ನಗರ ಶಾಸಕರಲ್ಲಿದೆ ವಿಜಯಪುರ ಸ್ಮಾರ್ಟ್ ಸಿಟಿ ಆಗಿಸುವ ತಾಕತ್ತು

ವಿಜಯಪುರ: ಜ.11:ಬರೀ ಅಭಿವೃದ್ಧಿಗೆ ಸೀಮಿತವಾಗದೆ, ಕೊರೊನಾ ಸಂಕಷ್ಟದಲ್ಲಿ ಜನರ ಸುರಕ್ಷತೆ ದೃಷ್ಟಿಯಿಂದ ಸಿದ್ದೇಶ್ವರ ಸಂಸ್ಥೆ, ಸಿದ್ದಸಿರಿ ಸೌಹಾರ್ದ ಸಹಕಾರಿ ವತಿಯಿಂದ ಶೇ 100 ರಷ್ಟು ಲಸಿಕೆ ಹಾಕಿಸುವ ಮಹತ್ತರ ಕಾರ್ಯ ಮಾಡಿದ್ದರಿಂದ, ಲಸಿಕಾಕರಣದಲ್ಲಿ ರಾಜ್ಯದಲ್ಲೇ ವಿಜಯಪುರ ನಂಬರ್ ಒನ್ ಆಗಲು ಸಾಧ್ಯವಾಯಿತು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹೇಳಿದರು.
ಮಹಾನಗರ ಪಾಲಿಕೆ ವಾರ್ಡ್ ನಂ.13ರಲ್ಲಿನ ಭವಾನಿ ನಗರ, ಸಮೀರ್ ಕಾಲೊನಿ, ಸರಸ್ವತಿ ನಗರದಲ್ಲಿ ಒಳಚರಂಡಿ ಹಾಗೂ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಸುಳ್ಳು ಹೇಳಿ ಒಂದು ಬಾರಿ ಮೋಸ ಮಾಡಬಹುದು. ಮುಂದುವರೆದರೆ ಜನ ಕಲ್ಲು ಹೊಡೆದು ಓಡಿಸುತ್ತಾರೆ. ವಿಜಯಪುರ ಹುಟ್ಟಿದ ಬಳಿಕ ಇತಿಹಾಸದಲ್ಲೇ ನಾಲ್ಕೂವರೆ ವರ್ಷಗಳಲ್ಲಿ ಆಗಿರುವಷ್ಟು ಅಭಿವೃದ್ಧಿ ಆಗಿಲ್ಲ. ಅದಕ್ಕೆ ನಮ್ಮ ಅಭಿವೃದ್ಧಿ ಮೆಚ್ಚಿ ಜನ ಹೋದಲೆಲ್ಲ ಹೂವು ತೂರಿ ಸ್ವಾಗತಿಸುತ್ತಿದ್ದಾರೆ ಎಂದರು.
ಪಾಲಿಕೆ ಸದಸ್ಯ ರಾಜೇಶ ದೇವಗಿರಿ ಮಾತನಾಡಿ, ಶಾಸಕ ಬಸನಗೌಡರು ನಗರದಲ್ಲಿ ಪತ್ರಾಸ ಮುಕ್ತ ಮನೆ ಮಾಡುವ ಗುರಿಯೊಂದಿಗೆ 10 ಸಾವಿರಕ್ಕೂ ಹೆಚ್ಚು ಮನೆ ನಿರ್ಮಿಸಿಕೊಟ್ಟಿದ್ದಾರೆ. ಸಾವಿರಾರು ಕೋಟಿ ಅನುದಾನ ತರುವ ಮೂಲಕ ಮಾದರಿ ನಗರವಾಗಿ ಅಭಿವೃದ್ಧಿ ಮಾಡಿದ್ದಾರೆ. ನಗರಕ್ಕೆ ಸೀಮಿತವಾಗದೆ, ಇಡೀ ನಾಡಿನ ಧ್ವನಿಯಾಗಿದ್ದಾರೆ ಎಂದು ಹೇಳಿದರು.
ಮುಖಂಡ ಬಾಬುರಾವ ತರ್ಸೆ ಮಾತನಾಡಿ, ಅನಾಥ ಲೆಔಟ್ ಆಗಿದ್ದ ಭವಾನಿ ನಗರವನ್ನು ಅಭಿವೃದ್ಧಿ ಗೊಳಿಸಲು ಮುಂದಾಗಿರುವ ಶಾಸಕರಾದ ಬಸನಗೌಡ ಯತ್ನಾಳರ ಕಾರ್ಯ ಶ್ಲಾಘನೀಯ. ವಿಜಯಪುರ ಸ್ಮಾರ್ಟ್ ಸಿಟಿ ಮಾಡುವ ತಾಕತ್ತು ಯತ್ನಾಳ ಗೌಡರಿಗೆ ಮಾತ್ರವಿದೆ ಎಂದರು.
ಇದೇ ವೇಳೆ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸಲು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿದರು.
ಮಹಾನಗರ ಪಾಲಿಕೆ ಸದಸ್ಯರಾದ ಸ್ವಪ್ನಾ ಕಣಮುಚನಾಳ ಮಾತನಾಡಿದರು. ರಾಜಶೇಖರ ಕುರಿ, ಎಂಜಿನಿಯರ್ ಶರಣಪ್ಪ ಮತ್ತಿತರರು ಇದ್ದರು.