
ಬೆಂಗಳೂರು, ಮಾ.,10 – ಮತದಾನದ ಬಗ್ಗೆ ಜನರಲ್ಲಿ ಅದರಲ್ಲೂ ಮುಖ್ಯವಾಗಿ ನಗರ ಮತ್ತು ಯುವ ಜನತೆಯಲ್ಲಿರುವ ನಿರಾಸಕ್ತಿ ಹೋಗಲಾಡಿಸುವುದು ಚುನಾವಣಾ ಆಯೋಗದ ಪ್ರಮುಖ ಸವಾಲಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
ಅದರಲ್ಲೂ, ಜನರು ಮತದಾನದಲ್ಲಿ ಪಾಲ್ಗೊಳ್ಳದೇ ಇರುವ ನಿರ್ಧಾರ ಕೈಗೊಳ್ಳುವ ನಿಟ್ಟಿನಲ್ಲಿ ಇರುವ ಕಾರಣಗಳು, ನಂಬಿಕೆಗಳು, ಅಡೆತಡೆಗಳು, ಸವಾಲುಗಳನ್ನ ಅರ್ಥ ಮಾಡಿಕೊಳ್ಳುವುದು ಬಹಳ ಕ್ಲಿಷ್ಟಕರವಾಗಿದೆ ಎಂದಿದ್ದಾರೆ.
ಮತದಾರರ ಹೆಸರು ಪರಿಶೀಲನೆ, ಮತದಾನ ಜಾಗೃತಿ ಸೇರಿದಂತೆ ಮುಂತಾದ ಮಾಹಿತಿಗಳನ್ನು ಒದಗಿಸುವ 8 ಎಲ್‌ಇಡಿ ಮೊಬೈಲ್ ವ್ಯಾನ್‌ಗಳಿಗೆ ಚಾಲನೆ, ಹಾಗೂ ಕರ್ನಾಟಕ ರಾಜ್ಯ ಚುನಾವಣೆಯ ಇತಿಹಾಸ ಮತ್ತು ಮತದಾನ ಜಾಗೃತಿ ಕುರಿತು ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು
ಮತದಾರರಲ್ಲಿರುವ ನಿರಾಸಕ್ತಿಯ ಮತದಾರರಲ್ಲಿ ಒಂದು ಮತದಿಂದ ಆಗಬಹುದಾದ ಕ್ರಾಂತಿಕಾರಿ ಬದಲಾವಣೆಯ ಬಗ್ಗೆ ಅರಿವನ್ನು ಮೂಡಿಸಲು ಸಾಧ್ಯವೇ ಸಾಂಘಿಕವಾದ ಪ್ರಯತ್ನದಿಂದ ಮಾತ್ರ ಇದು ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.
ಈ ನಿಟ್ಟಿನಲ್ಲಿ, ನಿರಾಸಕ್ತಿಯ ಮತದಾರರನ್ನ ಬದಲಾಯಿಸುವುದು ಬಹಳಷ್ಟು ಸಮಯ ತಗೆದುಕೊಳ್ಳುತ್ತದೆ. ಪ್ರಜಾಪ್ರಭುತ್ವದ ಹಬ್ಬವಾಗಿರುವ ಮತದಾನದಲ್ಲಿ ಜನರು ಹಬ್ಬಗಳಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುವಂತೆ ಇದರಲ್ಲೂ ಆಸಕ್ತಿಯನ್ನು ತೋರುವಂತೆ ಮಾಡಬೇಕಾಗಿದೆ. ಇಂದಿನ ಯುವ ಜನತೆ ತಮ್ಮ ಒಂದು ಮತದಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಎನ್ನುವ ತಪ್ಪು ತಿಳುವಳಿಕೆಯಲ್ಲಿದ್ದಾರೆ. ಇದನ್ನ ಹೋಗಲಾಡಿಸುವ ದೊಡ್ಡ ಸವಾಲು ನಮ್ಮ ಎದುರಿಗಿದೆ ಎಂದರು
ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ ಮೀನಾ, ಅಪರ ಮುಖ್ಯ ಚುನಾವಣಾಧಿಕಾರಿಗಳಾದ ಎಂ.ವೆಂಕಟೇಶ್ ಕುಮಾರ್, ರಾಜೇಂದ್ರ ಚೋಳನ್, ಭಾರತ ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳು ಸೇರಿದಂತೆ ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು
ಸನ್ಮಾನ
ಅತೀ ಹೆಚ್ಚು ಬಾರಿ ಮತದಾನ ಮಾಡಿದ ಹಿರಿಯ ಮತ್ತು ತೃತೀಯ ಲಿಂಗಿ ಮತದಾರರನ್ನು ಸನ್ಮಾನಿಸಲಾಯಿತು. ಯುವ ಮತದಾರರಿಗೆ ಮತದಾನ ಹಕ್ಕು, ತಿಳುವಳಿಕೆ ನೀಡುವ ಮೂಲಕ ಮತದಾರ ಚೀಟಿ ವಿತರಿಸಲಾಯಿತು. ವಿಶೇಷ ಚೇತನರು ಹಾಗೂ ಆದಿವಾಸಿ ಸಮುದಾಯದ ಜನತೆಗೆ ಮತದಾನಕ್ಕೆ ಉತ್ತೇಜಿಸಲಾಯಿತು.
ಈ ವೇಳೆ ಪದ್ಮಶ್ರೀ ಪುರಸ್ಕೃತೆ ಜೋಗುತಿ ಮಂಜಮ್ಮ ಹಾಗೂ ತಮಟೆ ವಾದಕ ಮುನಿವೆಂಕಟಪ್ಪ ಅವರನ್ನು ಅಭಿನಂದಿಸಲಾಯಿತು.