ನಗರ ಶಾಸಕರಿಂದ ಚುನಾವಣಾ ಪ್ರಚಾರ ಮಗನ ಮೇಲಿನ ಮಮತೆ ಮಹಡಿ ಮೆಟ್ಟಿಲೇರಿಸಿತು

ಬಳ್ಳಾರಿ ಏ 18 : ತಮ್ಮ ಚುನಾವಣಾ ಪ್ರಚಾರದಲ್ಲೂ ಇಷ್ಟೊಂದು “ರಿಸ್ಕ್” ತೆಗೆದುಕೊಂಡಿರಲಿಲ್ಲ ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಅವರು, ತಮ್ಮ ಪ್ರೀತಿಯ ಮಗ ಶ್ರವಣಕುಮಾರ್ ಸಧ್ಯ ನಡೆಯುತ್ತಿರುವ ಪಾಲಿಕೆ ಚುನಾವಣೆಯಲ್ಲಿ 18 ವಾರ್ಡಿನಿಂದ ಬಿಜೆಪಿ ಅಭ್ಯರ್ಥಿಯಾಗಿದ್ದು ಆತನ ಗೆಲುವಿಗಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಶಾಸಕರು, ಮಗನ ಮೇಲಿನ ಮಮತೆಯಿಂದ ಮೆಟ್ಟಿಲುಗಳನ್ನು ಏರಿ ಬಹುಮಹಡಿ ಕಟ್ಟಡದಲ್ಲಿನ ಮತದಾದರಲ್ಲಿ ಮತಯಾಚಿಸಿದ್ದು ಇಂದು ಬೆಳಿಗ್ಗೆ ಸಣ್ಣ ದುರ್ಗಮ್ಮ ದೇವಸ್ಥಾನದ ಬಳಿ ಕಂಡು ಬಂತು.
ಈ ಸಂದರ್ಭದಲ್ಲಿ ತಮ್ಮನ್ನು ಭೇಟಿ ಮಾಡಿದ ಸಂಜೆವಾಣಿಯೊಂದಿಗೆ ಮಾತನಾಡಿದ ಶಾಸಕರು, ಎಂಬಿಎ ವಿದ್ಯಾಭ್ಯಾಸ ಮಾಡಿರುವ ನೀನು ಉದ್ಯಮಿಯಾಗು ಎಂದರೆ ಕೇಳದೆ ಮಗ, ನಾನು ನಿನ್ನಂತೆ ಜನ ಸೇವಕನಾಗುತ್ತೇನೆಂದು ಪಟ್ಟು ಹಿಡಿದು ಪಾಲಿಕೆಯ ಚುನಾವಣೆಯ ಕಣಕ್ಕೆ ಧುಮಿಕಿದ್ದಾನೆ. ಆತನ ಗೆಲುವಿನ ಹೊಣೆ ನನ್ನದಷ್ಟೇ ಅಲ್ಲದೆ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಮುಖಂಡರದ್ದಾಗಿದೆಂದರು.
ಬೆಳಿಗ್ಗೆ 7 ಗಂಟೆಯಿಂದಲೇ ಮಂಗಳವಾದ್ಯ, ಕುಂಕುಮ, ಹೂಗಳನ್ನು ಹಿಡಿದ ಮಹಿಳಾಮಣಿಯರ ತಂಡದೊಂದಿಗೆ ಮನೆ, ಮನೆಗೆ ಭೇಟಿ ನೀಡಿ ಮತಯಾಚಿಸಿದರು. ಚುನಾವಣೆಗೆ ಮಗ ನಿಂತಿದ್ದರೂ, ಅದು ನಾನೇ ಎಂದು ಭಾವಿಸಿ ವಾರ್ಡಿನ ಅಭಿವೃದ್ದಿಗಾಗಿ ಶ್ರವಣಕುಮಾರ್‍ಗೆ ಮತ ನೀಡಿ ಎಂದು ಕೋರಿದರು.
ಓಣಿ ಓಣಿ ಓಡಾಡಿದರೂ, ಧಣಿವರಿಯದೆ ಮಗನ ಮೇಲಿನ ಮಮಕಾರದಿಂದ ತಮ್ಮ ಬೆಂಬಲಿಗರೊಂದಿಗೆ ಮಹಡಿಗಳ ಮೆಟ್ಟಲೇರಿ, ಇಳಿದು ಮತಯಾಚನೆ ಮಾಡುತ್ತ ಮುನ್ನುಗ್ಗುತ್ತಿದ್ದರು. ಹಿಂಬಾಲಕರು ಸಹ ಅವರ ಜೊತೆ ನಡೆಯಲು ಹರಸಾಹಸ ಮಾಡುತ್ತಿರುವುದು ಕಂಡು ಬಂತು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳಾದ ಎರ್ರಂಗಳಿ ತಿಮ್ಮಾರೆಡ್ಡಿ, ಮಾಜಿ ಮೇಯರ್, ಕೆ.ಬಸವರಾಜ್, ಮಾಜಿ ಉಪ ಮೇಯರ್ ಕೆ.ಶಿಶಿಕಲಾ, ಮಹಿಳಾ ಮೋರ್ಚಾದ ನಗರ ಘಟಕದ ಅಧ್ಯಕ್ಷೆ ಜ್ಯೋತಿ ಪ್ರಕಾಶ್, ಕೃಷ್ಣಾರೆಡ್ಡಿ ವಾರ್ಡಿನ ಮುಖಂಢರು ಸೇರಿದಂತೆ ಸೇರಿಂದತೆ ಅನೇಕರು ಇದ್ದರು.