ನಗರ ಬೀದಿ ದೀಪ ನಿರ್ವಹಣೆ ಕರ್ಮಕಾಂಡ : ಉಪ ಗುತ್ತಿಗೆಗೆ ಕಚ್ಚಾಟ – ರಾಜಕೀಯ ಹಸ್ತಕ್ಷೇಪ

೪೦ ದಿನ ಕಳೆದರೂ ಟೆಂಡರ್ ತೆಗೆಯದ ನಗರಸಭೆ ಆಡಳಿತ : ಸದಸ್ಯರಲ್ಲಿ ಆಕ್ರೋಶ – ಕತ್ತಲೆಯಲ್ಲಿ ವಾರ್ಡ್‌ಗಳು
ರಾಯಚೂರು.ಸೆ.೧೯- ಅಭಿವೃದ್ಧಿ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ರಾಜಕೀಯ ಪ್ರಭಾವಕ್ಕೆಡೆಯಾಗಿ ಯಾವುದೇ ಯೋಜನೆಗಳು ಅನುಷ್ಠಾನಗೊಳ್ಳದೆ, ಕಳಪೆ ಕಾಮಗಾರಿ ನಿರ್ವಹಿಸಿ ಹಣ ಎತ್ತುವಳಿ ಮಾಡುವ ಅವ್ಯವಸ್ಥೆಯ ಸಾಲಿನಲ್ಲಿ ಈಗ ಮತ್ತೊಮ್ಮೆ ನಗರಸಭೆ ಬೀದಿ ದೀಪ ನಿರ್ವಹಣೆ ಸುದ್ದಿಯಾಗಿದೆ.
೩೫ ವಾರ್ಡ್‌ಗಳ ೩ ಲಕ್ಷ ಜನ ಸಂಖ್ಯೆ ಹೊಂದಿದ ನಗರದಲ್ಲಿ ವಿದ್ಯುತ್ ನಿರ್ವಹಣೆ ಸಂಪೂರ್ಣ ವಿಫಲವಾಗಿದ್ದರೂ, ಕ್ಯಾರೆ ಎನ್ನದ ಸ್ಥಳೀಯ ಸಂಸ್ಥೆ ಮತ್ತು ಜನಪ್ರತಿನಿಧಿಗಳಿಂದಾಗಿ ಸಾರ್ವಜನಿಕರು ಕತ್ತಲೆಗೆ ಹೊಂದಿಕೊಂಡು ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಖ್ಯ ರಸ್ತೆಗಳಲ್ಲಿ ತಳಕು-ಬಳಕು ಮಿನುಗು ದೀಪಗಳಿದ್ದರೆ, ಬಹುತೇಕ ವಾರ್ಡ್‌ಗಳಲ್ಲಿ ಬೀದಿ ದೀಪಗಳಿಲ್ಲದೆ ನಗರಸಭೆ ಸದಸ್ಯರು ಗೋಳಿಡುವಂತಹ ಪರಿಸ್ಥಿತಿ ಬಂದೊದಗಿದೆ.
ಚೈತನ್ಯ ಎಲೆಕ್ಟ್ರಿಕಲ್ಸ್ ಇವರಿಗೆ ನಗರ ಬೀದಿ ದೀಪ ನಿರ್ವಹಣೆ ನೀಡಲಾಗಿದೆ. ಬೀದಿ ದೀಪ ನಿರ್ವಹಣೆಗೆ ವಾರ್ಷಿಕ ಕನಿಷ್ಟ ಒಂದು ಕೋಟಿ ಹಣ ವೆಚ್ಚ ಮಾಡಲಾಗುತ್ತದೆ. ಆದರೂ, ನಗರದಲ್ಲಿ ಕತ್ತಲೆ ಆವರಿಸಿ, ಜನರು ಅನೇಕ ಸಮಸ್ಯೆ ಎದುಸುವಂತಾಗಿದೆ. ಮತ್ತೊಂದು ಕಡೆ ನಗರಸಭೆ ಬೀದಿ ದೀಪ ನಿರ್ವಹಣೆ ವೈಫಲ್ಯದಿಂದ ಮನೆಗಳ್ಳತನಕ್ಕೆ ಅನುಕೂಲ ಮಾಡಿಕೊಟ್ಟಂತಾಗಿದೆ. ಬೆಂಗಳೂರಿನಲ್ಲಿರುವ ಚೈತನ್ಯ ಎಲೆಕ್ಟ್ರಿಕಲ್ಸ್ ಗುತ್ತೇದಾರರು ನಗರಕ್ಕೆ ಬಾರದಿದ್ದರೂ, ಪ್ರತಿ ತಿಂಗಳು ಬೀದಿ ದೀಪಗಳನ್ನು ನಿರ್ವಹಿಸಿದ್ದರೂ, ಲಕ್ಷಗಟ್ಟಲೆ ಬಿಲ್ ಮಾತ್ರ ಪಾವತಿಸುತ್ತಿರುವುದರಿಂದಿನ ರಾಜಕೀಯ ಮರ್ಮವೇನು? ಎನ್ನುವುದು ಈಗ ಯಕ್ಷ ಪ್ರಶ್ನೆಯಾಗಿದೆ.
