
ಜನರಿಗೆ ಅನುಕೂಲವಾಗುವಂತೆ ಸರ್ಕಾರಿ ಲೇಔಟ್‌ಗಳ ನಿರ್ಮಾಣಕ್ಕೆ ಸೂಕ್ತ ಕ್ರಮ ಕೈಗೊಳ್ಳಿ
ರಾಯಚೂರು,ಆ.೦೭-ಖಾಸಗಿ ಲೇಔಟ್‌ಗಳ ನಿರ್ಮಾಣಕ್ಕೆ ಅನುಮತಿ ನೀಡದೇ ಸರ್ಕಾರದಿಂದ ಲೇಔಟ್‌ಗಳನ್ನು ನಿರ್ಮಿಸಿ ಸಾರ್ವಜನಿಕರಿಗೆ ವಸತಿ ನಿವೇಶನಗಳನ್ನು ಕೊಳ್ಳಲು ಅನುಕೂಲವಾಗುವಂತೆ ನಿವೇಶನಗಳನ್ನು ನೀಡಲು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್ ಸುರೇಶ ಅವರು ಅಧಿಕಾರಿಗಳಿಗೆ ಸೂಚನೆ ನಿಡಿದರು.
ಅವರು ಆ.೬ರ(ಭಾನುವಾರ) ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ, ನಗರ ಯೋಜನೆ ಇಲಾಖೆಯಿಂದ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆನರಿಗೆ ಅನುಕೂಲವಾಗುವಂತೆ ಸರ್ಕಾರದಿಂದ ಲೇಔಟ್‌ಗಳನ್ನು ನಿರ್ಮಾಣ ಮಾಡಿ, ಸಾರ್ವಜನಿಕರಿಗೆ ಕಡಿಮೆ ಬೆಲೆಯಲ್ಲಿ ನಿವೇಶನಗಳನ್ನು ನೀಡುವ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಖಾಸಗಿಯವರಿಗೆ ಲೇಔಟ್ ನಿರ್ಮಾಣ ಮಾಡಲು ಅನುಮತಿ ನೀಡದೇ ಮೊದಲು ಸರ್ಕಾರಿ ಲೇಔಟ್‌ಗಳನ್ನು ನಿರ್ಮಾಣ ಮಾಡುವಲ್ಲಿ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.
ನಗರದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಾಣ ಮಾಡಲಾಗುವ ಸ್ವಾಗತ ಕಮಾನು, ಉದ್ಯಾನವನ, ವಿದ್ಯುತ್ ಸ್ಥಂಭ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ಅಚ್ಚುಕಟ್ಟಾಗಿ ಪೂರ್ಣಗೊಳಿಸಬೇಕು. ಜನರ ಅನುಕೂಲಕ್ಕಾಗಿ ನಿರ್ಮಿಸಲಾಗುವ ವಸತಿ ನಿವೇಶನಗಳ ಲೇಔಟ್‌ಗಳಲ್ಲಿ ಕಡ್ಡಾಯವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದರು.
ನಗರದಲ್ಲಿರುವ ಐತಿಹಾಸಿಕ ಮಾವಿನ ಕೆರೆಯ ಅಭಿವೃದ್ಧಿ ಕಾಮಗಾರಿಯ ಕುರಿತು ಪ್ರಸ್ತಾವನೆಯನ್ನು ಸಲ್ಲಿಸಬೇಕು. ಮತ್ತು ಕೆರೆ ಅಭಿವೃದ್ಧಿಯನ್ನು ಉತ್ತಮ ಗುಣಮಟ್ಟದಿಂದ ಪೂರ್ಣಗೊಳಿಸಕು ಎಲಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ತಿಳಿಸಿದರು.
ನಗರ ಹಾಗೂ ನಗರ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳನ್ನು ಕುಡಿಯುವ ನೀರಿನ ಯೋಜನೆಗಳನ್ನು ಪೂರ್ಣ ಪ್ರಮಾಣದಲ್ಲಿ ಹಾಗೂ ಗುಣಮಟ್ಟದಿಂದ ಪೂರ್ನಗೊಳಿಸಬೇಕು. ಒಂದು ವೇಳೆ ಕುಡಿಯುವ ನೀರಿನ ಯೋಜನೆಯಲ್ಲಿ ಯಾವುದೇ ಲೋಪದೋಷಗಳು ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸದರು.
ನಗರದ ಹಲವು ರಸ್ತೆಗಳು ಈಗಾಗಲೇ ಹದಗೆಟ್ಟಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದು, ಕೂಡಲೇ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಬರುವ ರಸ್ತೆಗಳನ್ನು ರಿಪೇರಿ ಮಾಡಿಸಿ ಸಾರ್ವಜನಿಕರ ಸಂಚಾರಕ್ಕೆ ಯಾವುದೇ ರೀತಿಯಿಮದ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ರಾಯಚೂರು ನಗರದ ಐತಿಹಾಸಿಕ ಮಾವಿನ ಕೆರೆಯನ್ನು ಒತ್ತುವರಿ ಮಾಡಿಕೊಂಡಲ್ಲಿ ಒತ್ತುವರಿ ಮಾಡಿಕೊಂಡವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಮರು ಸರ್ವೇ ಮಾಡಿಸಿ ಒತ್ತುವರಿಯಾಗದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ನಗರದಲ್ಲಿ ರಿಂಗ್ ರೋಡ್ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯ ಬದಲಾಗಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಪೂರ್ಣಗೊಳಿಸಲಾಗುವುದು ಮತ್ತು ಅದಕ್ಕೆ ಬೇಕಾದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿಕೊಡಬೇಕು ಮತ್ತು ನಗರಸಭೆಯನ್ನು ಮೇಲ್ದರ್ಜೆಗೇರಿಸಿ ಮಹಾನಗರ ಪಾಲಿಕೆಯನ್ನಾಗಿಸಲು ಕಾನೂನಿನಲ್ಲಿ ಅವಕಾಶಗಳಿದ್ದಲ್ಲಿ ಸರ್ಕಾರದೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್ ಭೋಸರಾಜು, ನಗರ ಶಾಸಕ ಡಾ.ಎಸ್.ಶಿವರಾಜ ಪಾಟೀಲ್, ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ, ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್ ದುರುಗೇಶ, ರಾಯಚೂರು ಸಹಾಯಕ ಆಯುಕ್ತೆ ಮಹಿಬೂಬಿ, ನಗರಸಭೆ ಪ್ರಭಾರ ಪೌರಾಯುಕ್ತ ಮಹ್ಮದ್ ಜಿಲಾನಿ, ನಗರಾಭಿವೃದ್ಧಿ ಪ್ರಾಧಿಕಾರದ ಪ್ರಾಭರ ಆಯುಕ್ತ ಪ್ರಸನ್ನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.