ನಗರ ಜನಸಂದಣೆ ಪ್ರದೇಶಗಳ ಬಂದ್

ಬೆಂಗಳೂರು, ಏ.೬- ಕೊರೊನಾ ಸೋಂಕಿನ ಎರಡನೇ ಅಲೆ ಬೆಂಗಳೂರಿನಲ್ಲಿ ಮಿತಿ ಮೀರಿ ಹರಡುತ್ತಿರುವ ಹಿನ್ನೆಲೆ ಜನದಟ್ಟಣೆ ಪ್ರದೇಶಗಳನ್ನು ಹಂತ ಹಂತವಾಗಿ ಬಂದ್ ಮಾಡಿ, ಹೊರಭಾಗದಿಂದ ಬರುವ ಪ್ರವಾಸಿಗರನ್ನು ಮನೆಯಲ್ಲಿಯೇ ಕ್ವಾರಂಟೈನ್ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು.
ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಕೋವಿಡ್ ಕುರಿತು ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಬೆಂಗಳೂರಿಗೆ ಯಾವುದೇ ಮೂಲೆಯಿಂದ ಆಗಮಿಸುವ ಪ್ರವಾಸಿ, ಪ್ರಯಾಣಿಕರು ಕಡ್ಡಾಯವಾಗಿ ಮನೆಯಲ್ಲಿಯೇ ಇದ್ದು, ಕೊರೋನಾ ಸೋಂಕಿನ ಪರೀಕ್ಷೆಗೆ ಒಳಪಟ್ಟು ನೆಗಟಿವ್ ಬಂದರೆ ಮಾತ್ರ, ಸಾಮಾನ್ಯ ಜನರೊಂದಿಗೆ ಬೆರೆಯಲು ಅವಕಾಶ ಕಲ್ಪಿಸುವ ಪ್ರಮುಖ ಪ್ರಸ್ತಾವನೆ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದು,ಅನುಮತಿ ಸಿಕ್ಕರೆ ಇದು ನಾಳೆಯಿಂದಲೇ ಜಾರಿಯಾಗಲಿದೆ ಎಂದರು.
ಇನ್ನು, ಜನದಟ್ಟಣೆ ಪ್ರದೇಶಗಳಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆ ಮಾಡುತ್ತಿಲ್ಲ ಎನ್ನುವ ದೂರುಗಳು ಕೇಳಿಬಂದಿವೆ. ಹಾಗಾಗಿ, ಇದನ್ನು ಪಾಲಿಕೆ ಗಂಭೀರವಾಗಿ ಪರಿಗಣಿಸಿದ್ದು, ಕೊರೊನಾ ನಿಯಮಾವಳಿ ಉಲ್ಲಂಘಿಸಿದರೆ, ಈ ಪ್ರದೇಶವನ್ನು ಬಂದ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
೨೦ ರಷ್ಟು ಹಾಸಿಗೆ: ದಿನೇ ದಿನೇ ಕೊರೊನಾ ಸೋಂಕಿನ ರೋಗಿಗಳ ಸಂಖ್ಯೆ ಅಧಿಕವಾಗಿರುವ ಕಾರಣದಿಂದಾಗಿ ಕಡ್ಡಾಯವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ೨೦ರಷ್ಟು ಹಾಸಿಗೆ ಮೀಸಲಿಡಬೇಕೆಂದು ಸೂಚಿಸಲಾಗಿದೆ. ಜತೆಗೆ, ರೋಗಿಗಳಿಗೆ ಹಾಸಿಗೆ ಕುರಿತು ಸಂಕ್ಷಿಪ್ತ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಆಯುಕ್ತರು ತಿಳಿಸಿದರು.
ಪ್ರಮುಖವಾಗಿ ಆಯಾ ವಲಯವಾರು ವ್ಯಾಪ್ತಿಯಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಿ ಕನಿಷ್ಟ ಐವತ್ತು ಹಾಸಿಗೆ ಆದರೂ ಗುರುತು ಮಾಡಬೇಕು ಎಂದು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದ ಅವರು, ಲಸಿಕೆ ನೀಡುವಿಕೆ ಪ್ರಮಾಣ ದುಪ್ಪಟ್ಟು ಮಾಡಬೇಕು. ಈ ನಿಟ್ಟಿನಲ್ಲಿ ಸ್ಥಳೀಯ ಆಶಾ ಕಾರ್ಯಕರ್ತೆಯರಿಗೆ ಗುರಿ ನೀಡಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.
ಎಲ್ಲಿ ಕೊರೊನಾ ಸೋಂಕು ಪ್ರಮಾಣ ಹೆಚ್ಚಳವಾಗಿಯೋ ಅಲ್ಲಿ ಕಡ್ಡಾಯವಾಗಿ ಪರೀಕ್ಷೆಯ ಪ್ರಮಾಣ ಹೆಚ್ಚಾಳ ಮಾಡಬೇಕು. ಅದೇ ರೀತಿಯಲ್ಲಿ, ಮೈಕ್ರೋ ಪರೀಕ್ಷೆ ಪ್ರಕ್ರಿಯೆಗೆ ಚಾಲನೆ ನೀಡಿಯೂ, ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಬೇಕು ಎಂದು ಅವರು ಗೌರವ್ ಗುಪ್ತ ತಿಳಿಸಿದರು.
ಸಭೆಯಲ್ಲಿ ಪಾಲಿಕೆ ವಿಶೇಷ ಆಯುಕ್ತರು(ಆರೋಗ್ಯ) ರಾಜೇಂದ್ರ ಚೋಳನ್, ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜೇಂದ್ರ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.