ಚೈತನ್ಯ ಎಲೆಕ್ಟ್ರಿಕಲ್ಸ್ ಅವರಿಗೆ ಈಗಾಗಲೇ ಟೆಂಡರ್ ಅವಧಿ ಪೂರ್ಣಗೊಂಡಿದ್ದರಿಂದ ಹೊಸ ಟೆಂಡರ್ ಕರೆದು, ೪೦ ದಿನ ಕಳೆದರೂ, ಇನ್ನೂವರೆಗೂ ಟೆಂಡರ್ ತೆರೆಯಲಾಗದ ರಾಜಕೀಯ ಒತ್ತಡದ ಅಸಹಾಯಕತೆಯಲ್ಲಿ ಅಧಿಕಾರಿಗಳಿದ್ದಾರೆ. ನೂತನ ಟೆಂಡರ್ ಆದೇಶವಾಗುವವರೆಗೂ ಅವಧಿ ವಿಸ್ತರಣೆ ತಂತ್ರದ ಮೇಲೆ ಹಳೆ ಟೆಂಡರ್ ಆಧರಿಸಿ ನಗರದಲ್ಲಿ ಬೀದಿ ದೀಪ ನಿರ್ವಹಿಸದಿದ್ದರೂ, ಬಿಲ್ ಪಾವತಿಸುತ್ತಿರುವುದು ಸಾರ್ವಜನಿಕರ ಹಣ ಲೂಟಿಗೆ ಮತ್ತೊಂದು ನಿದರ್ಶನವಾಗಿದೆ. ತ್ರಿಬಲ್ ಇಂಜನ್ ಆಡಳಿತ ವ್ಯವಸ್ಥೆಯಲ್ಲಿ ನಗರ ಅಭಿವೃದ್ಧಿ ಅದ್ಭುತವಾಗಿ ನಡೆಯಬಹುದೆಂಬ ನಿರೀಕ್ಷೆಯಲ್ಲಿರುವ ಜನ ಈಗ ಬೀದಿ ದೀಪಗಳಿಲ್ಲದೆ ರಾತ್ರಿಯಾದರೇ, ಕತ್ತಲೆಯಲ್ಲಿ ಕಾಲ ಕಳೆಯುವ ದುಸ್ಥಿತಿ ಕಾಣುವಂತಾಗಿದೆ.
ನಗರಸಭೆಯಲ್ಲಿ ಆಡಳಿತದಲ್ಲಿ ಅತಿಯಾದ ರಾಜಕೀಯ ಹಸ್ತಕ್ಷೇಪ ಮತ್ತು ವಿದ್ಯುತ್ ನಿರ್ವಹಣೆಯ ಉಪ ಗುತ್ತಿಗೆಗಾಗಿ ಇಬ್ಬರಿಂದ ಮೂವರು ಸದಸ್ಯರ ಮಧ್ಯೆ ನಡೆಯುತ್ತಿರುವ ಮುಸುಕಿನ ಗುದ್ದಾಟದ ಪರಿಣಾಮ ಬೀದಿ ದೀಪ ಟೆಂಡರ್ ತೆರೆಯಲಾಗದ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾಡಳಿತ, ನಗರಸಭೆ ಮತ್ತು ಎಲ್ಲಾ ಜನಪ್ರತಿನಿಧಿಗಳಿಗೆ ನಗರದ ಬೀದಿ ದೀಪ ನಿರ್ವಹಣೆ ವೈಫಲ್ಯ ಕಾಣುತ್ತಿಲ್ಲವೆ? ಅಥವಾ ಎಲ್ಲಾ ಸರಿಯಿದೆ ಎನ್ನುವ ಜಾಣಕುರುಡತನ ಪ್ರದರ್ಶಿಸಿ, ಜನರು ಕತ್ತಲೆಯಲ್ಲಿ ಬದುಕು ಕಳೆಯುವಂತೆ ಮಾಡಲಾಗುತ್ತಿದೆ.
