ಸಂಜೆವಾಣಿ ನ್ಯೂಸ್
ಮೈಸೂರು: ಸೆ.30:- ಪ್ರತಿ ವರ್ಷ ನಗರದ ಸ್ವಚ್ಛತೆಯ ಜೀವನಾಡಿಗಳಾದ ಪೌರಕಾರ್ಮಿಕರ ಶ್ರಮಿಸುತ್ತಿದ್ದು, ದೇಶಕ್ಕೆ ಕಾಯಲು ಸೈನಿಕ – ನಗರ ಸೌಂದರ್ಯಕ್ಕೆ ಕಾಪಾಡಲು ಪೌರಕಾರ್ಮಿಕ ಮುಖ್ಯ ಎಂದು ಬೋಗಾದಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಾದ ಎಂ ಬಸವರಾಜು ಅವರು ತಿಳಿಸಿದ್ದರು.
ಇಂದು ಬೋಗಾದಿ ಪಟ್ಟಣ ಪಂಚಾಯಿತಿ ವತಿಯಿಂದ ಪೌರಕಾರ್ಮಿಕರ ದಿನಾಚರಣೆಯನ್ನು ಆಚರಿಸುತ್ತಿದ್ದು, ನಮ್ಮೆಲ್ಲರಿಗೂ ಹೆಮ್ಮೆ ಪಡುವಂತಹ ವಿಷಯವಾಗಿರುತ್ತದೆ. ದೇಶ ಎಷ್ಠೇ ಮುಂದುವರೆದಿದ್ದರೂ ಸ್ವಚ್ಛತೆ ಇಲ್ಲದೆ ಹೋದರೆ ನಗರದ ಸೌಂದರ್ಯಕ್ಕೆ ಕಪ್ಪುಚುಕ್ಕೆಯಾದಂತೆ. ನಗರದ ಸೌಂದರ್ಯ ಹಾಗೂ ಸ್ವಚ್ಛತೆಗೆ ಪೌರಕಾರ್ಮಿಕರು ಈ ಸಮಾಜದಲ್ಲಿ ಬಹು ಮುಖ್ಯ ಪಾತ್ರ ನಿರ್ವಹಿಸುತ್ತಾರೆ. ಈ ಆಧುನಿಕಯುಗದಲ್ಲಿ ಪೌರಕಾರ್ಮಿಕರು ಸಮಾಜದ ಬೆನ್ನೆಲುಬಾಗಿದ್ದು ಅವರ ಹಿತವನ್ನು ಹಾಗೂ ಸಮಾಜದಲ್ಲಿ ನ್ಯಾಯಯುತವಾದ ಸ್ಥಾನಮಾನ ನೀಡಬೇಕಾಗಿರುತ್ತದೆ.
ನಾವೆಲ್ಲರೂ ಪೌರ ಕಾರ್ಮಿಕರಿಗೆ ಚಿರಋಣಿಯಾಗಿರೋಣ. ಮಹಾಮಾರಿಯಾದಂತಹ ಕೊರೋನಾ ಬಂದ ಸಂದರ್ಭದಲ್ಲಿ ಪೌರಕಾರ್ಮಿಕರು ತಮ್ಮ ಜೀವದ ಹಂಗನ್ನು ತೊರೆದು ಸಲ್ಲಿಸಿದ ಸೇವೆ ಅವಿಸ್ಮರಣೀಯವಾಗಿದ್ದು ಇವರು ಸ್ವಾಸ್ಥ್ಯ ಸಮಾಜದ ಆಧಾರ ಸ್ಥಂಬವಾಗಿರುತ್ತಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಿ.ಎನ್.ಗಿರೀಶ್ ಆಡಳಿತಾಧಿಕಾರಿಗಳು ಹಾಗೂ ತಹಶೀಲ್ದಾರ್ ರವರು ಮಾತನಾಡಿ ಈ ಆಧುನಿಕ ಭಾರತದಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕೂಡ ಗೌರವವು ಎಲ್ಲರಿಂದಲೂ ಸಿಗುವಂತಾಗಬೇಕು. ಹಾಗಾದಾಗ ಮಾತ್ರವೇ ಮಹಾತ್ಮ ಗಾಂಧಿಜಿಯವರ, ಡಾ|| ಬಿ.