ನಗರ ರಸ್ತೆಗಳ ಖರ್ಚು-ವೆಚ್ಚ ಆಡಿಟ್

ಬೆಂಗಳೂರು, ಸೆ. ೨೩- ರಾಜಧಾನಿಯ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳಿಂದ ದಿನನಿತ್ಯ ಅನಾಹುತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಇತಿಶ್ರೀ ಹಾಡಲು ಬೆಂಗಳೂರಿನ ಎಲ್ಲ ರಸ್ತೆಗಳ ಸಮಗ್ರ ಆಡಿಟ್ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನ ಪರಿಷತ್ತಿನಲ್ಲಿಂದು ಪ್ರಕಟಿಸಿದ್ದಾರೆ.
ರಸ್ತೆ ಯಾವಾಗ ಆರಂಭವಾಯಿತು, ಅದರ ಯೋಜನಾ ವೆಚ್ಚ ಎಷ್ಟು, ಹೆಚ್ಚುವರಿ ವೆಚ್ಚ ಎಷ್ಟಾಗಿದೆ, ಗುತ್ತಿಗೆ ಪಡೆದವರು ಯಾರು, ನಿರ್ವಹಣೆ ಮಾಡಿದವರು ಯಾರು ಎನ್ನುವುದು ಸೇರಿದಂತೆ ಹಲವು ವಿಷಯಗಳ ಕುರಿತು ರಸ್ತೆ ಆಡಿಟ್ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕಾಂಗ್ರೆಸ್‌ನ ಪಿ.ಆರ್. ರಮೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ರಸ್ತೆ ನಿರ್ಮಾಣದಲ್ಲಿ ಭಾಗಿಯಾಗಿದ್ದ ಇಂಜಿನಿಯರ್‌ಗಳು, ಗುತ್ತಿಗೆದಾರರು ಸೇರಿದಂತೆ ಇತರರ ಹೊಣೆಗೇಡಿತನ ಪತ್ತೆ ಹಚ್ಚಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬೆಂಗಳೂರಿನ ಹದಗೆಟ್ಟ ರಸ್ತೆಗಳ ಬಗ್ಗೆ ಜನಪ್ರತಿನಿಧಿಗಳನ್ನು ಜನರು ದೂಷಿಸುತ್ತಿದ್ದಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ರಸ್ತೆ ಆಡಿಟ್ ನಡೆಸಲು ಮುಂದಾಗಿರುವುದಾಗಿ ಹೇಳಿದರು.
೨೦ ಸಾವಿರ ಕೋಟಿ ಕಾಮಗಾರಿ
೨೦೧೫-೧೬ ರಿಂದ ಇಲ್ಲಿಯವರೆಗೂ ಬಿಬಿಎಂಪಿ ವ್ಯಾಪ್ತಿಯ ೧೯೮ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಎಲ್ಲ ರೀತಿಯ ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಪಾಲಿಕೆ ವತಿಯಿಂದ ೨೦೦೬೦ ಕೋಟಿ ಮೊತ್ತದ ಕಾಮಗಾರಿಗಳಿಗೆ ಆಡಳಿತಾತ್ಮಕ ಮತ್ತು ತಾಂತ್ರಿಕ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.
ಬೆಂಗಳೂರು ಸ್ಮಾರ್ಟ್‌ಸಿಟಿ ಯೋಜನೆಯ ಪ್ರದೇಶಾಧಾರಿತ ಅಭಿವೃದ್ಧಿಯಡಿ ೩೬ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಟೆಂಡರ್‌ಶೂರ್ ಮಾದರಿಯಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಪಾಲಿಕೆ ವ್ಯಾಪ್ತಿಯ ಟೆಂಡರ್‌ಶೂರ್ ಯೋಜನೆಯಡಿ ಸರ್ಕಾರದ ಅನುದಾನದಲ್ಲಿ ೪೬ ರಸ್ತೆಗಳನ್ನು ೪೩೬.೬೦ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಡಾಂಬರೀಕರಣ ಉದ್ದ ೧೧,೨೭೩ ಕಿ.ಮೀ. ಉದ್ದವಿದೆ ಎಂದು ಅವರು ಹೇಳಿದರು.
ವೈಟ್‌ಟಾಪಿಂಗ್, ಮೇಲ್ಸೇತುವೆ, ಕ್ಲಬ್‌ವೇ, ಗ್ರೇಡ್ ಸೆಪರೇಟರ್ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.
ನಗರದ ರಸ್ತೆಗಳಲ್ಲಿ ಗುಂಡಿಗಳು ಬೀಳದಂತೆ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವ ಸಂಬಂಧ ಮಾರ್ಪಾಡು ಮಾಡಬೇಕಾದ ಕುರಿತು ತಾಂತ್ರಿಕ ತಜ್ಞರ ಸಲಹೆಯಂತೆ ಹೆಚ್ಚಿನ ಅಧ್ಯಯನ ಕೈಗೊಂಡು ವರದಿ ತಯಾರಿಸಲಾಗುತ್ತಿದೆ ಎಂದು ಅವರು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಪಿ.ಆರ್.ರಮೇಶ್ ಅವರು, ಬೆಂಗಳೂರಿನಾದ್ಯಂತ ೧ ಕಿ.ಮೀ. ರಸ್ತೆಯಲ್ಲಿ ಗುಂಡಿಗಳು ಇಲ್ಲದಿರುವುದನ್ನು ತೋರಿಸಿ, ಎಲ್ಲ ಕಡೆಗಳಲ್ಲೂ ಗುಂಡಿಗಳು ಬಿದ್ದಿವೆ. ಇದರಿಂದ ದಿನನಿತ್ಯ ಅಪಘಾತ ಪ್ರಕರಣಗಳು ನಡೆಯುತ್ತಿವೆ. ಬಿಬಿಎಂಪಿ ಹಾಗೂ ಸರ್ಕಾರ ಯಾವ ಕ್ರಮ ಕೈಗೊಂಡಿವೆ ಎಂದು ಪ್ರಶ್ನಿಸಿದರು.