಹಾಗೂ ತರಬೇತಿಗೆ ಅಗತ್ಯ ಕ್ರಮ ವಹಿಸುವ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಸಹಾಯಕ ಆಯುಕ್ತರಾದ ಗರೀಮಾ ಪನ್ವಾರ, ನಗರಸಭೆ ಪೌರಾಯುಕ್ತರಾದ ರವೀಂದ್ರನಾಥ್ ಅಂಗಡಿ, ತಹಸೀಲ್ದಾರ ಗಂಗಾದೇವಿ ಮತ್ತು ಇನ್ನೀತರರು ಇದ್ದರು.