ಆರ್.ಅಂಬೇಡ್ಕರ್‍ರವರ ಕನಸು ನನಸು ಆಗುವ ದಾರಿಯಲ್ಲಿ ಮೊದಲ ಹೆಜ್ಜೆ ಇಟ್ಟಂತಾಗುತ್ತದೆ. ಹಾಗೂ ತಾವು ಪ್ರತಿನಿತ್ಯ ನಿರ್ವಹಿಸುವಂತಹ ಕೆಲಸ ಕಾರ್ಯಗಳನ್ನು ಸುರಕ್ಷತಾ ದಿರಿಸುಗಳನ್ನು ಧರಿಸಿ ತಮ್ಮ ವೈಯಕ್ತಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ತ್ಯಾಗ, ಸೇವೆ, ಸಮರ್ಪಣೆ ಕಾರುಣ್ಯದಿಂದ ಸದಾ ಜೀವತೆಯುತ್ತಿರುವ ಪೌರಕಾರ್ಮಿಕರನ್ನು ಈ ಸಮಾಜ ಪ್ರತಿಕ್ಷಣ ತಾಯ್ತನದಿಂದ ಕಾಣುವುದೇ ನಾವು ಪೌರಕಾರ್ಮಿಕರಿಗೆ ಸಲ್ಲಿಸಬಹುದಾದ ದೊಡ್ಡಕೃತಜ್ಞತೆಯಾಗಿರುತ್ತದೆ. ಎಲ್ಲಾ ಪೌರಕಾರ್ಮಿಕರು ವೈಯಕ್ತಿಕ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಲು ಕಿವಿಮಾತು ಹೇಳಿದರು.
ಸಫಾಯಿ ಕರ್ಮಚಾರಿ ಆಯೋಗದ ಮೇಲ್ವಿಚಾರಣ ಸಮಿತಿ ಸದ್ಯಸರಾದ ಡಿ.ಆರ್.ರಾಜು ಅವರು ಮಾತನಾಡಿ ಪೌರಕಾರ್ಮಿಕರು ಸರ್ಕಾರದ ವತಿಯಿಂದ ಲಭಿಸುವಂತಹ ಪೌರಕಾರ್ಮಿಕರ ಗೃಹಭಾಗ್ಯ ಯೋಜನೆ, ಶೇ.24.10ರ ಯೋಜನೆಯ ವಿದ್ಯಾಭ್ಯಾಸಕ್ಕಾಗಿ, ಆರೋಗ್ಯಕ್ಕಾಗಿ, ಹಾಗೂ ಇತರೆ ಸೌಲಭ್ಯಗಳಿಗೆ ಸಹಾಯಧನವನ್ನು ನೀಡುತ್ತಿದ್ದು ಇದನ್ನು ಕಡ್ಡಾಯವಾಗಿ ಪಡೆದು ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಂದಾಯ ನಿರೀಕ್ಷಕರಾದ ಡಿ.ಎನ್.ವಿಜಯ್‍ಕುಮಾರ್, ಸಹಾಯಕ ಅಭಿಯಂತರರಾದ ಹರ್ಷ, ಕಿರಿಯ ಆರೋಗ್ಯ ನಿರೀಕ್ಷಕರಾದ ಪುನೀತ್‍ಕುಮಾರ್, ಸಿಬ್ಬದಿಗಳಾದ ಕಾಮರಾಜು,ಪ್ರಕಾಶ್,ರೋಹಿತ್, ಅನಿಕುಮಾರ್, ಅರುಣ್‍ಕುಮಾರ್, ಕುಮಾರ,ವಿದ್ಯಾ,ಹರಿಣಿ, ಸೀಮಾ, ಹಾಗೂ ಪೌರಕಾರ್ಮಿಕರು ಹಾಜರಾಗಿದ್ದರು.