ನಗರ ಶಾಸಕರಿಂದಭ್ರಷ್ಟಾಚಾರ ಮುಕ್ತ ಆಡಳಿತ: ಹೆಗಡೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಆ.31:  ನಗರ ಶಾಸಕ ನಾರಾ ಭರತ್ ರೆಡ್ಡಿ ಚುನಾವಣೆಗೂ ಮುನ್ನ ನೀಡಿದ ವಾಗ್ದಾನದಂತೆ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವಲ್ಲಿ ಯಶ ಕಂಡಿದ್ದಾರೆಂದು ಕೆಪಿಸಿಸಿ ರಾಜ್ಯ ಮಾಧ್ಯಮ ವಕ್ತಾರ ವೆಂಕಟೇಶ್ ಹೆಗಡೆ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಸರ್ಕಾರಿ ಜಾಗಗಳನ್ನು ರಕ್ಷಣೆ ಮಾಡುವುದರ ಜೊತೆಗೆ ಸಾರ್ವಜನಿಕರಿಗೆ ಬೇಕಾದ ಎಲ್ಲಾ ಸವಲತ್ತು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ರಾಜಕಾಲುವೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡಿದ್ದು.
ವಾರ್ಡ್ ನಂ.3ರಿಂದ 10ರವರೆಗೆ ಇರುವ ರಾಜ ಕಾಲುವೆ ಸದಾ ತುಂಬಿ ಹರಿಯುತ್ತಿತ್ತು. ಪ್ಲಾಸ್ಟಿಕ್ ತ್ಯಾಜ್ಯ ಸೇರಿದಂತೆ ಕಸ ಕಡ್ಡಿಯೊಂದಿಗೆ ಸದಾ ಹೂಳು ತುಂಬಿರುತ್ತಿದ್ದವು. ಇದರಿಂದ ರಾಜಕಾಲುವೆ ಕಟ್ಟಿ ಗಬ್ಬು ನಾರುತ್ತಿದ್ದವು. ಇದೀಗ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಂಡಿದ್ದಾರೆ.
ಇದೀಗ ಶಾಸಕರು, ತಜ್ಞ ಇಂಜಿನಿಯರ್‌ಗಳ ಸಭೆ ನಡೆಸಿ, ಈ ರೀತಿ ಪದೇ ಪದೇ ಚರಂಡಿ ತುಂಬದ ಹಾಗೆ ಮಾಡುವುದು ಹೇಗೆ ಎಂಬುದರ ಚರ್ಚೆ ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ.
ರಾಜಕಾಲುವೆಯ ಪ್ರಮುಖ ಪ್ರದೇಶಗಳಲ್ಲಿ ಕಬ್ಬಿಣದ ಗ್ರಿಲ್ ಇರುವ ಜಾಲರಿ ಅಳವಡಿಸಲಾಗಿದೆ. ಹೀಗಾಗಿ ಕಸ ಕಟ್ಟಿ ಇಲ್ಲಿಯೇ ಬಂದು ಸಿಕ್ಕಿ ಹಾಕಿಕೊಳ್ಳುತ್ತದೆ. ಪಾಲಿಕೆ ಪೌರ ಕಾರ್ಮಿಕರು ಇದನ್ನು ಪ್ರತಿದಿನ ತೆಗೆದುಕೊಂಡು ಹೋಗಿ ವಿಲೇವಾರಿ ಮಾಡುತ್ತಿದ್ದಾರೆ. ಇದರಿಂದ ರಾಜಕಾಲುವೆ ಸಮಸ್ಯೆಗೆ ಸಂಪೂರ್ಣ ಪರಿಹಾರ ಸಿಕ್ಕಂತೆ ಆಗಿದೆ.
ಇನ್ನು ವರಬಸಪ್ಪನ ಗುಡಿ ಬಳಿ, ಪ್ರಭಾವಿಗಳು ಪಾಲಿಕೆಗೆ ಸೇರಿದ್ದ ಜಮೀನನ್ನು ತಮ್ಮ ಸುಪರ್ದಿಗೆ ಪಡೆದುಕೊಳ್ಳಲು ಬೇಲಿ ಹಾಕಿಕೊಂಡಿದ್ದರು. ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಪಾಲಿಕೆಗೆ ಸೇರಬೇಕಾದ ಆಸ್ತಿಯನ್ನು ಮತ್ತೆ ಸರ್ಕಾರದ ಸುಪರ್ದಿಗೆ ಪಡೆಯಲು ಶಾಸಕರು ದಿಟ್ಟತನ ತೋರಿದ್ದಾರೆ.
ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ ಆಜ್ಞೆ ನೀಡುವ ರೀತಿಯಲ್ಲಿ ಬಳ್ಳಾರಿ ಶಾಸಕ, ಸಚಿವರಿಗೆ ನೀಡಿದ್ದ ವಾರ್ನಿಂಗ್‌ಗೆ ಸರಿಯಾಗಿ ಪ್ರತ್ಯುತ್ತರ ನೀಡಿರುವ ಭರತ್ ರೆಡ್ಡಿ ಕಾಂಗ್ರೆಸ್ ತನ್ನದೇ ಆದ ಯೋಜನೆಗಳನ್ನು ಹೊಂದಿದೆ. ಬಳ್ಳಾರಿ ಜನರು ತಮ್ಮನ್ನು ನಂಬಿದ್ದು, ಅವರ ನಂಬಿಕೆಗೆ ತಕ್ಕಂತೆ ನಾವು ನಡೆದುಕೊಳ್ಳುತ್ತೇವೆ ಎಂದು ಟಾಂಗ್ ನೀಡಿರುವುದು ನಿಜಕ್ಕೂ ಅವರಿಗೆ ಜನರ ಬಗ್ಗೆ ಇರುವ ಕಾಳಜಿಯನ್ನು ತೋರಿಸುತ್ತದೆ ಎಂದಿದ್ದಾರೆ.