ಕಳೆದ ಒಂದುವರೆ ವರ್ಷದಿಂದ ವಿದ್ಯುತ್ ಸಮಸ್ಯೆಗೆ ಸಂಬಂಧಿಸಿ ಒಂದಿಲ್ಲೊಂದು ರೀತಿಯಲ್ಲಿ ದೂರುಗಳು ಕೇಳಿ ಬರುತ್ತಿದ್ದರೂ, ಇದನ್ನು ಸಮರ್ಪಕವಾಗಿ ನಿರ್ವಹಿಸುವ ಯಾವುದೇ ವ್ಯವಸ್ಥೆ ನಗರಸಭೆಯಿಂದ ಸಾಧ್ಯವಾಗುತ್ತಿಲ್ಲ. ಸಾರ್ವಜನಿಕರಿಗೆ ಬೆಳಕು ನೀಡುವುದರಲ್ಲೂ ವ್ಯವಹಾರ ಮಾಡುವ ಆಡಳಿತ ವ್ಯವಸ್ಥೆಯಿಂದ ಜನ ರಾತ್ರಿಯಾದರೆ, ಕತ್ತಲೆಯಲ್ಲಿಯೆ ಕಾಲಕಳೆಯುವಂತಾಗಿದೆ. ಕೆಲವೆಡೆ ಅಲ್ಲೊಂದು ಇಲ್ಲೊಂದು ಬೀದಿ ದೀಪಗಳಿದ್ದರೆ, ಇನ್ನೂ ಕೆಲವೆಡೆಯಂತೂ ಬೀದಿ ದೀಪಗಳ ಪರಿಸ್ಥಿತಿ ದಾರುಣವಾಗಿದೆ.
ಕೊಳಚೆ ನಿರ್ಮೂಲನಾ ಪ್ರದೇಶ ನಿವಾಸಿಗಳ ಪರಿಸ್ಥಿತಿ ಮತ್ತಷ್ಟು ದಾರುಣವಾಗಿದೆ. ನಗರಸಭೆ ಸದಸ್ಯರೆ ಬೀದಿ ದೀಪಗಳ ಬಗ್ಗೆ ಭಾರೀ ಅಸಮಾಧಾನ ವ್ಯಕ್ತಪಡಿಸುತ್ತಿದ್ದರೆ, ಸಾರ್ವಜನಿಕರ ಗೋಳು ಕೇಳುವುದು ಯಾರು? ಎನ್ನುವ ಅವ್ಯವಸ್ಥೆಯ ಆಡಳಿತ ನಗರದಲ್ಲಿದೆ. ಪ್ರತಿ ತಿಂಗಳು ಲಕ್ಷಗಟ್ಟಲೆ ಹಣ ವೆಚ್ಚವಾಗುತ್ತಿದೆ ವಿನಃ, ಕಂಬಗಳಿಗೆ ಮಾತ್ರ ದೀಪ ಅಳವಡಿಸುತ್ತಿಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿಯಿದ್ದರೂ, ನಗರಸಭೆ ಚುನಾಯಿತಿ ಸಮಿತಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ.
ಚೈತನ್ಯ ಎಲೆಕ್ಟ್ರಿಕಲ್ಸ್‌ಗೆ ಟೆಂಡರ್ ಅವಧಿ ಮುಗಿದಿದ್ದರಿಂದ ಹೊಸ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ೪೦ ದಿನಗಳು ಕಳೆದರೂ, ಉಪ ಗುತ್ತಿಗೆ ಕಲಹದಲ್ಲಿ ಟೆಂಡರ್ ತೆರೆಯದೆ, ನೆನೆಗುದಿಗಿಟ್ಟು, ಕಾನೂನು ಬಾಹೀರವಾಗಿ ಇಂದಿನ ಟೆಂಡರ್ ಆಧರಿಸಿ, ಬಿಲ್ ಮಾಡುವ ಅಪರೂಪದ ಆಡಳಿತ ನಗರದಲ್ಲಿ ಮಾತ್ರ ಕಾಣಲು ಸಾಧ್ಯವಾಗಿದ್ದು, ಗ್ರೇಡ್-೧ ನಗರಸಭೆಯ ಬೀದಿ ದೀಪ ನಿರ್ವಹಣೆಯ ಮಾದರಿ ಆಡಳಿತಕ್ಕೆ ಜನ ಬೇಸತ್ತು ಹೋಗುವಂತಾಗಿದೆ.