ನಗರ ವಿಧಾನಸಭಾ ಕ್ಷೇತ್ರ : ಕಾಂಗ್ರೆಸ್ ಟಿಕೆಟ್‌ಗೆ ಬೋಸರಾಜು, ರವಿ ಅರ್ಜಿ

ರಾಯಚೂರು.ನ.೧೬- ರಾಯಚೂರು ನಗರ ವಿಧಾನಸಭಾ ಕ್ಷೇತ್ರದಿಂದ ೨೦೨೩ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೋರಿ ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜು ಮತ್ತು ಅವರ ಪುತ್ರ ರವಿ ಬೋಸರಾಜು ಅವರು ಅರ್ಜಿ ಸಲ್ಲಿಸಿದ್ದಾರೆ.
ನಿನ್ನೆ ಸಂಜೆ ಉಭಯರು ಟಿಕೆಟ್ ಕೋರಿ ಅರ್ಜಿ ಸಲ್ಲಿಸಿರುವುದು ಮುಂಬರುವ ಚುನಾವಣೆಯಲ್ಲಿ ಬೋಸರಾಜು ಅವರು ಈ ಕ್ಷೇತ್ರದಿಂದ ಸ್ಪರ್ಧಿಸುವ ಆಕಾಂಕ್ಷಿಗಳಾಗಿದ್ದಾರೆ ಎನ್ನುವುದನ್ನು ಅಧಿಕೃತವಾಗಿ ಬಹಿರಂಗಗೊಂಡಿದೆ. ಇಲ್ಲಿವರೆಗೂ ನಗರ ವಿಧಾನಸಭಾ ಕ್ಷೇತ್ರಕ್ಕೆ ಸರಿಸುಮಾರು ೧೪ ರಿಂದ ೧೬ ಅರ್ಜಿಗಳು ಬಂದಿವೆ. ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಸ್ಪರ್ಧಾಕಾಂಕ್ಷಿಯ ಅರ್ಜಿ ಸಲ್ಲಿಕೆಯಾದ ಕ್ಷೇತ್ರವಾಗಿ ಜಿಲ್ಲಾ ಕೇಂದ್ರದ ನಗರ ವಿಧಾನಸಭಾ ಕ್ಷೇತ್ರ ಗುರುತಿಸಿಕೊಂಡಿದೆ.
೧೪ ರಿಂದ ೧೬ ಅರ್ಜಿಗಳಲ್ಲಿ ಎನ್.ಎಸ್.ಬೋಸರಾಜು, ಸೈಯದ್ ಯಾಸೀನ್, ಬಷೀರುದ್ದೀನ್, ಮುಜೀಬುದ್ದೀನ್, ಅಬ್ದುಲ್ ಕರೀಂ, ಅಸ್ಲಾಂ ಪಾಷಾ, ರಜಾಕ್ ಉಸ್ತಾದ್, ಜಾವೀದ್ ಉಲ್ ಹಕ್, ಸೈಯದ್ ಶಾಲಂ, ಸಾಜೀದ್ ಸಮೀರ್, ಹಟ್ಟಿ ಬಾಬು, ಯಂಕಣ್ಣ ಯಾದವ್, ರವಿ ಬೋಸರಾಜು ಸೇರಿದಂತೆ ಅನೇಕರು ಅರ್ಜಿ ಸಲ್ಲಿಸಿದ ಸ್ಪರ್ಧಾಕಾಂಕ್ಷಿಗಳಾಗಿದ್ದಾರೆ. ಎನ್.ಎಸ್.ಬೋಸರಾಜು ಅವರು ನಗರ ಕ್ಷೇತ್ರದಿಂದ ಸ್ಪರ್ಧಿಸುವುದಕ್ಕೆ ಸಂಬಂಧಿಸಿ ಚರ್ಚೆ ತೀವ್ರವಾಗಿತ್ತು. ಆದರೆ, ಎಲ್ಲಿಯೂ ಸಹ ಅಧಿಕೃತವಾಗಿ ಸ್ಪರ್ಧೆಯ ಬಗ್ಗೆ ಪ್ರಕಟಣೆ ನೀಡಿರಲಿಲ್ಲ.
ಆದರೆ, ಕೆಲ ಸಂದರ್ಭಗಳಲ್ಲಿ ಪಕ್ಷ ಅವಕಾಶ ನೀಡಿದರೆ, ಸ್ಪರ್ಧಿಸುವುದಾಗಿ ಹೇಳಿದ್ದರು. ಕೆಪಿಸಿಸಿಯಿಂದ ಸ್ಪರ್ಧಾಕಾಂಕ್ಷಿಗಳ ಅರ್ಜಿ ಆಹ್ವಾನದ ಹಿನ್ನೆಲೆಯಲ್ಲಿ ಕೊನೆಯ ದಿನವಾದ ನಿನ್ನೆ ಸಂಜೆ ಎನ್.ಎಸ್.ಬೋಸರಾಜು ಮತ್ತು ಅವರ ಪುತ್ರ ರವಿ ಬೋಸರಾಜು ಅವರು ಅರ್ಜಿ ಸಲ್ಲಿಸಿರುವುದು ಈ ಕ್ಷೇತ್ರದಿಂದ ಅವರ ಸ್ಪರ್ಧಿಸುವ ಆಕಾಂಕ್ಷೆ ನಿಶ್ಚಿತಗೊಂಡಿದೆ. ಹೈಕಮಾಂಡ್ ಅರ್ಜಿ ಆಹ್ವಾನದ ನಂತರ ಆಯಾ ಕ್ಷೇತ್ರದ ಆಕಾಂಕ್ಷಿಗಳೊಂದಿಗೆ ಚರ್ಚಿಸಿ, ಟಿಕೆಟ್ ಹಂಚಿಕೆಗೆ ಸಂಬಂಧಿಸಿ ಕ್ರಮ ಕೈಗೊಳ್ಳಲಿದೆ.
ಈ ಮಧ್ಯೆ ಕೆಪಿಸಿಸಿಯಿಂದ ನಡೆದ ಎರಡು ಸಮೀಕ್ಷೆಗಳಲ್ಲಿ ಪಕ್ಷದ ಬಲಾಬಲ ಮತ್ತು ಯಾರು ಅಭ್ಯರ್ಥಿಯಾದರೆ ಪಕ್ಷಕ್ಕೆ ಅನುಕೂಲ ಎನ್ನುವುದನ್ನು ಪರಿಶೀಲಿಸಿ, ಟಿಕೆಟ್ ನಿರ್ಧಾರ ಕೈಗೊಳ್ಳಲಾಗುತ್ತದೆ. ಭಾರತ್ ಜೋಡೋ ಕಾರ್ಯಕ್ರಮದಲ್ಲಿ ನಗರದಲ್ಲಿ ಸುಮಾರು ಲಕ್ಷಾಂತರ ಜನರ ಮೆರವಣಿಗೆ ಮೂಲಕ ದೇಶದಲ್ಲಿಯೇ ದಾಖಲೆ ಬರೆಯಲಾಗಿದೆ. ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಹೈಕಮಾಂಡ್ ಮುಂಬರುವ ಚುನಾವಣೆಯಲ್ಲಿ ಯಾರಿಗೆ ಸ್ಪರ್ಧಿಸುವ ಜವಾಬ್ದಾರಿ ನೀಡಲಿದೆ ಎನ್ನುವ ಕುತೂಹಲ ಈಗ ಪಕ್ಷದಲ್ಲಿ ತೀವ್ರಗೊಂಡಿದೆ.